ADVERTISEMENT

ಆಧಾರ್‌ ದೃಢೀಕರಣಕ್ಕೆ 3 ತಿಂಗಳ ಗಡುವು

ನ್ಯಾಯಬೆಲೆ ಅಂಗಡಿಗಳಲ್ಲಿ ಇ–ಕೆವೈಸಿಗೆ ನಾಳೆಯಿಂದ ನವೆಂಬರ್‌ವರೆಗೆ ಅವಕಾಶ: ಡಿಸೆಂಬರ್‌ನಿಂದ ಪಡಿತರ ಸಿಗದು

ಸೂರ್ಯನಾರಾಯಣ ವಿ
Published 9 ಸೆಪ್ಟೆಂಬರ್ 2019, 20:28 IST
Last Updated 9 ಸೆಪ್ಟೆಂಬರ್ 2019, 20:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಅನರ್ಹ ಫಲಾನುಭವಿಗಳು ಪಡಿತರ ಸೌಲಭ್ಯ ಪಡೆಯುವುದನ್ನು ತಪ್ಪಿಸುವುದಕ್ಕಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಪಡಿತರ ಚೀಟಿದಾರರ ಹಾಗೂ ಚೀಟಿಯಲ್ಲಿ ಹೆಸರಿರುವ ಕುಟುಂಬದ ಸದಸ್ಯರ ಆಧಾರ್ ದೃಢೀಕರಣವನ್ನು (ಎ–ಕೆವೈಸಿ) ಮಾಡಲು ಮುಂದಾಗಿದೆ.

ಈಗಾಗಲೇ ಇಲಾಖೆಯು ಎಲ್ಲ ಫಲಾನುಭವಿಗಳ ಮಾಹಿತಿಯನ್ನು ಹೊಂದಿದ್ದು, ಆಧಾರ್‌ ಸಂಖ್ಯೆಯನ್ನೂ ಪಡಿತರ ಚೀಟಿಗಳಿಗೆ ಜೋಡಿಸಲಾಗಿದೆ. ಇದರ ಆಧಾರದಲ್ಲಿ ಮೊದಲ ಹಂತದಲ್ಲಿ ಬಯೊಮೆಟ್ರಿಕ್‌ ಮೂಲಕ ಫಲಾನುಭವಿಗಳ ಆಧಾರ್‌ ದೃಢೀಕರಣವನ್ನು ಇಲಾಖೆ ಮಾಡಲಿದೆ.

ಇ–ಕೆವೈಸಿ ಮಾಡಿಸಿಕೊಳ್ಳಲು ಬುಧವಾರದಿಂದ (ಸೆ.11) ನವೆಂಬರ್‌ವರೆಗೂ ಇಲಾಖೆ ಅವಕಾಶ ನೀಡಿದೆ. ಈ ಅವಧಿಯಲ್ಲಿ ದೃಢೀಕರಣ ಮಾಡದಿದ್ದರೆ, ಡಿಸೆಂಬರ್‌ ತಿಂಗಳಿನಿಂದ ಪ‍ಡಿತರ ಸಿಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಪಡಿತರ ಚೀಟಿಯಲ್ಲಿ ಹೆಸರು ಇರುವ ಕುಟುಂಬದ ಸದಸ್ಯರೆಲ್ಲರೂ ಆಧಾರ್‌ ದೃಢೀಕರಣವನ್ನು ಕಡ್ಡಾಯವಾಗಿ ಮಾಡಬೇಕು.

ADVERTISEMENT

ಎರಡು ಮೂರು ತಿಂಗಳ ಹಿಂದೆ ಇ–ಕೆವೈಸಿ ಪ್ರಕ್ರಿಯೆ ಆರಂಭವಾಗಿತ್ತು. ಆದರೆ, ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಪಡಿತರ ಸೋರಿಕೆ ತಡೆಯುವ ಯತ್ನ: ಅನರ್ಹರನ್ನು ಹೊಂದಿರುವ ಪಡಿತರ ಚೀಟಿಗಳನ್ನು ರದ್ದುಪಡಿಸಿ, ಪಡಿತರ ಸೋರಿಕೆ ತಡೆಯುವುದು, ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸುವ ಉದ್ದೇಶದಿಂದ ‘ಆಹಾರ ಸುರಕ್ಷಾ ಮಾಸ’ ಎಂಬ ಕಾರ್ಯಕ್ರಮವನ್ನು 2018–19ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಆಧಾರ್‌ ದೃಢೀಕರಣ ಮಾಡಲಾಗುತ್ತಿದೆ.

