ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ಹಾಗೂ ಪಟ್ಟಣದ ಸುತ್ತಮುತ್ತ ಭಾನುವಾರ ಸೋನೆ ಮಳೆಯಾಯಿತು. ಸೊಯ್ಯನೆ ಬೀಸುವ ಗಾಳಿ, ಮೇಘಗಳ ಸಂಚಾರ, ಗದಗುಟ್ಟಿಸುವ ಚಳಿ ಜನರನ್ನು ಕಾಡಿತು. ಬಿಳಿಗಿರಿ ಬನದಲ್ಲಿ ಆಷಾಢ ಮಾಸದ ಮಳೆಯ ಸಿಂಚನ, ಮಂಜು ಮುಸುಕಿದ ದಟ್ಟ ಹಸಿರ ಕಾಡು ಪ್ರವಾಸಿಗರನ್ನು ಮೋಹಗೊಳಿಸಿತು.
ಪಟ್ಟಣದಲ್ಲಿ ಸಂಜೆ ಮಳೆ ಸುರಿಯಿತು. ಹನಿಯುವ ಮಳೆ ನಡುವೆ ಹೊಲ ಗದ್ದೆಗಳಲ್ಲಿ ಶ್ರಮಿಕರು ಕೆಲಸದಲ್ಲಿ ತೊಡಗಿದ್ದರು. ಒಮ್ಮೊಮ್ಮೆ ಬೀಸುವ ಜೋರು ಗಾಳಿ ಚಳಿಯ ಕಚಗುಳಿ ಇಟ್ಟರೆ, ಚಳಿ ಮಳೆಯಿಂದ ರಕ್ಷಿಸಿಕೊಳ್ಳಲು ಜನರು ಬೆಚ್ಚನೆ ಉಡುಪುಗಳ ಮೊರೆ ಹೋದರು.
ಸಂಜೆ ಅಲ್ಲಲ್ಲಿ ಮಳೆಯಾಗಿದೆ. ಕೃಷಿ ಚಟುವಟಿಕೆಗಳಿಗೆ ತುಸು ನೆರವಾಗಲಿದೆ. ಮುಂಗಾರು ಅಬ್ಬರ ಮತ್ತಷ್ಟು ಚುರುಕಾದರೆ ಬಿತ್ತನೆ ಕಾಯಕ ವೇಗ ಪಡೆಯಲಿದೆ ಎಂದು ಹೊಸೂರು ಬೇಸಾಯಗಾರ ಪ್ರದೀಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.