ADVERTISEMENT

ಚಾಮರಾಜನಗರ | ಕಾಳಸಂತೆಯಲ್ಲಿ ಪಡಿತರ: ಬಡವರ ಆಹಾರಕ್ಕೆ ಕನ್ನ

ಒಂದೇ ತಿಂಗಳಲ್ಲಿ ಆರು ಪ್ರಕರಣ ಪತ್ತೆ: ಸಾವಿರಾರು ಕೆ.ಜಿ ಅಕ್ಕಿ ವಶ

ಎಚ್.ಬಾಲಚಂದ್ರ
ಅವಿನ್ ಪ್ರಕಾಶ್
Published 7 ಫೆಬ್ರುವರಿ 2025, 4:57 IST
Last Updated 7 ಫೆಬ್ರುವರಿ 2025, 4:57 IST
ಕೊಳ್ಳೇಗಾಲ ತಾಲ್ಲೂಕಿನ ಹೊಂಡರ ಬಾಳು ಗ್ರಾಮದಲ್ಲಿ ಈಚೆಗೆ ಅಕ್ರಮವಾಗಿ ಶೇಖರಣೆ ಮಾಡಿಟ್ಟಿದ್ದ ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿರುವುದು
ಕೊಳ್ಳೇಗಾಲ ತಾಲ್ಲೂಕಿನ ಹೊಂಡರ ಬಾಳು ಗ್ರಾಮದಲ್ಲಿ ಈಚೆಗೆ ಅಕ್ರಮವಾಗಿ ಶೇಖರಣೆ ಮಾಡಿಟ್ಟಿದ್ದ ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿರುವುದು   

ಚಾಮರಾಜನಗರ/ಕೊಳ್ಳೇಗಾಲ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಆಹಾರ ಭದ್ರತೆ ಒದಗಿಸಲು ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯು ಜಿಲ್ಲೆಯ ಕೆಲವೆಡೆ ದುರುಪಯೋಗವಾಗುತ್ತಿದೆ. ಬಡವರಿಗೆ ಸರ್ಕಾರದಿಂದ ಉಚಿತವಾಗಿ ವಿತರಿಸುತ್ತಿರುವ ಆಹಾರ ಪದಾರ್ಥಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. 

ಜಿಲ್ಲೆಯಲ್ಲಿ ಪಡಿತರ ಕೇಂದ್ರಗಳ ಮೂಲಕ ಬಡವರಿಗೆ ವಿತರಿಸುವ ಆಹಾರ ಧಾನ್ಯಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ದೂರುಗಳು ಹೆಚ್ಚಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಈಚೆಗೆ  ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಒಂದೇ ತಿಂಗಳಲ್ಲಿ 6 ಪ್ರಕರಣಗಳು ಬೆಳಕಿಗೆ ಬಂದಿವೆ.

ಅಕ್ರಮವಾಗಿ ಪಡಿತರ ಸಾಗಾಟ ಹಾಗೂ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ನಡೆಸಿದ ದಾಳಿಯಲ್ಲಿ ಕುದೇರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3.2 ಕ್ವಿಂಟಲ್‌ ಅಕ್ಕಿ ಹಾಗೂ ಬೇಳೆ, ಮಾಂಬಳ್ಳಿ ಠಾಣಾ ವ್ಯಾಪ್ತಿಯಲ್ಲಿ 4.44 ಕ್ವಿಂಟಲ್ ಅಕ್ಕಿ, ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕ್ರಮವಾಗಿ 35.30 ಕ್ವಿಂಟಲ್‌, 4.20 ಕ್ವಿಂಟಲ್‌, 4.06 ಕ್ವಿಂಟಲ್‌ ಹಾಗೂ ಕೊಳ್ಳೇಗಾಲ ನಗರ ಠಾಣೆ ವ್ಯಾಪ್ತಿಯಲ್ಲಿ 6 ಕ್ವಿಂಟಲ್‌ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.

