ADVERTISEMENT

ಚಾಮರಾಜನಗರ: ಮಳೆ–ಮೋಡ, ಚಳಿಯಲ್ಲಿ ಗಡ ಗಡ!

ವಾಯುಭಾರ ಕುಸಿತದ ಪರಿಣಾಮ; ಜಿಲ್ಲೆಯಾದ್ಯಂತ ಗುರುವಾರ ರಾತ್ರಿಯಿಡಿ ಮಳೆ

ಸೂರ್ಯನಾರಾಯಣ ವಿ
Published 12 ನವೆಂಬರ್ 2021, 19:30 IST
Last Updated 12 ನವೆಂಬರ್ 2021, 19:30 IST
ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಚಾಮರಾಜನಗರ ಸಮೀಪದ ಬೂದಿತಿಟ್ಟು ಕ್ರಾಸ್‌ ಬಳಿಯ ರೈತ ಚಿನ್ನಸ್ವಾಮಿ ಜಮೀನಿನಲ್ಲಿ ನೀರು ನಿಂತಿರುವುದು
ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಚಾಮರಾಜನಗರ ಸಮೀಪದ ಬೂದಿತಿಟ್ಟು ಕ್ರಾಸ್‌ ಬಳಿಯ ರೈತ ಚಿನ್ನಸ್ವಾಮಿ ಜಮೀನಿನಲ್ಲಿ ನೀರು ನಿಂತಿರುವುದು   

ಚಾಮರಾಜನಗರ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯ ಮೇಲೂ ಆಗಿದ್ದು, ಜಿಲ್ಲೆಯಾದ್ಯಂತ ಎರಡು ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇದೆ. ಗುರುವಾರ ರಾತ್ರಿಯಿಡಿ ಜಿಟಿ ಜಿಟಿ ಮಳೆಯಾಗಿದ್ದು, ಶುಕ್ರವಾರ ಮಧ್ಯಾಹ್ನದವರೆಗೂ ಹನಿಯಿತು.

ಮೂರು ದಿನಗಳಿಂದ ಸೂರ್ಯನ ಬೆಳಕು ಭೂಮಿಗೆ ಬಿದ್ದಿಲ್ಲ. ತಂಪಾದ ಹವೆ ಜಿಲ್ಲೆಯನ್ನು ಆವರಿಸಿದ್ದು, ಚಳಿ ವಾತಾವರಣ ಇದೆ.

ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಕಟಾವಿಗೆ ಬಂದ ಬೆಳೆ ನಷ್ಟವಾಗುವ ಆತಂಕದಲ್ಲಿ ಕೃಷಿಕರಿದ್ದಾರೆ. ಹನೂರು ಭಾಗದಲ್ಲಿ ರಾಗಿ ಬೆಳೆ ಹಾನಿಗೀಡಾಗಿದೆ. ಬೇರೆ ತಾಲ್ಲೂಕಿನಲ್ಲಿ ಆ ಪರಿಸ್ಥಿತಿ ಉದ್ಭವಿಸಿಲ್ಲ. ಆದರೆ, ಇದೇ ರೀತಿ ಬಿಸಿಲು ಬಾರದೆ ಮಳೆಯಾಗುತ್ತಿದ್ದರೆ, ಕಟಾವು ಮಾಡಲು ಸಾಧ್ಯವಾಗದೆ ಬೆಳೆಗಳಿಗೆ ಶಿಲೀಂಧ್ರಗಳ ಸೋಂಕು ತಗುಲಬಹುದು ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, 17ರವರೆಗೂ ಇದೇ ರೀತಿಯ ವಾತಾವರಣ ಇರಲಿದೆ. ಸಾಮಾನ್ಯ ಮಳೆಯೂ ಆಗಲಿದೆ. ಕೃಷಿ ಜಮೀನುಗಳಲ್ಲಿ ನೀರು ನಿಂತಿದೆ. ಬಿಸಿಲು ಇಲ್ಲದಿರುವುದರಿಂದ ನೀರು ಇಂಗುತ್ತಿಲ್ಲ. ಇದರಿಂದಾಗಿ ಬೆಳೆಗೆ ಹಾನಿಯಾಗಬಹುದು ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಜಿಲ್ಲೆಯಲ್ಲಿ ನ.1ರಿಂದ 12ರವರೆಗೆ 8.35 ಸೆಂ.ಮೀ. ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 4.19 ಸೆಂ.ಮೀ. ಮಳೆಯಾಗುತ್ತದೆ. ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 1.82 ಸೆಂ.ಮೀ. ಮಳೆಯಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 2.8 ಸೆಂ.ಮೀ, ಹನೂರು ತಾಲ್ಲೂಕಿನಲ್ಲಿ 2.3 ಸೆಂ.ಮೀ. ಮಳೆ ಬಿದ್ದಿದೆ.

