ADVERTISEMENT

ವೃದ್ಧೆಗೆ ಮೇಲೆ ಅತ್ಯಾಚಾರ ಎಸಗಿ ಕೊಲೆ: ಶಂಕೆ

ಗ್ರಾಮಕ್ಕೆ ಎಸ್ಪಿ ಬಿ.ಟಿ.ಕವಿತಾ ಭೇಟಿ: ಶ್ರೀಕಾಂತ್ ನೇತೃತ್ವದಲ್ಲಿ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 2:28 IST
Last Updated 13 ಜುಲೈ 2025, 2:28 IST
   

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಮನೆಯೊಂದರಲ್ಲಿ 80ರ ವಯೋಮಾನದ ವೃದ್ಧೆ ಬುಧವಾರ ಸಾವಿಗೀಡಾಗಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಘಟನೆ ಕುರಿತು ಯಳಂದೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೃದ್ಧೆ ಕೆಂಪಮ್ಮ ಮೃತಪಟ್ಟವರು. ಗ್ರಾಮದ ಮಹೇಶ್ ಕುಡಿದ ನಶೆಯಲ್ಲಿ ಅತ್ಯಚಾರ ಮಾಡಿ, ಕೊಲೆ ಮಾಡಿದ್ದಾನೆ ಎಂದು ಈಕೆಯ ಮಗ ನಂಜಯ್ಯ ಶುಕ್ರವಾರ ರಾತ್ರಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿ ಮಹೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕುಡಿತದ ಚಟಕ್ಕೆ ಬಿದ್ದಿರುವ ಆರೋಪಿ ಟಿ.ನರಸೀಪುರ ತಾಲ್ಲೂಕಿನ ಈಶ್ವರಗೌಡನಹಳ್ಳಿ ಗ್ರಾಮದ ನಿವಾಸಿ. ಕೆಸ್ತೂರು ಗ್ರಾಮದ ಪತ್ನಿಯ ಮನೆಯಲ್ಲಿ ನೆಲೆಯೂರಿದ್ದ. ಹಿಂದೆಯೂ ಗಲಾಟೆ ವಿಷಯಕ್ಕೆ ಸಂಬಂಧಿಸಿದಂತೆ ಈತನ ಮೇಲೆ ದೂರು ದಾಖಲಾಗಿತ್ತು. ಸದಾ ಜಗಳ ಮಾಡುತ್ತ ಗ್ರಾಮದಲ್ಲಿ ಆಶಾಂತಿ ಸೃಷ್ಟಿಸುತ್ತಿದ್ದ ಎನ್ನಲಾಗಿದೆ.

ADVERTISEMENT

ಬುಧವಾರ ವೃದ್ಧೆಗೆ ಮಗ ಊಟ ನೀಡಿ ಮನೆಯಿಂದ ಹೊರಗೆ ತೆರಳಿದ್ದರು. ಈ ವೇಳೆ ಆರೋಪಿ ಮದ್ಯ ಸೇವಿಸಿ ವೃದ್ಧೆ ಮನೆಗೆ ನುಗ್ಗಿ, ನಿತ್ರಾಣಳಾಗಿ ಮಲಗಿದ್ದವಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಗ ಮನೆಗೆ ಬಂದಾಗ ಆರೋಪಿ ಅಲ್ಲಿಯೇ ಮಲಗಿದ್ದು, ಸ್ಥಳಕ್ಕೆ ಬಂದು ನೋಡಿದಾಗ ತಾಯಿ ಮೃತಪಟ್ಟಿರುವುದು ಕಂಡುಬಂದಿದೆ. ಶವ ಪಂಚನಾಮೆ ಸಂದರ್ಭದಲ್ಲಿ ವೃದ್ಧೆಗೆ ಗಾಯಗಳಾಗಿದ್ದು, ಆರೋಪಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ಮಗ ನಂಜಯ್ಯ ದೂರು ಆಧರಿಸಿ ತನಿಖೆ ನಡೆಯುತ್ತಿದೆ.

ತಲೆಮರೆಸಿಕೊಂಡ ಆರೋಪಿ, ಪತ್ತೆಗೆ ತಂಡ: ಆರೋಪಿ ಮಹೇಶ್ ರೌಡಿ ಎಂದು ಬಿಂಬಿಸಿಕೊಂಡು ಗ್ರಾಮಸ್ಥರನ್ನು ಎದುರಿಸುತ್ತಿದ್ದ, ಮಹಿಳೆಯರಿಗೂ ಜೀವಭಯ ಉಂಟಾಗುವಂತೆ ನಡೆದುಕೊಳ್ಳುತ್ತಿದ್ದ. ಬಗ್ಗೆ ಹಿಂದೆಯೂ ದೂರು ದಾಖಲಾಗಿತ್ತು. ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಶನಿವಾರ ತನಿಖೆ ನಡೆಯುತ್ತಿದ್ದು, ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸ್ಐ ಆಕಾಶ್ ಹಾಗೂ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಕೈಗೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.