ADVERTISEMENT

6 ಪ್ರಕರಣಗಳಲ್ಲಿ ₹ 1.71 ಲಕ್ಷ ಮೌಲ್ಯದ 49.57 ಕ್ವಿಂಟಲ್‌ ಪಡಿತರ ಅಕ್ಕಿ ಹಾಗೂ ಆಹಾರ ಪದಾರ್ಥಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು 7 ಮಂದಿಯನ್ನು ಬಂಧಿಸಿದ್ದಾರೆ. ನಾಲ್ಕು ಪ್ರಕರಣಗಳಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಿದ್ದರೆ, ಎರಡು ಪ್ರಕರಣಗಳಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವುದು ಕಂಡುಬಂದಿದೆ.

2024ರಲ್ಲೂ ಅಕ್ರಮ ಪಡಿತರ ಅಕ್ಕಿ ಸಾಗಾಟ, ದಾಸ್ತಾನು ಸಂಬಂಧ 11 ಪ್ರಕರಣಗಳು ದಾಖಲಾಗಿವೆ. ಜನವರಿಯಲ್ಲಿ 3.22 ಕ್ವಿಂಟಲ್‌ ಅಕ್ಕಿ,  ಫೆಬ್ರುವರಿಯಲ್ಲಿ 1.37 ಕ್ವಿಂಟಲ್‌, ಮೇನಲ್ಲಿ 14.55 ಕ್ವಿಂಟಲ್ ಅಕ್ಕಿ, ಜೂನ್‌ನಲ್ಲಿ 12.75 ಕ್ವಿಂಟಲ್, ಆಗಸ್ಟ್‌ನಲ್ಲಿ 2.48 ಕ್ವಿಂಟಲ್‌, ಸೆಪ್ಟೆಂಬರ್‌ನಲ್ಲಿ 9.33 ಕ್ವಿಂಟಲ್, ನವೆಂಬರ್‌ನಲ್ಲಿ 7.84 ಕ್ವಿಟಂಲ್ ಅಕ್ಕಿ, 55 ಕೆ.ಜಿ ರಾಗಿ, ಡಿಸೆಂಬರ್‌ನಲ್ಲಿ 7.53 ಕ್ವಿಂಟಲ್ ಅಕ್ಕಿ, 91 ಕೆ.ಜಿ ಹಾಲಿನ ಪುಡಿ ವಶಪಡಿಸಿಕೊಳ್ಳಲಾಗಿದ್ದು 13 ಪ್ರಕರಣಗಳಲ್ಲಿ 13 ಮಂದಿಯನ್ನು ಬಂಧಿಸಲಾಗಿದೆ.

ದಾಳಿ ವೇಳೆ ₹1.48 ಲಕ್ಷ ಮೌಲ್ಯದ 59.07 ಕ್ವಿಂಟಲ್ ಪಡಿತರ ಅಕ್ಕಿ, ₹2,310 ಮೌಲ್ಯದ 55 ಕೆ.ಜಿ ರಾಗಿ, ₹13,657 ಮೌಲ್ಯದ 91 ಕೆ.ಜಿ ಹಾಲಿನ ಪುಡಿ ದೊರೆತಿದ್ದು ಪಡಿತರ ಕೇಂದ್ರಗಳಿಗೆ ಹಾಗೂ ಅಂಗವನಾಡಿ ಕೇಂದ್ರಗಳಿಗೆ ಪೂರೈಕೆಯಾದ ಆಹಾರ ಪದಾರ್ಥಗಳಾಗಿವೆ ಎನ್ನುತ್ತಾರೆ ಅಧಿಕಾರಿಗಳು.

ಹೇಗೆ ನಡೆಯುತ್ತಿದೆ ದಂಧೆ: ಚಾಮರಾಜನಗರ ಜಿಲ್ಲೆ ತಮಿಳುನಾಡು ಹಾಗೂ ಕೇರಳ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದ್ದು ಈ ಭಾಗಗಳಲ್ಲಿ ಅಕ್ರಮವಾಗಿ ಪಡಿತರ ಸಾಗಣೆ ಹೆಚ್ಚಾಗಿದೆ. ಗ್ರಾಮೀಣ ಭಾಗಗಳಲ್ಲಿ ಪಡಿತರ ಅಕ್ಕಿ, ಬೇಳೆ ಸೇರಿದಂತೆ ಆಹಾರ ಪದಾರ್ಥಗಳನ್ನು ಖರೀದಿಸುವ ಜಾಲ ಬೇರೂರಿದೆ. ಕಾಡಂಚಿನ ಗ್ರಾಮಗಳು ಹಾಗೂ ನಗರ, ಪಟ್ಟಣಗಳಿಂದ ದೂರವಿರುವ ಗ್ರಾಮಗಳಲ್ಲಿ ಸಮಸ್ಯೆ ಗಂಭೀರವಾಗಿದೆ.

ಬಡತನವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಕಿಡಿಗೇಡಿಗೇಡಿಗಳು ತೀರಾ ಕಡಿಮೆ ಬೆಲೆಗೆ ಅಕ್ಕಿಯನ್ನು ಖರೀದಿಸಿ ರೈಸ್‌ಮಿಲ್‌ಗಳಲ್ಲಿ ಪಾಲಿಶಾ್‌ ಮಾಡಿ ಮತ್ತೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಕಾಳಸಂತೆಯಲ್ಲಿ ನಡೆಯುವ ಈ ವ್ಯವಹಾರ ಕೋಟಿಗೂ ಮೀರಿದೆ ಎನ್ನುತ್ತಾರೆ ಮಾರುಕಟ್ಟೆಗೆ ಮಾರುವ ಮೂಲಕ ಕೋಟ್ಯಂತರ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ರಾಜಾರೋಷವಾಗಿ ಪಡಿತರ ಅಕ್ರಮ ಸಾಗಾಟ ಹಾಗೂ ಮಾರಾಟ ನಡೆಯುತ್ತಿದೆ. ಈ ದಂಧೆಯಲ್ಲಿ ಪ್ರಭಾವಿಗಳು ಶಾಮೀಲಾಗಿರುವುದರಿಂದ ದಂಧೆಕೋರರು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಪ್ರಭಾವಕ್ಕೆ ಮಣಿಯದೆ ಪಡಿತರ ಕಳ್ಳಸಾಗಣೆಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಮುಖಂಡ ನಿತಿನ್‌ ಚಂದ್.

ಅಕ್ರಮ ನಡೆಯುವುದು ಹೇಗೆ: ಕಾಳಸಂತೆಯಲ್ಲಿ ಎರಡು ರೀತಿಯಲ್ಲಿ ಪಡಿತರ ಅಕ್ರಮವಾಗಿ ಮಾರಾಟವಾಗುತ್ತದೆ. ಸಣ್ಣ ಪುಟ್ಟ ಏಜೆಂಟರು ಗ್ರಾಹಕರಿಂದ ನೇರವಾಗಿ ಅಕ್ಕಿ ಖರೀದಿಸಿ ಮಿಲ್‌ಗಳಿಗೆ ಪೂರೈಸುತ್ತಾರೆ. ಕೆಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಫಲಾನುಭವಿಗಳಿಗೆ ಬಿಡುಗಡೆಯಾಗುವ ಪಡಿತರವನ್ನು ನೇರವಾಗಿ ಮಾರಾಟ ಮಾಡುತ್ತಾರೆ. ಅಧಿಕಾರಿಗಳಿಗೆ ಈ ವಿಚಾರ ತಿಳಿಸಿದ್ದರೂ ಗಂಭೀರವಾಗಿ ಪರಿಗಣಿಸಿಲ್ಲ. ಅಕ್ಕಿ ಮಾರಾಟ ಮಾಡುವವರು, ಸಾಗಿಸುವವರು ಪಾಲಿಶ್ ಮಾಡುವವರು ಒಟ್ಟಾಗಿ ದಂಧೆಯಲ್ಲಿ ಭಾಗವಹಿಸಿದ್ದಾರೆ.

ಸರ್ಕಾರದಿಂದ ಉಚಿತವಾಗಿ ವಿತರಣೆಯಾಗುವ ಪಡಿತರ ಮತ್ತೊಂದು ರೂಪ ಪಡೆದುಕೊಂಡು ದುಬಾರಿ ಬೆಲೆಗೆ ಅಧಿಕೃತ ಮಾರುಕಟ್ಟೆಯ ಮೂಲಕ ಜನರ ಮನೆ ಸೇರುತ್ತಿದೆ ಎಂದು ಆರೋಪಿಸುತ್ತಾರೆ ಡಾ.ಬಿ.ಅಂಬೇಡ್ಕರ್ ಸೇನೆಯ ತಾಲ್ಲೂಕು ಅಧ್ಯಕ್ಷ ತೇಜು.

