ADVERTISEMENT

ಕ್ವಾರಿ ದುರಂತ: ಇನ್ನೂ ಪತ್ತೆಯಾದ 2ನೇ ಆರೋಪಿ

ಘಟನೆಯ ಮಾರನೇ ದಿನ ಗುಂಡ್ಲುಪೇಟೆಯಲ್ಲಿದ್ದ ಹಕೀಬ್‌; ಬಂಧಿಸಲು ವಿಫಲರಾದರೇ ಪೊಲೀಸರು?

ಮಲ್ಲೇಶ ಎಂ.
Published 22 ಮೇ 2022, 3:02 IST
Last Updated 22 ಮೇ 2022, 3:02 IST
ಗುಂಡ್ಲುಪೇಟೆಯ ಮಡಹಳ್ಳಿಯಲ್ಲಿ ದುರಂತ ಸಂಭವಿಸಿದ್ದ ಬಿಳಿಕಲ್ಲು ಕ್ವಾರಿ
ಗುಂಡ್ಲುಪೇಟೆಯ ಮಡಹಳ್ಳಿಯಲ್ಲಿ ದುರಂತ ಸಂಭವಿಸಿದ್ದ ಬಿಳಿಕಲ್ಲು ಕ್ವಾರಿ   

ಗುಂಡ್ಲುಪೇಟೆ: ತಾಲ್ಲೂಕಿನ ಮಡಹಳ್ಳಿಯಲ್ಲಿ ಬಿಳಿ ಕಲ್ಲು ಕ್ವಾರಿ ಗುಡ್ಡ ಕುಸಿದು ಎರಡೂವರೆ ತಿಂಗಳು ಕಳೆದರೂ ಪ್ರಕರಣದ ಎರಡನೇ ಆರೋಪಿ ಹಕೀಬ್‌ ಅವರ ಬಂಧನವಾಗಿಲ್ಲ. ಅವರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಮಾಡುವುದಕ್ಕೆ ಪೊಲೀಸರಿಗೆ ಸಾಧ್ಯವಾಗಿಲ್ಲ.

ಮಾರ್ಚ್‌ 4ರಂದು ಮಡಹಳ್ಳಿ ಕ್ವಾರಿಯ ಗುಡ್ಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

ದುರಂತ ಸಂಭವಿಸಿದ್ದ ದಿನವೇ ಕ್ವಾರಿ ಮ್ಯಾನೇಜರ್‌ ನವೀದ್‌ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಗುತ್ತಿಗೆ ಪಡೆದಿದ್ದ ಮಹೇಂದ್ರಪ್ಪ ಅವರನ್ನು ನಂತರ ಬಂಧಿಸಲಾಗಿತ್ತು. ಆದರೆ, ಉಪಗುತ್ತಿಗೆ ಪಡೆದಿದ್ದ ಕೇರಳದ ಹಕೀಬ್‌ ಅವರನ್ನು ಎರಡನೇ ಆರೋಪಿ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ದುರಂತ ನಡೆದ ಮಾರನೇ ದಿನ ಹಕೀಬ್‌ ಗುಂಡ್ಲುಪೇಟೆಯಲ್ಲೇ ಇದ್ದರು. ಈ ಸಂದರ್ಭದಲ್ಲಿ ಅವರನ್ನು ಬಂಧಿಸುವುದಕ್ಕೆ ಅವಕಾಶ ಇತ್ತು. ಆದರೆ, ಅವರನ್ನು ಬಂಧಿಸದೇ ತಲೆಮರೆಸಿಕೊಳ್ಳಲು ಪೊಲೀಸರೇ ಅವಕಾಶ ಕೊಟ್ಟಂತಾಗಿದೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಘಟನೆ ನಡೆದು ಕೆಲವು ದಿನಗಳ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ‘ಆರೋಪಿ ಎಲ್ಲೇ ಇದ್ದರೂ ಮೂರು ದಿನಗಳೊಳಗೆ ಬಂಧಿಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದ್ದರು. ಎರಡೂವರೆ ತಿಂಗಳು ಕಳೆದರೂ ಬಂಧನವಾಗಿಲ್ಲ.

ಹಕೀಬ್‌ ಕೇರಳದ ಸುಲ್ತಾನ್‌ ಬತ್ತೇರಿಯವರಾಗಿದ್ದು, ಸ್ಥಳೀಯ ಕೆಲ ರಾಜಕಾರಣಿಗಳು ಹಾಗೂ ಉದ್ಯಮಿಗಳ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಆರೋಪಿಯ ಪತ್ತೆಗಾಗಿ ಪೊಲೀಸರು ಕೇರಳಕ್ಕೆ ತೆರಳಿ ಅವರ ಕುಟುಂಬದ ಸದಸ್ಯರನ್ನು ವಿಚಾರಣೆ ಮಾಡಿದ್ದಾರೆ. ಆದರೂ ಸುಳಿವು ಸಿಕ್ಕಿಲ್ಲ.

ಹಕೀಬ್‌ ಅವರು ಪದೇ ಪದೇ ಸ್ಥಳ ಬದಲಾಯಿಸುತ್ತಿರುವುದರಿಂದ ಪತ್ತೆಯಾಗುತ್ತಿಲ್ಲ ಎಂಬುದು ಪೊಲೀಸರ ಸಮಜಾಯಿಷಿ.

ಪ್ರತಿಕ್ರಿಯೆ ಪಡೆಯಲು ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ ಹಾಗೂ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸುಂದರ್‌ ರಾಜ್‌ ಅವರಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಮುದ್ದುರಾಜ್‌ ಪ್ರತಿಕ್ರಿಯಿಸಿ, ‘ಆರೋಪಿ ಪತ್ತೆಗೆ ಹುಡುಕಾಟ ಮುಂದುವರಿದಿದೆ’ ಎಂದು ಹೇಳಿದರು.

ಹದ್ದು, ಗರುಡ ರಕ್ಷಣೆ

ಹಕೀಬ್‌ ಅವರು ಈ ಹಿಂದೆ ಪಟ್ಟಣದ ಹೊರ ವಲಯದಲ್ಲಿಕೃಷಿ ಜಮೀನನ್ನು ಗುತ್ತಿಗೆ ಪಡೆದು ಕುದುರೆ ರೇಸ್ ಆರಂಭಿಸಲು ಪ್ರಯತ್ನ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಅರಣ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಗರುಡ ಹಾಗೂ ಹದ್ದನ್ನು ಸಾಕುತ್ತಿದ್ದರು. ಇದನ್ನು ಗಮನಿಸಿ ಅರಣ್ಯ ಇಲಾಖೆಯವರು ಪ್ರಕರಣ ದಾಖಲು ಮಾಡಿ ಹದ್ದು ಮತ್ತು ಗರುಡ ಪಕ್ಷಿಯನ್ನು ರಕ್ಷಣೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.