ADVERTISEMENT

ಚಾಮರಾಜನಗರ: ವಿವಿಧ ಕಡೆಗಳಲ್ಲಿ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 16:01 IST
Last Updated 14 ಏಪ್ರಿಲ್ 2021, 16:01 IST
ಯಳಂದೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಬುಧವಾರ ಸಂಜೆ ಸಾಧಾರಣ ಮಳೆಯಾಗಿದೆ
ಯಳಂದೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಬುಧವಾರ ಸಂಜೆ ಸಾಧಾರಣ ಮಳೆಯಾಗಿದೆ   

ಚಾಮರಾಜನಗರ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬುಧವಾರ ಸಂಜೆ ಹಾಗೂ ರಾತ್ರಿ ಮಳೆಯಾಗಿದೆ.

ಹನೂರು, ಯಳಂದೂರು ಭಾಗಗಳಲ್ಲಿ ಸಂಜೆ 4 ಗಂಟೆಯ ಸುಮಾರಿಗೆ ಸಾಧಾರಣ ಮಳೆಯಾಗಿದೆ. ಚಾಮರಾಜನಗರ, ಸಂತೇಮರಹಳ್ಳಿ, ಗುಂಡ್ಲುಪೇಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ 7ರ ಬಳಿಕ ಗುಡುಗು ಸಹಿತ ಮಳೆಯಾಗಿದೆ. ಕೊಳ್ಳೇಗಾಲ, ಹನೂರು ತಾಲ್ಲೂಕುಗಳಲ್ಲಿಯೂ ಹದವಾಗಿ ಮಳೆ ಸುರಿದಿದೆ.

ವಾರದಿಂದೀಚೆಗೆ ಪ್ರತಿ ದಿನ ಸಂಜೆ ಜಿಲ್ಲೆಯಾದ್ಯಂತ ದಟ್ಟ ಮೋಡದ ವಾತಾವರಣ ಕಂಡು ಬರುತ್ತಿದೆ. ಸೋಮವಾರ ಕೊಳ್ಳೇಗಾಲದಲ್ಲಿ ಮಧ್ಯಾಹ್ನದ ಹೊತ್ತಿಗೆ ಉತ್ತಮ ಮಳೆಯೂ ಆಗಿತ್ತು. ಯುಗಾದಿ ದಿನವಾದ ಮಂಗಳವಾರ ಸಂಜೆ ಮೋಡ ಕವಿದಿದ್ದರೂ ಮಳೆಯಾಗಿರಲಿಲ್ಲ.

ADVERTISEMENT

ಬುಧವಾರ ಯಳಂದೂರು, ಹನೂರು ಭಾಗದಲ್ಲಿ ಸಂಜೆ ಅರ್ಧ ಗಂಟೆಯಷ್ಟು ಹೊತ್ತು, ನೆಲ ಒದ್ದೆಯಾಗುವ ರೀತಿಯಲ್ಲಿ ಮಳೆಯಾಗಿದೆ.

ಸಂಜೆ 6.30ರ ನಂತರ ಜಿಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿ ಜೋರಾಗಿ ಗಾಳಿ ಬೀಸಲು ಆರಂಭವಾಗಿ, ಗುಡುಗು ಸಹಿತ ಮಳೆ ಆರಂಭವಾಯಿತು. ಒಂದು ಗಂಟೆಗೂ ಹೆಚ್ಚು ಕಾಲ ಹದವಾಗಿ ವರ್ಷಧಾರೆಯಾಯಿತು. ಹರದನಹಳ್ಳಿ, ದೊಡ್ಡರಾಯಪೇಟೆ, ಸಂತೇಮರಹಳ್ಳಿ, ಚಂದಕವಾಡಿ, ನಾಗವಳ್ಳಿ, ನಲ್ಲೂರು ಭಾಗಗಳಲ್ಲಿ ಮಳೆಯಾಗಿದೆ. ಚಂದಕವಾಡಿ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮವಾಗಿಯೇ ಮಳೆಯಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರ, ಬನ್ನಿತಾಳಪುರ, ಹೊಸೂರು, ಕೆಲಸೂರು, ಕಿಲಗೆರೆ, ಚೆನ್ನಂಜಯ್ಯನಹುಂಡಿ,ಕೂತನೂರು ಭಾಗದಲ್ಲಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.