ವಾಯುಭಾರ ಕುಸಿತದ ಪರಿಣಾಮ: ‘ವಾಯುಭಾರ ಕುಸಿತದ ಕಾರಣ ಜಿಲ್ಲೆಯಲ್ಲೂ ಮಳೆಯಾಗುತ್ತಿದೆ. ಹನೂರು ಭಾಗದಲ್ಲಿ ರಾಗಿಗೆ ಸ್ವಲ್ಪ ತೊಂದರೆಯಾಗಿರುವುದು ಬಿಟ್ಟರೆ, ಜಿಲ್ಲೆಯ ಬೇರೆಲ್ಲೂ ಮಳೆಯಿಂದಾಗಿ ಬೆಳೆಹಾನಿ ಸಂಭವಿಸಿಲ್ಲ. ಆದರೆ, ಬಿಸಿಲು ಇರದೆ, ಮಳೆ ಬರುತ್ತಿದ್ದರೆ ಬೆಳೆಗಳಿಗೆ ತೊಂದರೆಯಾಗುತ್ತದೆ. ರಾಗಿ, ಭತ್ತದಂತಹ ಬೆಳೆಗಳಿಗೆ ಶಿಲೀಂಧ್ರಗಳು ದಾಳಿ ಮಾಡುತ್ತವೆ. ಬಿಸಿಲು ಇಲ್ಲದಿರುವುದರಿಂದ ಬೆಳೆ ಕಟಾವು ಮಾಡಿದರೂ ಈ ಸಮಸ್ಯೆ ಇರುತ್ತದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಉಷ್ಣಾಂಶ ಕುಸಿತ: ಮಳೆ ಒಂದೆಡೆಯಾದರೆ, ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಉಷ್ಣಾಂಶ ಕುಸಿಯುತ್ತಿದೆ. ಚಳಿಯ ವಾತಾವರಣ ಕಂಡು ಬರುತ್ತಿದೆ. ಗರಿಷ್ಠ ಉಷ್ಣಾಂಶ 27–28 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ. ಶುಕ್ರವಾರ 23 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಕನಿಷ್ಠ ತಾಪಮಾನವೂ 18–19 ಡಿಗ್ರಿ ಸೆಲ್ಸಿಯಸ್‌ಗಳಷ್ಟಿದೆ.

ಪ್ರತಿ ವರ್ಷ ಅಕ್ಟೋಬರ್‌ ಕೊನೆಗೆ, ನವೆಂಬರ್‌ ಆರಂಭದಲ್ಲಿ ನಿಧಾನವಾಗಿ ಚಳಿಗಾಲ ಆರಂಭವಾಗುತ್ತದೆ. ಈ ಬಾರಿ ಇನ್ನೂ ಮಳೆಯಾಗುತ್ತಿದ್ದು, ಅದರೊಂದಿಗೆ ಚಳಿ ಶುರುವಾಗಿದೆ. ವಾರದಿಂದೀಚೆಗೆ ಬೆಳಿಗ್ಗೆ ಮಂಜು ಕವಿದ ವಾತಾವರಣವಿದ್ದು, ಜನಜೀವನದ ಮೇಲೆ ಕೊಂಚ ಪರಿಣಾಮ ಬೀರಿದೆ. ಶೀತ ವಾತಾವರಣದೊಂದಿಗೆ ಮಳೆಯೂ ಜೊತೆಯಾಗಿರುವುದರಿಂದ ಜನರ ದೈನಂದಿನ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿದೆ.

