ADVERTISEMENT

ಚಾಮರಾಜನಗರ: ಕೊನೆಗೂ ಸುರಿದ ಹಸ್ತ ಮಳೆ, ತಂಪಾದ ಇಳೆ

ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಹನೂರು ವ್ಯಾಪ್ತಿಯಲ್ಲಿ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2023, 4:30 IST
Last Updated 10 ಅಕ್ಟೋಬರ್ 2023, 4:30 IST
ಸಂತೇಮರಹಳ್ಳಿ ಭಾಗದಲ್ಲಿ ಸೋಮವಾರ ಸಂಜೆ ಸುರಿದ ಮಳೆಗೆ ರಸ್ತೆಯಲ್ಲಿ ನೀರು ನಿಂತಿತ್ತು
ಸಂತೇಮರಹಳ್ಳಿ ಭಾಗದಲ್ಲಿ ಸೋಮವಾರ ಸಂಜೆ ಸುರಿದ ಮಳೆಗೆ ರಸ್ತೆಯಲ್ಲಿ ನೀರು ನಿಂತಿತ್ತು   

ಚಾಮರಾಜನಗರ/ಯಳಂದೂರು/ಕೊಳ್ಳೇಗಾಲ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೋಮವಾರ ಸಾಧಾರಣದಿಂದ ಉತ್ತಮ ಮಳೆಯಾಗಿದೆ. 

ಚಾಮರಾಜನಗರದಿಂದ ಗುಂಡ್ಲುಪೇಟೆ ಭಾಗಕ್ಕೆ ಹೆಚ್ಚು ಮಳೆಯಾಗಿಲ್ಲ. ಅಲ್ಲಲ್ಲಿ ತುಂತುರು ಮಳೆಯಾಗಿದೆ. ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲ, ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಅರ್ಧಗಂಟೆಯಿಂದ ಒಂದೂವರೆ ಗಂಟೆ ಕಾಲ ಬಿರುಸಿನ ಮಳೆ ಸುರಿದಿದೆ. 

ಮಧ್ಯಾಹ್ನದ ಬಳಿಕ ಜಿಲ್ಲೆಯಾದ್ಯಂತ ಮೋಡದ ವಾತಾವರಣ ಇತ್ತು. ಮಧ್ಯಾಹ್ನ 2.30ರ ಸುಮಾರಿಗೆ ಹನೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಚೆನ್ನಾಗಿ ಮಳೆ ಸುರಿಯಿತು. ಆ ಬಳಿಕ ಕೊಳ್ಳೇಗಾಲ, ಯಳಂದೂರು, ಸಂತೇಮರಹಳ್ಳಿ ವ್ಯಾಪ್ತಿಯಲ್ಲಿ ಗಂಟೆಗೂ ಹೆಚ್ಚು ಕಾಲ ಹಸ್ತ ವರ್ಷಧಾರೆಯಾಯಿತು. 

ADVERTISEMENT

ಕೊಳ್ಳೇಗಾಲದಲ್ಲಿ ಮಧ್ಯಾಹ್ನ 3 ಗಂಟೆಗೇ ಆಗಸ ಕಪ್ಪಿಟ್ಟಿತ್ತು. 4.30ಕ್ಕೆ ಮಳೆ ಹನಿ ಹನಿಯಾಗಿ ಸುರಿದ ಮಳೆ, ನಂತರ ಜೋರು ಗಾಳಿ ಸಹಿತ ಅಬ್ಬರಿಸಿತು.

ಸತ್ತೇಗಾಲ, ಧನಗೆರೆ, ಸರಗೂರು, ನರೀಪುರ, ಗುಂಡೇಗಾಲ, ಪಾಳ್ಯ, ಮತ್ತಿಪುರ, ದೊಡ್ಡಿಂದುವಾಡಿ,  ಮಧುವನಹಳ್ಳಿ, ಸಿದ್ದಯ್ಯನಪುರ, ಹೊಂಡರಬಾಳು, ಟಿಸಿ ಹುಂಡಿ, ಕೆಂಪನಪಾಳ್ಯ, ಲಕ್ಕರಸನ ಪಾಳ್ಯ, ತಿಮ್ಮರಾಜಿಪುರ, ಅರೇಪಾಳ್ಯ,  ಜಕ್ಕಳ್ಳಿ, ಜಾಗೇರಿ, ಟಗರು ಪುರ, ಕುಂತೂರು, ಕುಣಗಳ್ಳಿ, ತೇರಂಬಳ್ಳಿ, ಉತ್ತಂಬಳ್ಳಿ, ಗೊಬ್ಬಳ್ಳಿಪುರ, ಆಲಹಳ್ಳಿ ಸೇರಿದಂತೆ ಅನೇಕ ಕಡೆ ಮಳೆ ಸುರಿದಿದೆ. 

