ADVERTISEMENT

‘ರೈತರ ಬೆವರಿನ ಫಲಕ್ಕೆ ಗೌರವ ನೀಡಿ’

ರೈತ ದಿನಾಚರಣೆಯಲ್ಲಿ ಮುಖ್ಯಶಿಕ್ಷಕ ಮಹದೇಶ್ವರಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:02 IST
Last Updated 24 ಡಿಸೆಂಬರ್ 2025, 6:02 IST
ಗುಂಡ್ಲುಪೇಟೆ ತಾಲ್ಲೂಕಿನ ಪರಿಸರ ಮಿತ್ರ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಶಾಲಾ ಸಿಬ್ಬಂದಿ
ಗುಂಡ್ಲುಪೇಟೆ ತಾಲ್ಲೂಕಿನ ಪರಿಸರ ಮಿತ್ರ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಶಾಲಾ ಸಿಬ್ಬಂದಿ   

ಗುಂಡ್ಲುಪೇಟೆ: ‘ಆಹಾರ ಪದಾರ್ಥ ಹಿತಮಿತವಾಗಿ ಬಳಸಿ ಉಳಿಸುವ ಮೂಲಕ ರೈತರ ಬೆವರಿನ ಫಲಕ್ಕೆ ಗೌರವ ನೀಡೋಣ’ ಎಂದು ಮುಖ್ಯಶಿಕ್ಷಕ ಮಹದೇಶ್ವರಸ್ವಾಮಿ ಹೇಳಿದರು.

ತಾಲ್ಲೂಕಿನ ಪರಿಸರ ಮಿತ್ರ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ರೈತ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರೈತ ದೇಶದ ಬೆನ್ನೆಲುಬು. ಎಲ್ಲಾ ಜೀವಿಗಳು ಬದುಕಲು ಬಹಳ ಮುಖ್ಯವಾಗಿ ಗಾಳಿ, ನೀರು, ಆಹಾರ ಬೇಕು. ಇವೆಲ್ಲವೂ ನೈಸರ್ಗಿಕವಾಗಿ ದೊರೆಯುತ್ತವೆ. ಇವುಗಳಲ್ಲಿ ಆಹಾರವನ್ನು ವಿಶೇಷವಾಗಿ ರೈತರು ಬೆಳೆಯುತ್ತಾರೆ. ರೈತರು ಮಳೆ, ಚಳಿ, ಬಿಸಿಲು ಎನ್ನದೆ ಬೆವರು ಸುರಿಸಿ ವ್ಯವಸಾಯ ಮಾಡಿ ನಮ್ಮೆಲ್ಲರಿಗೂ ಅನ್ನ ನೀಡಿ ಕಾಪಾಡುವ ಪ್ರತ್ಯಕ್ಷ ದೇವರಾಗಿದ್ದಾರೆ’ ಎಂದರು.

ADVERTISEMENT

‘ಮನುಷ್ಯ ಎಷ್ಟೇ ಓದಿ ವಿದ್ಯಾವಂತನಾದರೂ ಹಣ ಮುದ್ರಿಸಬಹುದೆ ಹೊರತು, ಅನ್ನ ಸಾಧ್ಯವಿಲ್ಲ. ಅದು ರೈತರಿಂದ ಮಾತ್ರ ಸಾಧ್ಯ. ನಾವು ತಿನ್ನುವ ಒಂದೊಂದು ತುತ್ತು ಅನ್ನದಲ್ಲೂ ರೈತರ ಪರಿಶ್ರಮವಿದೆ. ವಿದ್ಯಾವಂತರು, ನಾಗರಿಕರು ಎನಿಸಿಕೊಂಡವರು ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡುತ್ತೇವೆ. ಇದು ಅನ್ನದಾತರಿಗೆ ಮಾಡುವ ಅಗೌರವ. ಸಾಮಾನ್ಯವಾಗಿ ಬಹುಪಾಲು ಪೋಷಕರು ಮಕ್ಕಳು ಡಾಕ್ಟರ್, ಎಂಜಿನಿಯರ್, ಲಾಯರ್ ಆಗಬೇಕು ಎನ್ನುವ ಆಸೆ ಹೊಂದಿರುತ್ತಾರೆ. ಸರ್ಕಾರದ ಹುದ್ದೆಗಳಿಸಿ ಹೆಚ್ಚು ಹಣ ಮಾಡಿ ಐಷಾರಾಮಿ ಜೀವನ ನಡೆಸಬೇಕು ಎಂದು ಆಸೆ ಪಡುತ್ತಾರೆ ಹೊರತು, ಪ್ರಗತಿ ಪರ ರೈತನಾಗಿ ನಾಡಿಗೆ ಅನ್ನ ನೀಡಲಿ ಎಂದು ಹೇಳುವವರು ವಿರಳ’ ಎಂದು ಕಳವಳ ವ್ಯಕ್ತಪಡಿಸಿದರು.

ಸಮಾಜದಲ್ಲಿ ವೈಭೋಗ ಜೀವನ ನಡೆಸಲು ದುರಾಸೆಯಿಂದ ಹಣಗಳಿಸಿ ಶ್ರಮ ಪಡದೆ ಸುಖ ಪಡಬೇಕು ಎನ್ನುವವರ ಸಂಖ್ಯೆ ಹೆಚ್ಚಳ. ದೇಶ ಅಥವಾ ಸಮಾಜ ನೆಮ್ಮದಿ, ತೃಪ್ತಿಯಿಂದ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಅನ್ನ ನೀಡುವ ರೈತರು ಹಾಗೂ ದೇಶ ಕಾಯುವ ಸೈನಿಕರ ಶ್ರಮವೇ ಕಾರಣ. ಇವರನ್ನು ನಾವು ಪ್ರತಿನಿತ್ಯ ಸ್ಮರಿಸಿ ಗೌರವ ಸಲ್ಲಿಸಬೇಕು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರೈತರು ನಮ್ಮೆಲ್ಲರಿಗೂ ಸ್ಫೂರ್ತಿ ಎಂದು ತಿಳಿಸಿದರು.

ಶಿಕ್ಷಕರಾದ ನಂದಿನಿ, ವಿನೋದಾ, ಕವಿತಾ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.