ಸುವರ್ಣಾವತಿ ಭರ್ತಿಗೆ ಅರ್ಧ ಅಡಿ ಬಾಕಿ
ಈ ಮಧ್ಯೆ, ನೆರೆಯ ತಮಿಳುನಾಡು, ಬಿಆರ್‌ಟಿ ಅರಣ್ಯ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ತಾಲ್ಲೂಕಿನ ಸುವರ್ಣಾವತಿ ಜಲಾಶಯ, ಚಿಕ್ಕಹೊಳೆ ಜಲಾಶಯಗಳಿಗೆ ಗಣನೀಯ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಸುವರ್ಣಾವತಿ ಜಲಾಶಯ ಭರ್ತಿಯಾಗಲು ಇನ್ನು ಅರ್ಧ ಅಡಿಯಷ್ಟೇ ಬಾಕಿ ಇದೆ. ಇನ್ನು ಒಂಬತ್ತು ಅಡಿ ನೀರು ಬಂದರೆಚಿಕ್ಕಹೊಳೆ ಜಲಾಶಯವೂ ಭರ್ತಿಯಾಗಲಿದೆ.

‘ಸುವರ್ಣಾವತಿ ಜಲಾಶಯದ ಗರಿಷ್ಠ ಮಟ್ಟ 2,455 ಅಡಿ. ಈಗ 2,453.5 ಅಡಿ ನೀರಿದೆ. 2,454 ಅಡಿ ತಲುಪಿದ ಕೂಡಲೇ ನಾವು ಗೇಟ್‌ ತೆರೆದು ಕೆರೆಗಳಿಗೆ ನೀರು ಹರಿಸುತ್ತೇವೆ. ತಮಿಳುನಾಡಿನ ದಿಂಬಂ, ಬೇಡಗುಳಿ ಸೇರಿದಂತೆ ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾದರೆ ಈ ಜಲಾಶಯಕ್ಕೆ ನೀರು ಹರಿದು ಬರುತ್ತದೆ. ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿಕ್ಕಹೊಳೆಯ ಗರಿಷ್ಠ ಮಟ್ಟ 2,474 ಅಡಿ. ಈಗ 2,465 ಅಡಿಗಳಷ್ಟು ನೀರಿದೆ. ಇನ್ನೂ 9 ಅಡಿ ತುಂಬಬೇಕು. ಕೊಂಗಳ್ಳಿ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾದರೆ ಈ ಜಲಾಶಯಕ್ಕೆ ನೀರು ಹರಿಯುತ್ತದೆ’ ಎಂದು ಅವರು ಮಾಹಿತಿ ನೀಡಿದರು.

‘ಈ ಹಿಂದೆ 2015–16ರಲ್ಲಿ ಎರಡೂ ಜಲಾಶಯಗಳು ಭರ್ತಿಯಾಗಿದ್ದವು. ಸುವರ್ಣಾವತಿ ಜಲಾಶಯ ಕೋಡಿ ಬಿದ್ದಿತ್ತು. ಇನ್ನೂ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಬಾರಿ ಎರಡೂ ಜಲಾಶಯಗಳು ಭರ್ತಿಯಾಗುವ ನಿರೀಕ್ಷೆ ಇದೆ’ ಎಂದರು.

***

17ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಕಡಿಮೆಯಾದರೆ ಪರಿಸ್ಥಿತಿ ಸುಧಾರಿಸಬಹುದು.
-ಎಚ್‌.ಟಿ.ಚಂದ್ರಕಲಾ, ಜಂಟಿ ಕೃಷಿ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.