ಯಳಂದೂರು ತಾಲ್ಲೂಕಿನ ಸುತ್ತಮುತ್ತಲ ಗ್ರಾಮೀಣ ಪ್ರದೇಶ ಹಾಗೂ ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತ ಸಂಜೆ ಒಂದು ಗಂಟೆಗೂ ಹೆಚ್ಚು ಸಮಯ ಮಳೆ ಸುರಿದು ಇಳೆ ತಂಪಾಯಿತು.   

ಸಂಜೆ 3.30ಕ್ಕೆ ಆರಂಭವಾದ ಮಳೆ 5 ಗಂಟೆ ತನಕ ಹನಿಯಿತು. ಕೃಷಿ ಚಟುವಟಿಕೆಗಳಲ್ಲಿ  ತೊಡಗಿದ್ದ ಜನರು ಮಳೆಯಲ್ಲಿ ನೆನೆಯುತ್ತ ಮನೆ ಮುಟ್ಟಿದರು. ಪಟ್ಟಣದಲ್ಲಿ ಬಸ್ ಏರುವ ಧಾವಂತದಲ್ಲಿದ್ದ ಪ್ರಯಾಣಿಕರು ಸುರಕ್ಷಿತ ಪ್ರದೇಶದಲ್ಲಿ ನಿಂತು ಮಳೆಯಿಂದ ರಕ್ಷಿಸಿಕೊಂಡರು. 

ಈ ಬಾರಿ ತಡ ಮುಂಗಾರಿನ ನಿರೀಕ್ಷೆಯೂ ಹುಸಿಯಾಗಿತ್ತು. ಹಿಂಗಾರಿಗೆ ಬೇಸಾಯಗಾರರು ಸಿದ್ಧತೆ ನಡೆಸಿದ್ದರು. ಈ ಸಮಯದಲ್ಲಿ ಗುಡುಗು ಸಹಿತ ಮಳೆ ಸುರಿಯಿತು. ಬೆಟ್ಟದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ವರ್ಷಧಾರೆಯಾಗಿದ್ದು, ಸೆಕೆಯಿಂದ ಪರಿತಪಿಸಿದ್ದ ಪೋಡಿನ ಮಂದಿ ನಿಟ್ಟಿಸಿರು ಬಿಟ್ಟರು.

‘ರಾತ್ರಿ ತುಂತರು ಮುಂದುವರಿದಿದೆ. ರಸ್ತೆಗಳಲ್ಲಿ ನೀರು ಹರಿದಿದೆ. ಸಂಜೆ ಮನೆಗಳತ್ತ ತೆರಳುವವರು ಛತ್ರಿಗಳನ್ನು ಆಶ್ರಯಿಸಬೇಕಾಯಿತು. ಮುಂದಿನ ದಿನಗಳಲ್ಲಿ ಮಳೆ ಮುಂದುವರಿದರೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಲಿದೆ’ ಎಂದು ಕೃಷಿಕ ಸುರೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಸಂತೇಮರಹಳ್ಳಿ ವರದಿ: ಹೋಬಳಿ ಕೇಂದ್ರ ಸಂತೇಮರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಮವಾರ ಸಂಜೆ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.

ಜಿಲ್ಲಾ ಕೇಂದ್ರ ಚಾಮರಾಜನಗರ ಸೇರಿದಂತೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಮಳೆಯಾಗಿಲ್ಲ. ಗುಂಡ್ಲು‍ಪೇಟೆ ತಾಲ್ಲೂಕಿನ ಬಂಡೀಪುರ ಅರಣ್ಯದಂಚಿನ ಭಾಗಗಳಲ್ಲಿ ತುಂತುರು ಮಳೆಯಾಗಿದೆ. 

