ADVERTISEMENT

ರಾಮಾಪುರ ಡೇರಿ: ಖಾತೆಗೆ ಹಣ ಹಾಕಲು ತಾಕೀತು

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 16:27 IST
Last Updated 27 ಜುಲೈ 2021, 16:27 IST
ಹನೂರು ತಾಲ್ಲೂಕಿನ ರಾಮಾಪುರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸೋಮವಾರದಿಂದ ಹೈನುಗಾರರಿಗೆ ಕಂಪ್ಯೂಟರ್‌ ರಸೀದಿ ನೀಡಲಾಗುತ್ತಿದೆ
ಹನೂರು ತಾಲ್ಲೂಕಿನ ರಾಮಾಪುರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸೋಮವಾರದಿಂದ ಹೈನುಗಾರರಿಗೆ ಕಂಪ್ಯೂಟರ್‌ ರಸೀದಿ ನೀಡಲಾಗುತ್ತಿದೆ   

ಹನೂರು: ಹಾಲು ಹಾಕಿದ ಹೈನುಗಾರರಿಗೆ ಕಂಪ್ಯೂಟರ್‌ ರಸೀದಿ ಕೊಡದ, ಹಾಲಿನ ಹಣವನ್ನು ಖಾತೆಗೆ ಹಾಕದ ತಾಲ್ಲೂಕಿನ ರಾಮಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಗೆ ಜಿಲ್ಲಾ ಹಾಲು ಒಕ್ಕೂಟದ (ಚಾಮುಲ್‌) ಅಧಿಕಾರಿಯೊಬ್ಬರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಾಮುಲ್‌ನ ವಿಸ್ತರಣಾಧಿಕಾರಿ ವೆಂಕಟೇಶ್‌ ರಾಮಾಪುರಕ್ಕೆ ಭೇಟಿ ನೀಡಿದ್ದು, ಎಲ್ಲ ಉತ್ಪಾದಕರಿಗೂ ಹಾಲಿನ ಹಣವನ್ನು ಖಾತೆಗೆ ಜಮೆ ಮಾಡಲು ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಸಂಘದ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಮಧ್ಯೆ, ಸೋಮವಾರದಿಂದಲೇ ಹೈನುಗಾರರಿಗೆ ಹಾಲಿನ ವಿವರಗಳನ್ನೊಳಗೊಂಡ ಕಂಪ್ಯೂಟರ್‌ ರಸೀದಿ ನೀಡಲಾಗುತ್ತಿದೆ.

ADVERTISEMENT

ರಾಮಾಪುರದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಉತ್ಪಾದಕರಿಗೆ ಕಂಪ್ಯೂಟರ್ ರಸೀದಿ ನೀಡದಿರುವ ಬಗ್ಗೆ ಹಾಗೂ ಖಾತೆಗೆ ಹಣ ಹಾಕದಿರುವ ಬಗ್ಗೆ ‘ಪ್ರಜಾವಾಣಿ’ಯ ಜುಲೈ 25ರ (ಭಾನುವಾರ) ಸಂಚಿಕೆಯಲ್ಲಿ ‘ಕಂಪ್ಯೂಟರ್ ರಸೀದಿ ಇಲ್ಲ, ಖಾತೆಗೆ ಹಣ ಬರುವುದಿಲ್ಲ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದರ ನಂತರ ಚಾಮುಲ್ ವಿಸ್ತರಣಾಧಿಕಾರಿ ಅವರು ಸಂಘಕ್ಕೆ ಭೇಟಿ ನೀಡಿ ಅಲ್ಲಿಬ ವಾಸ್ತವ ಸ್ಥಿತಿಯನ್ನು ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವೆಂಕಟೇಶ್‌ ಅವರು, ‘ಪ್ರಿಂಟರ್‌ ಸಮಸ್ಯೆಯಿಂದಾಗಿ ಕಂಪ್ಯೂಟರ್‌ ಮುದ್ರಿತ ರಸೀದಿ ನೀಡುತ್ತಿರಲಿಲ್ಲ. ಈಗ ಅದನ್ನು ಸರಿ ಪಡಿಸಿ, ರಸೀದಿ ನೀಡಲಾಗುತ್ತಿದೆ. ಹಾಲು ಉತ್ಪಾದಕರ ಖಾತೆಗಳು ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಇದ್ದುದರಿಂದ ಸಮಸ್ಯೆಯಾಗಿತ್ತು. ಇದನ್ನು ಸರಿಪಡಿಸಿಕೊಳ್ಳುವಂತೆ ಸಾಕಷ್ಟು ಬಾರಿ ಸುತ್ತೋಲೆ ಕಳುಹಿಸಲಾಗಿತ್ತು. ಸಂಘದ ಪದಾಧಿಕಾರಿಗಳು ಇದನ್ನು ನಿರ್ಲಕ್ಷಿಸಿದ್ದರು. ಕೂಡಲೇ ಸಭೆ ನಡೆಸಿ ವಾರದೊಳಗೆ ಉತ್ಪಾದಕರ ಖಾತೆಗೆ ಹಣ ಹಾಕುವಂತೆ ಆದೇಶಿಸಲಾಗಿದೆ’ ಎಂದು ಹೇಳಿದರು.

ಉತ್ಪದಾಕರಿಗೂ ಸೂಚನೆ: ‘ಉತ್ಪಾದಕರು ನೀಡುತ್ತಿರುವ ಹಾಲಿನ ಗುಣಮಟ್ಟ ಕಡಿಮೆಯಾಗಿದ್ದರಿಂದ ಕೆಲವರ ಹಾಲನ್ನು ವಾಪಸ್‌ ಕಳುಹಿಸಲಾಗಿದೆ. ಈ ಬಗ್ಗೆ ಉತ್ಪಾದಕರಿಗೂ ಮನವರಿಕೆ ಮಾಡಿಕೊಡಲಾಗಿದೆ. ರೈತರು ನೀಡುವ ಹಾಲಿನ ಗುಣಮಟ್ಟ ಶೇ 8.5 ಎಸ್ಎನ್ಎಫ್ ಮಟ್ಟಕ್ಕಿಂತ ಮೇಲಿರಬೇಕು. ಇದಕ್ಕಿಂತ ಕಡಿಮೆ ಇದ್ದರೆ ಸಹಕಾರ ಸಂಘಕ್ಕೆ ಸರ್ಕಾರದಿಂದ ಬರುವ ಪ್ರೋತ್ಸಾಹ ಧನ ಬರುವುದಿಲ್ಲ ಎಂದು ಉತ್ಪಾದಕರಿಗೆ ತಿಳಿಸಿಕೊಡಲಾಗಿದೆ’ ಎಂದು ಅವರು ಹೇಳಿದರು. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.