ADVERTISEMENT

ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ಯುವಕ

ಹಂಗಳ; ದಿನಕ್ಕೆ 40 ಲೀಟರ್‌ಗಳಷ್ಟು ಹಾಲು ಮಾರಾಟ, ಚಿಕ್ಕ ಜಮೀನಿನಲ್ಲಿ ವ್ಯವಸಾಯ

ಮಲ್ಲೇಶ ಎಂ.
Published 24 ಮಾರ್ಚ್ 2022, 19:31 IST
Last Updated 24 ಮಾರ್ಚ್ 2022, 19:31 IST
ಮಂಜು ಅವರು ಸಾಕುತ್ತಿರುವ ಎಚ್‌ಎಫ್‌ ತಳಿಯ ಹಸು
ಮಂಜು ಅವರು ಸಾಕುತ್ತಿರುವ ಎಚ್‌ಎಫ್‌ ತಳಿಯ ಹಸು   

ಗುಂಡ್ಲುಪೇಟೆ: ಗ್ರಾಮೀಣ ಪ್ರದೇಶಗಳ ವಿದ್ಯಾವಂತ ಪದವೀಧರರು ಕೆಲಸ ಹುಡುಕುತ್ತಾ ನಗರ ಪ್ರದೇಶಗಳತ್ತ ಹೋಗುತ್ತಿರುವ ಸಂದರ್ಭದಲ್ಲಿ, 7ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಯುವಕನೊಬ್ಬ ಹೈನುಗಾರಿಕೆಯಲ್ಲಿ ಯಶಸ್ಸುಗಳಿಸಿದ್ದಾರೆ.

ತಾಲ್ಲೂಕಿನ ಹಂಗಳ ಗ್ರಾಮದ ಯುವಕ ಜಿ.ಮಂಜು ಎಂಬುವರು ಜೆರ್ಸಿ ಮತ್ತು ಎಚ್.ಎಫ್‌ ತಳಿಯ ಹಸುಗಳನ್ನು ಸಾಕಿ ಮಾಡಿ ಪ್ರತಿದಿನ 35 ರಿಂದ 40 ಲೀಟರ್‌ಗಳಷ್ಟು ಹಾಲನ್ನು ಡೇರಿಗೆ ಹಾಕುತ್ತಿದ್ದಾರೆ. ಆ ಮೂಲಕ ಶ್ರದ್ಧೆಯಿಂದ ಹೈನುಗಾರಿಕೆ ಮಾಡಿದರೆ ಉತ್ತಮ ಸಂಪಾದನೆ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ.

ತಮ್ಮ 38 ಗುಂಟೆ ಜಮೀನಿನಲ್ಲಿ ಹಸುಗಳಿಗೆ ಬೇಕಾದ ಹುಲ್ಲು, ಮುಸುಕಿನ ಜೋಳ ಬೆಳೆಯುತ್ತ ಹೈನುಗಾರಿಕೆ ಮಾಡುತ್ತಿದ್ದಾರೆ.

ADVERTISEMENT

ಮಂಜು ಅವರು ನಾಲ್ಕೈದು ವರ್ಷಗಳಿಂದ ಹಸುಗಳ ಸಾಕಣೆ ಮಾಡುತ್ತಿದ್ದಾರೆ. ಅದಕ್ಕೂ ಮೊದಲು ತಮ್ಮ ಜಮೀನಿನಲ್ಲಿ ಮತ್ತು ಅಣ್ಣಂದಿರ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದರು. ಅಕಾಲಿಕ ಮಳೆ, ಹವಾಮಾನ ಬದಲಾವಣೆ ಮತ್ತು ಬೆಲೆ ಸಿಗದ ಕಾರಣ ಹೈನುಗಾರಿಕೆಗೆ ತೊಡಗಿಸಿಕೊಂಡರು. ಒಂದು ಹಸುವಿನಿಂದ ಆರಂಭವಾಗಿ, ಈಗ ಐದು ಹಸುಗಳಿಗೆ ಬಂದು ನಿಂತಿದೆ.