ಕ್ರಮವಾಗಿ ಪಡಿತರ ಸಾಗಾಟ ಹಾಗೂ ಮಾರಾಟದ ವಿರುದ್ಧ ಪೊಲೀಸ್ ಇಲಾಖೆ ಕಾರ್ಯಾಚರಣೆ ಚುರುಕುಗೊಳಿಸಿರುವುದರಿಂದ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಅಕ್ರಮ ಪಡಿತರ ದಂಧೆ ಮಟ್ಟಹಾಕಲು ಪೊಲೀಸ್ ಇಲಾಖೆ ಬದ್ಧವಾಗಿದೆ.
–ಬಿ.ಟಿ.ಕವಿತಾ ಎಸ್‌ಪಿ
ಪಡಿತರವನ್ನು ಅರ್ಹರಿಗೆ ತಲುಪಿಸುವ ಕೆಲಸವನ್ನು ಇಲಾಖೆ ಪರಿಣಾಮಕಾರಿಯಾಗಿ ಮಾಡಿದೆ. ಪಡಿತರ ಪಡೆದವರು ಹಣದ ಆಸೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಬಾರದು ಈ ಬಗ್ಗೆ ಇಲಾಖೆಯಿಂದಲೂ ಜಾಗೃತಿ ಮೂಡಿಸಲಾಗುವುದು. ಎಲ್ಲೆಡೆ ದಾಳಿ ಚುರುಕುಗೊಳಿಸಲಾಗುವುದು
ಯೋಗಾನಂದ್‌, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ
ಪಡಿತರ ಅಕ್ಕಿಯನ್ನು ಮಾರಾಟ ಮಾಡುವವರ ಪಡಿತರ ಕಾರ್ಡ್‌ ರದ್ದುಗೊಳಿಸಲಾಗುವುದು. ಈ ಬಗ್ಗ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು
ಪ್ರಸಾದ್ ,ಆಹಾರ ನಿರೀಕ್ಷಕ
ಪಡಿತರ ಅಕ್ಕಿ ಸಾಗಣೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಕ್ರಮ ಪಡಿತರ ಸಾಗಾಟ ಸಂಬಂಧ ನಿರಂತರ ದಾಳಿಗಳು ನಡೆಯುತ್ತಿವೆ
ವಿಶ್ವನಾಥ್ ಶಿರಸ್ತೆದಾರ್

‘ಹಳ್ಳಿಗಳಲ್ಲಿ ಅಕ್ರಮ ಹೆಚ್ಚು’

ಹಳ್ಳಿಗಳಿಗೆ ನೇರವಾಗಿ ಹೋಗಿ ಹಣದ ಆಮಿಷವೊಡ್ಡಿ ಕಡಿಮೆ ಬೆಲೆಗೆ ಅಕ್ಕಿ ಖರೀದಿಸುವ ಜಾಲ ಸಕ್ರಿಯವಾಗಿದೆ. ಅಗರ ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಅಕ್ರಮ ನಡೆಯುತ್ತಿದೆ. ರಾತ್ರಿಯ ಹೊತ್ತು ಲಾರಿಗಳಲ್ಲಿ ಗ್ರಾಮಗಳಿಂದ ಪಡಿತರ ಸಾಗಿಸಲಾಗುತ್ತದೆ. ದ್ವಿಚಕ್ರ ವಾಹನಗಳನ್ನೂ ಅಕ್ಕಿ ಮೂಟೆಗಳನ್ನು ಸಾಗಿಸುವ ದೃಶ್ಯಗಳನ್ನು ಕಾಣಬಹುದು. ಹೊರ ಜಿಲ್ಲೆಗಳಿಗೂ ಹೆಚ್ಚಿನ ಪ್ರಮಾಣದ ಪಡಿತರ ಸಾಗಾಟವಾಗುತ್ತಿದೆ ಎನ್ನುತ್ತಾರೆ ಚಿಲಕವಾಡಿ ಗ್ರಾಮದ ಪ್ರದೀಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.