ಯಳಂದೂರು ಪಟ್ಟಣದಲ್ಲಿ ಸೋಮವಾರ ಸಂಜೆ ಮಳೆ ನಡುವೆ ಪ್ರಯಾಣಿಕರು ಬಸ್ ಏರಲು ಪ್ರಯಾಸಪಟ್ಟರು

ಕಡಿಮೆಯಾದ ಬಿಸಲಿನ ತಾಪ ಜಿಲ್ಲೆಗೆ ಯಲ್ಲೋ ಅಲರ್ಟ್‌ ಘೋಷಣೆ ಕೊಂಚ ನಿರಾಳರಾದ ಕೃಷಿಕರು

ಹಿಂಗಾರು ಬೇಸಾಯಕ್ಕೆ ಅನುಕೂಲ

ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯ ರೈತರು ಹಿಂಗಾರು ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಹಿಂಗಾರು ಅವಧಿ ಆರಂಭಗೊಂಡು ವಾರವಾದರೂ ಮಳೆಯಾಗಿರಲಿಲ್ಲ. ಎರಡು ದಿನಗಳಿಂದ ಸ್ವಲ್ಪ ಮಳೆಯಾಗುತ್ತಿದ್ದು ರೈತರು ಕೊಂಚ ನಿರಾಳರಾಗಿದ್ದಾರೆ.   ಕೆಲವು ವಾರಗಳಿಂದೀಚೆಗೆ ಜಿಲ್ಲೆಯಲ್ಲಿ ಮಳೆಯಾಗಿರಲಿಲ್ಲ. ಇದರಿಂದ ಬಿಸಿಲಿನ ತಾಪ ಹೆಚ್ಚಾಗಿತ್ತು. ಎಲ್ಲೆಡೆಯೂ ಸೆಕೆಯ ವಾತಾವರಣ ಇತ್ತು. ಸೋಮವಾರ ಜಿಲ್ಲಾ ವ್ಯಾಪ್ತಿಯಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದ ಹವಾಮಾನ ಇಲಾಖೆ ಯಲ್ಲೋ ಅಲರ್ಟ್‌ ಘೋಷಿಸಿತ್ತು. ನಿರೀಕ್ಷೆಯಂತೆ ವಿವಿಧ ಕಡೆಗಳಲ್ಲಿ ಮಳೆಯಾಗಿರುವುದರಿಂದ ವಾತಾವರಣ ತಂಪಾಗಿದೆ. ಹಿಂಗಾರು ಬೆಳೆಗಳಿಗೂ ಅನುಕೂಲವಾಗಲಿದೆ.  ಮಳೆಯಾಗಿರುವ ಕಡೆಗಳಲ್ಲಿ ಕಡಲೆ ಬಿತ್ತನೆಗಾಗಿ ಭೂಮಿ ಹದ ಮಾಡಿಕೊಳ್ಳಬಹುದು ಎಂದು ರೈತರು ಹೇಳಿದರು.  ಶೇ 54ರಷ್ಟು ಮಳೆ ಕೊರತೆ: ಹಿಂಗಾರು ಅವಧಿಯ ಮೊದಲ ಒಂಬತ್ತು ದಿನಗಳಲ್ಲಿ (ಅ.1ರಿಂದ 9) ಜಿಲ್ಲೆಯಲ್ಲಿ ಶೇ 54ರಷ್ಟು ಮಳೆ ಕೊರತೆ ಉಂಟಾಗಿದೆ. ಈ ಅವಧಿಯಲ್ಲಿ ವಾಡಿಕೆಯಲ್ಲಿ4.4 ಸೆಂ.ಮೀ ಮಳೆಯಾಗುತ್ತಿದೆ. ಈ ಬಾರಿ 2 ಸೆಂ.ಮೀ ಮಳೆ ಬಿದ್ದಿದೆ.  ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ 0.65 ಸೆಂ.ಮೀ ಮಳೆಯಾಗಿದೆ. ಇದು ವಾಡಿಕೆಗಿಂತ ಶೇ 5ರಷ್ಟು ಹೆಚ್ಚು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.