‘ಪಡಿತರ ಚೀಟಿಗಳಲ್ಲಿ ಹೆಸರುಗಳಿದ್ದೂ ಕುಟುಂಬದೊಂದಿಗೆ ವಾಸ ಮಾಡದವರು ಇದ್ದಾರೆ. ಕುಟುಂಬದ ಸದಸ್ಯರು ಮೃತಪಟ್ಟಿದ್ದರೂ ಅವರ ಹೆಸರಿನಲ್ಲಿ ಪಡಿತರ ಪಡೆಯುವವರೂ ಇರುತ್ತಾರೆ. ಚಾಲ್ತಿಯಲ್ಲಿ ಇಲ್ಲದವರೂ ಪಡಿತರ ಪಡೆಯುತ್ತಿರುವ ಸಂಭವ ಇರುತ್ತದೆ. ಇಂತಹವರ ಮಾಹಿತಿಯನ್ನು ನಮ್ಮ ದತ್ತಾಂಶದಿಂದ ತೆಗೆದುಹಾಕುವ ಉದ್ದೇಶದಿಂದ ಆಧಾರ್‌ ದೃಢೀಕರಣ ಮಾಡಲಾಗುತ್ತಿದೆ.‌ಇದರಿಂದಾಗಿ ಇಲಾಖೆಗೆ ಪಡಿತರವೂ ಉಳಿತಾಯವಾಗುತ್ತದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಆರ್‌.ರಾಚಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮಲ್ಲಿ ಕೆಲವು ದಿನಗಳ ಹಿಂದೆ ಈ ಪ್ರಕ್ರಿಯೆ ಆರಂಭಿಸಲಾಗಿತ್ತು. ನಂತರ ಇಲಾಖೆ ಸೂಚನೆ ಮೇರೆಗೆ ಸ್ಥಗಿತಗೊಳಿಸಲಾಗಿತ್ತು. ಕೆಲವು ಫಲಾನುಭವಿಗಳು ಆ ಸಂದರ್ಭದಲ್ಲಿಯೇ ಇ–ಕೆವೈಸಿ ಮಾಡಿಸಿಕೊಂಡಿದ್ದಾರೆ. ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಬೆರಳಚ್ಚು ದಾಖಲಿಸುವ ಯಂತ್ರಗಳಿದ್ದು, ನ್ಯಾಯ ಬೆಲೆ ಅಂಗಡಿಯವರೇ ಆಧಾರ್‌ ದೃಢೀಕರಣ ಮಾಡಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಮಾಡಬೇಕಾಗಿರುವುದು ಏನು?

ಕುಟುಂಬವೊಂದು ಪಡಿತರ ಚೀಟಿ ಹೊಂದಿದ್ದರೆ, ಅದರಲ್ಲಿ ಕುಟುಂಬದ ಸದಸ್ಯರ ಹೆಸರುಗಳು ಇರುತ್ತವೆ. ಇವರೆಲ್ಲರೂ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಬಯೊಮೆಟ್ರಿಕ್‌ ಯಂತ್ರದಲ್ಲಿ ಬೆರಳಚ್ಚು (ಹೆಬ್ಬೆಟ್ಟು) ನೀಡಬೇಕು.

ಹೀಗೆ ಮಾಡಿದರೆ ಆಧಾರ್‌ ದೃಢೀಕರಣ ಪ್ರಕ್ರಿಯೆ ಮುಗಿದಂತೆ.

‘ಪಡಿತರ ಚೀಟಿಯಲ್ಲಿ ಕುಟುಂಬದ ಐವರ ಹೆಸರಿದ್ದರೆ, ಐವರು ಕೂಡ ಆಧಾರ್‌ ದೃಢೀಕರಣ ಮಾಡಿಸಿಕೊಳ್ಳಬೇಕು. ಒಂದು ವೇಳೆ ನಾಲ್ವರು ಮಾತ್ರ ಮಾಡಿಸಿಕೊಂಡರೆ, ಗಡುವು ಕಳೆದ ಬಳಿಕ ಒಬ್ಬರನ್ನು ಕೈಬಿಟ್ಟು ನಾಲ್ವರಿಗೆ ಮಾತ್ರ ಪಡಿತರ ನೀಡಲಾಗುವುದು.

ದೃಢೀಕರಣ ಮಾಡಿಸಿದ ನಂತರವಷ್ಟೇ ಉಳಿದವರಿಗೆ ಪಡಿತರ ನೀಡುತ್ತೇವೆ’ ಎಂದು ರಾಚಪ್ಪ ವಿವರಿಸಿದರು.

‘ಜಿಲ್ಲೆಯಲ್ಲಿ ಸದ್ಯ ಅಂತ್ಯೋದಯ, ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ಗಳ ಒಟ್ಟು 8,83,406 ಫಲಾನುಭವಿಗಳು ಪಡಿತರವನ್ನು ಪಡೆಯುತ್ತಿದ್ದಾರೆ. ಇವರೆಲ್ಲರೂ ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ಮಾಡಿ ಆಧಾರ್‌ ದೃಢೀಕರಣ ಮಾಡಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.