‘ಸದ್ಯ ಮೂರು ಹಸುಗಳು ಹಾಲು ಕರೆಯುತ್ತವೆ.ಎರಡು ಗರ್ಭ ಧರಿಸಿವೆ. ಅವುಗಳು ಕರು ಹಾಕಿದರೆ ಇನ್ನೂ ಹಾಲು ಹೆಚ್ಚಾಗುತ್ತದೆ’ ಎಂದು ಹೇಳುತ್ತಾರೆ ಮಂಜು.

‘ಹುಲ್ಲು ಮತ್ತು ಮುಸುಕಿನ ಜೋಳ ಹಾಕಿದರೆ ಹಸುಗಳು ಹಾಲು ನೀಡುವುದಿಲ್ಲ. ಅಚುಗಳಿಗೆ ಪಶು ಆಹಾರಗಳು ನೀಡಬೇಕು. ಡೇರಿ ಹಾಗೂ ಅಂಗಡಿಗಳಲ್ಲಿ ಖರೀದಿ ಮಾಡುತ್ತೇನೆ. ಪ್ರತಿ ತಿಂಗಳು ಡೇರಿಯಿಂದ ಎಂಟು ಮೂಟೆ ಖರೀದಿಸುತ್ತೇನೆ. ಹಸುಗಳಿಗೆ ಎಷ್ಟು ಖರ್ಚು ಮಾಡಿದರೂ ಆದಾಯ ಬರುತ್ತದೆ’ ಎಂದರು.

ಹಸುಗಳಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆದರೆ ಹಂಗಳದ ಪಶು ವೈದ್ಯ ಡಾ.ಗುರುಸ್ವಾಮಿ ಅವರು ತಕ್ಷಣ ಸ್ಪಂದಿಸುತ್ತಾರೆ. ಮನೆಯಲ್ಲಿ ಸಣ್ಣ ಮಕ್ಕಳು ಇರುವುದರಿಂದ ಮಡದಿ ಮಕ್ಕಳಿಗೆ ಸಮಯ ನೀಡುವುದೇ ಆಗುತ್ತದೆ. ಹೈನುಗಾರಿಕೆ ಮತ್ತು ಕೃಷಿ ಕೆಲಸವನ್ನು ಒಬ್ಬನೇ ಮಾಡಬೇಕು ಎಂದು ಸಮಸ್ಯೆಯನ್ನು ಹೇಳಿದರು.

ಹೆಚ್ಚಿನ ಬೆಲೆ ಸಿಗಬೇಕು

ಬೇರೆ ಕಡೆಗಳಲ್ಲಿ ಹಾಲಿಗೆ ಲೀಟರ್‌ಗೆ ₹28 ರೂಪಾಯಿ ನೀಡುತ್ತಾರೆ. ಚಾಮುಲ್‌ನಲ್ಲಿ ₹24 (ಪ್ರೋತ್ಸಾಹ ಧನ ಬಿಟ್ಟು) ನೀಡುತ್ತಾರೆ. ನಾವು ಕೊಡುವ ಹಾಲಿಗೆ ಬೆಲೆ ಹೆಚ್ಚಾದರೆ, ಆದಾಯವೂ ಹೆಚ್ಚಾಗುತ್ತದೆ’ ಎಂದು ಹೇಳುತ್ತಾರೆ ಮಂಜು.

‘ಯುವಕರು ಉದ್ಯೋಗ ಇಲ್ಲ ಎಂದು ಸುಮ್ಮನೆ ಕೂರುವ ಬದಲು ಹೈನುಗಾರಿಕೆಯಲ್ಲಿ ತೊಡಗಿದರೆ ಉದ್ಯೋಗದಿಂದ ಬರುವ ಸಂಬಳಕ್ಕಿಂತ ಹೆಚ್ಚೇ ಸಂಪಾದಿಸಬಹುದು‌’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.