ADVERTISEMENT

ಮಹದೇಶ್ವರ ಬೆಟ್ಟ| ಗೋಪಿನಾಥಂನಲ್ಲಿ ಕೋವಿಡ್‌–19 ಹರಡಂತೆ ಊರಿಗೆ ತೀರ್ಥ ಪ್ರೋಕ್ಷಣೆ

ಗೋಪಿನಾಥಂನಲ್ಲಿ ಮಾರಿಯಮ್ಮನ್‌ ದೇವಸ್ಥಾನದಲ್ಲಿ ವಿಶೇಷ ಪೂಜೆ, ಜನರ ನಂಬಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 16:57 IST
Last Updated 6 ಜುಲೈ 2020, 16:57 IST
ಗ್ರಾಮದಲ್ಲಿ ಪ್ರೋಕ್ಷಣೆಗಾಗಿ ಕೊಡಪಾನದಲ್ಲಿ ತೀರ್ಥವನ್ನು ಹೊತ್ತುಕೊಂಡು ಹೋಗುತ್ತಿರುವ ಅರ್ಚಕ (ವಿಡಿಯೊ ಚಿತ್ರ)
ಗ್ರಾಮದಲ್ಲಿ ಪ್ರೋಕ್ಷಣೆಗಾಗಿ ಕೊಡಪಾನದಲ್ಲಿ ತೀರ್ಥವನ್ನು ಹೊತ್ತುಕೊಂಡು ಹೋಗುತ್ತಿರುವ ಅರ್ಚಕ (ವಿಡಿಯೊ ಚಿತ್ರ)   

ಮಹದೇಶ್ವರ ಬೆಟ್ಟ: ಜಿಲ್ಲೆಯನ್ನೂ ಕಾಡುತ್ತಿರುವ ಕೋವಿಡ್‌–19 ತಮ್ಮ ಗ್ರಾಮದಲ್ಲಿ ಹರಡಬಾರದು ಎಂಬ ಕಾರಣಕ್ಕೆ ಇಲ್ಲಿಗೆ ಸಮೀಪದ ಗೋಪಿನಾಥಂನಲ್ಲಿ ಇಡೀ ಊರಿಗೆ ಮಾರಿಯಮ್ಮನ ತೀರ್ಥವನ್ನು ಪ್ರೋಕ್ಷಣೆ ಮಾಡಲಾಗಿದೆ.

ಶನಿವಾರ ಈ ಆಚರಣೆ ನಡೆದಿದೆ. ಕಾಡುಗಳ್ಳ ವೀರಪ್ಪನ್‌ ಹುಟ್ಟೂರಾಗಿರುವ ಗೋಪಿನಾಥಂ ಗ್ರಾಮದಲ್ಲಿರುವ ಮಾರಿಯಮ್ಮನ್ ದೇವಾಲಯದಲ್ಲಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ್ದು, ಆ ಬಳಿಕ ತೀರ್ಥವನ್ನು ಪ್ರೋಕ್ಷಣೆ ಮಾಡಲಾಗಿದೆ.

ಅರ್ಚಕ ಸುಬ್ರಹ್ಮಣ್ಯ ಅವರು ದೇವಾಲಯವನ್ನು ಶುದ್ಧೀಕರಿಸಿ ಮಾರಿಮ್ಮನಿಗೆ ವಿಶೇಷ ಪೂಜೆ ನಡೆಸಿದ್ದಾರೆ. ಅವರ ಮೈಮೇಲೆ ದೇವಿ ಆವಾಹನೆಯಾಗಿ, ತೀರ್ಥ ಪ್ರೋಕ್ಷಣೆ ಮಾಡಿದರೆ ಕೋವಿಡ್‌ –19 ಬರುವುದಿಲ್ಲ ಎಂಬ ಅಭಯವನ್ನು ದೇವಿ ನೀಡಿದ್ದಾಳೆ ಎಂಬುದು ಗ್ರಾಮಸ್ಥರ ಮಾತು.

ADVERTISEMENT

ಈ ಹಿಂದೆಯೂ ಗ್ರಾಮದಲ್ಲಿ ಕೋವಿಡ್‌–19 ಬಾರದಂತೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು.

ಅರ್ಚಕ ಸುಬ್ರಹ್ಮಣ್ಯ ಅವರು ಇಡೀ ಗ್ರಾಮದಲ್ಲಿ ಸುತ್ತಾಡಿ, ಎಲ್ಲ ಕಡೆಯೂ ತೀರ್ಥವನ್ನು ಪ್ರೋಕ್ಷಣೆ ಮಾಡಿದ್ದಾರೆ. ಗೋಪಿನಾಥಂ ವ್ಯಾಪ್ತಿಗೆ ಒಳಪಡುವ ಮಾರಿಕೊಟ್ಟಾಯಿ, ಆತ್ತೂರು ಆಲಾಂಭಾಡಿ ಪುದೂರಿನ ಗ್ರಾಮಸ್ಥರು ತೀರ್ಥ ಪ್ರಸಾದವನ್ನು ಪಡೆದು ತಮ್ಮ ಗ್ರಾಮಗಳಿಗೆ ತೆರಳಿ ಅದನ್ನು ಎಲ್ಲ ಕಡೆಯೂ ಪ್ರೋಕ್ಷಣೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಗ್ರಾಮಸ್ಥ ನಾಗರಾಜು ಅವರು, ‘ತಮಿಳುನಾಡಿಗೆ ಹೊಂದಿಕೊಂಡಂತಿರುವ ನಮ್ಮ ಗ್ರಾಮದಲ್ಲಿ ಇದುವರೆವಿಗೆ ಸೋಂಕು ಕಂಡು ಬಂದಿಲ್ಲ. ಅಲ್ಲದೆ ಲಾಕ್‌ಡೌನ್‌ ಸಡಿಲಿಕೆಯಾದ ನಂತರ ಗ್ರಾಮಸ್ಥರು ತಮಿಳುನಾಡಿನೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದರು. ತಮಿಳುನಾಡಿನಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದರೂ ನಮ್ಮ ಗ್ರಾಮ ಪ್ರವೇಶಿಸಿಲ್ಲ. ಮಾರಿಯಮ್ಮನ್‌ ದೇವಿ ನಮ್ಮ ಗ್ರಾಮವನ್ನು ಕಾಪಾಡುತ್ತಾಳೆ ಎಂಬ ನಂಬಿಕೆ ನಮ್ಮದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.