ADVERTISEMENT

ಚಾಮರಾಜನಗರ: ಜಿಲ್ಲಾ ಕಾರಾಗೃಹದಲ್ಲಿ ರಕ್ಷಾ ಬಂಧನ

ಮನಸ್ಸು, ಸಂಬಂಧವನ್ನು ಗಟ್ಟಿಗೊಳಿಸುವ ರಕ್ಷಾ ಬಂಧನ– ದಾನೇಶ್ವರಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 15:57 IST
Last Updated 12 ಆಗಸ್ಟ್ 2022, 15:57 IST
ಚಾಮರಾಜನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ದಾನೇಶ್ವರಿ ಅವರು ವಿಚಾರಣಾಧೀನ ಕೈದಿಗಳಿಗೆ ರಾಕಿ ಕಟ್ಟಿದರು. ಕಾರಾಗೃಹ ಅಧೀಕ್ಷಕಮಲ್ಲಿಕಾರ್ಜುನ್, ರೋಟರಿ ಅಧ್ಯಕ್ಷ ಕೆಂಪನಪುರ ಮಹದೇವಸ್ವಾಮಿ, ಕಾರ್ಯದರ್ಶಿ ಕಾಗಲವಾಡಿ ಚಂದ್ರು ಇತರರು ಇದ್ದರು
ಚಾಮರಾಜನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ದಾನೇಶ್ವರಿ ಅವರು ವಿಚಾರಣಾಧೀನ ಕೈದಿಗಳಿಗೆ ರಾಕಿ ಕಟ್ಟಿದರು. ಕಾರಾಗೃಹ ಅಧೀಕ್ಷಕಮಲ್ಲಿಕಾರ್ಜುನ್, ರೋಟರಿ ಅಧ್ಯಕ್ಷ ಕೆಂಪನಪುರ ಮಹದೇವಸ್ವಾಮಿ, ಕಾರ್ಯದರ್ಶಿ ಕಾಗಲವಾಡಿ ಚಂದ್ರು ಇತರರು ಇದ್ದರು   

ಚಾಮರಾಜನಗರ: ‘ರಕ್ಷಾ ಬಂಧನ ಭಾವೈಕ್ಯತೆ, ಸಾಮರಸ್ಯ , ಭ್ರಾತೃತ್ವವನ್ನು ಸಾರುವ, ಮನಸ್ಸು ಹಾಗೂ ಸಂಬಂಧವನ್ನು ಗಟ್ಟಿಗೊಳಿಸುವ ಶಕ್ತಿ ಹೊಂದಿದೆ’ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ದಾನೇಶ್ವರಿ ಶುಕ್ರವಾರ ತಿಳಿಸಿದರು.

ಜಿಲ್ಲಾ ಕಾರಾಗೃಹದಲ್ಲಿ ರೋಟರಿ ಸಂಸ್ಥೆ ಹಾಗೂ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾನಿಲಯದ ವತಿಯಿಂದ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಕ್ಷಾ ಬಂಧನ ಮನುಷ್ಯತ್ವವನ್ನು ಸಾರುತ್ತದೆ. ಮನಸ್ಸಿನ ಒಳಗೆ ಹಾಗೂ ಬಾಹ್ಯವಾಗಿ ರಕ್ಷಣೆಯನ್ನು ಒದಗಿಸಿ, ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಮನಸ್ಸನ್ನು ನಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುವ ಮೂಲಕ ಪರಮಾತ್ಮನನ್ನು ಒಲಿಸಿಕೊಳ್ಳಬೇಕು. ಇಲ್ಲಿ ತಾವೆಲ್ಲರೂ ಯಾವುದೋ ಕಾರಣಕ್ಕೆ ಬಂಧಿಗಳಾಗಿದ್ದೀರಿ. ನಿಮ್ಮೆಲ್ಲರ ಮನಸ್ಸುಗಳನ್ನು ಪರಿವರ್ತನೆ ಮಾಡಿಕೊಳ್ಳಲು ಇದು ಸಕಾಲ. ಕೆಟ್ಟದನ್ನು ಮನಸ್ಸಿನಿಂದ ತೆಗೆದು ಹಾಕಿ, ಸದಾ ಒಳ್ಳೆಯ ಚಿಂತನೆ ಮಾಡಿ’ ಎಂದು ಸಲಹೆ ನೀಡಿದರು.

ADVERTISEMENT

‘ಅಪಕಾರ ಮಾಡಿದವರಿಗೂ ಉಪಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ನೀವು ತಪ್ಪು ಮಾಡಿದ್ದರೆ ಕ್ಷಮೆ ಕೇಳಿ ಬೇಡಿ. ಇದರಿಂದ ಮನಸ್ಸು ಹಗುರವಾಗುತ್ತದೆ. ಶಾಂತಿ ನೆಲೆಸುತ್ತದೆ’ ಎಂದರು.

ರೋಟರಿ ಅಧ್ಯಕ್ಷ ಕೆಂಪನಪುರ ಮಹದೇವಸ್ವಾಮಿ ಮಾತನಾಡಿ, ‘ರಕ್ಷಾ ಬಂಧನ ಕಾರ್ಯಕ್ರಮದ ಮೂಲಕ ತಮ್ಮೆಲ್ಲರನ್ನು ನೋಡುವಂತಾಗಿದೆ. ತಾವೆಲ್ಲರು ತಿಳಿಯದೆಯೋ, ತಿಳಿದು ತಪ್ಪು ಮಾಡಿ ಬಿಟ್ಟಿದ್ದೀರಿ. ಮುಂದೆ ಇಂಥ ತಪ್ಪು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಒಳ್ಳೆಯ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು’ ಎಂದರು.

ಕಾರಾಗೃಹ ಅಧೀಕ್ಷಕ ಮಲ್ಲಿಕಾರ್ಜುನ್.ವೈ.ರಾವ್. ಮಾತನಾಡಿ, ‘75 ವರ್ಷದ ಅಮೃತ ಮಹೋತ್ಸವದಲ್ಲಿ ನಾವಿದ್ದೇವೆ. ಕಾರಾಗೃಹದಲ್ಲಿಯೂ ವಿಶೇಷವಾಗಿ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಇದುವರೆಗೆ 15ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಲಾಗಿದೆ. ಆರೋಗ್ಯ ತಪಾಸಣೆ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ’ ಎಂದರು.

ರೋಟರಿ ಕಾರ್ಯದರ್ಶಿ ಕಾಗಲವಾಡಿ ಚಂದ್ರು, ರೋಟರಿ ಸದಸ್ಯರಾದ ಗೋವಿಂದಶೆಟ್ಟಿ, ಅಂಕಪ್ಪ್ಪ, ಚಂದ್ರ ಪ್ರಭ ಜೈನ್, ಬಿ.ಕೆ.ಆರಾಧ್ಯ, ಪ್ರಮೀಳಾ ಉದಿಕಟ್ಟಿ, ಸರಳ, ಆಶಾ, ಸುಧಾ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.