ADVERTISEMENT

ಚಾಮರಾಜನಗರ: ರಾಜ್ಯ ಬಜೆಟ್‌ಗೆ ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 15:11 IST
Last Updated 8 ಮಾರ್ಚ್ 2021, 15:11 IST
ಆರ್‌.ಸುಂದರ್‌
ಆರ್‌.ಸುಂದರ್‌   

ಶ್ರೀಮಂತರ ಪರ ಬಜೆಟ್‌

ಬಜೆಟ್‌ ಬಡವರ ಪರವಾಗಿಲ್ಲ. ರಾಜ್ಯದಲ್ಲಿ 18 ನಿಗಮಗಳಿವೆ. 16 ನಿಗಮಗಳಿಗೆ ಒಟ್ಟಾಗಿ ₹500 ಕೋಟಿ ಹಂಚಿಕೆ ಮಾಡಿದ್ದರೆ, ಎರಡು ನಿಗಮಗಳಿಗೆ ಮಾತ್ರ ₹1000 ಕೋಟಿ ‌ಕೊಟ್ಟಿದ್ದಾರೆ. ಕೇಂದ್ರದ ರೀತಿಯಲ್ಲಿ ರಾಜ್ಯ ಸರ್ಕಾರ ಕೂಡ ಉಳ್ಳವರ ಪರವಾಗಿದೆ. ಬಜೆಟ್‌ನಲ್ಲಿ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಪರಿಸರ ಪ್ರವಾಸೋದ್ಯಮ ಬಿಟ್ಟರೆ ಬೇರೆನೂ ಹೊಸ ಯೋಜನೆ ಘೋಷಣೆ ಮಾಡಿಲ್ಲ. ಚಾಮರಾಜನಗರಕ್ಕೆ ಮೂರನೇ ಹಂತದ ಕುಡಿಯುವ ನೀರಿನ ಯೋಜನೆಗೆ ಅನುದಾನ ಬಿಡುಗಡೆ ಮಾಡುವ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ.

–ಸಿ.ಪುಟ್ಟರಂಗಶೆಟ್ಟಿ, ಚಾಮರಾಜನಗರ ಶಾಸಕ

ADVERTISEMENT

ಮಾದರಿ ಬಜೆಟ್‌

ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲ್ಲೂ ಯಡಿಯೂರಪ್ಪ ಅವರು ಅರ್ಥ ವ್ಯವಸ್ಥೆಯನ್ನು ಸಮತೋಲನ ಮಾಡಿಕೊಂಡು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಂತಹ ಮಾದರಿ ಬಜೆಟ್‌ ಮಂಡಿಸಿದ್ದಾರೆ. ಬಡವರು, ಮಹಿಳೆಯರು, ರೈತರು ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೆ ಅನುಕೂಲವಾಗುವಂತಹ, ಮಧ್ಯಮ ವರ್ಗಕ್ಕೆ ಹೊರೆಯಾಗದಂತೆ ಮುಖ್ಯಮಂತ್ರಿ ಅವರು ನೋಡಿಕೊಂಡಿದ್ದಾರೆ. ಚಾಮರಾಜನಗರದ ಅರಿಸಿನ ಮಂಡಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿದೆ. ಇದು ಸ್ವಾಗತಾರ್ಹ.

– ಆರ್.ಸುಂದರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಜಿಲ್ಲೆಗೆ ನಿರಾಸೆ

ನಮ್ಮ ನಿರೀಕ್ಷೆಯಂತೆ ಜಿಲ್ಲೆಗೆ ಯಾವುದೇ ಮಹತ್ವದ ಕೊಡುಗೆಗಳಿಲ್ಲ. ಬಿಜೆಪಿ ಸರ್ಕಾರ ಮತ್ತೆ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದೆ. ಇದರ ಜೊತೆಗೆ ಬೆಲೆ ಏರಿಕೆ ನಿಯಂತ್ರಣಕ್ಕೆ ಯಾವುದೇ ಘೋಷಣೆಗಳನ್ನು ಮಾಡಿಲ್ಲ. ಇಂಧನ, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅವರ ಹೊರೆಯನ್ನು ಇಳಿಸುವ ಪ್ರಯತ್ನವನ್ನು ಯಡಿಯೂರಪ್ಪ ಅವರು ಮಾಡಿಲ್ಲ. ಹಾಗಾಗಿ, ಇದೊಂದು ನಿರಾಶಾದಾಯಕ ಬಜೆಟ್‌.

–ಪಿ.ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

ಸಮಾಧಾನಕರವಾಗಿಲ್ಲ

ಸಾವಯವ ಕೃಷಿ ಪ್ರೋತ್ಸಾಹಕ್ಕೆ ₹500 ಕೋಟಿ ಮೀಸಲಿಟ್ಟ ಸರ್ಕಾರ ಹೈಬ್ರಿಡ್‌ ಬೀಜ ಬಿತ್ತನೆಗೆ ಉತ್ತೇಜನ ನೀಡಲು ಹೊರಟಿದೆ. ಇದು ಸರ್ಕಾರದ ದ್ವಂದ್ವ ನಿಲುವವನ್ನು ತೋರಿಸುತ್ತದೆ. ಪ್ರತಿ ಬಾರಿಯೂ ರೈತರನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗುತ್ತಿದೆ. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸುವಂತೆ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಯಾವ ಸರ್ಕಾರವೂ ಈ ಬಗ್ಗೆ ಗಮನ ಹರಿಸಿಲ್ಲ. ನಮ್ಮ ಜಿಲ್ಲೆಗೆ ಬಜೆಟ್‌ನಲ್ಲಿ ಏನೂ ಕೊಡುಗೆಗಳನ್ನು ನೀಡಲಾಗಿಲ್ಲ. ಒಟ್ಟಾರೆ, ಬಜೆಟ್‌ ಸಮಾಧಾನಕರವಾಗಿಲ್ಲ

– ಹೆಬ್ಬಸೂರು ಬಸವಣ್ಣ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ಸಾವಯವ ಕೃಷಿಗೆ ಒತ್ತು: ಸ್ವಾಗತಾರ್ಹ

ಸಾವಯವ ಕೃಷಿಗೆ ₹500 ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ ನಿರ್ಧಾರ. ಕೃಷಿ ವಿವಿಗಳಲ್ಲಿ ರೈತರ ಮಕ್ಕಳಿಗೆ ಮೀಸಲಾತಿ ಹೆಚ್ಚಿಸಿರುವುದು ಅಭಿನಂದನಾರ್ಹ. ಕಿರು ಬೆಳೆ ಸಂಸ್ಕರಣೆ ಘಟಕಕ್ಕೆ ಕೇಂದ್ರ ಶೇ 35ರಷ್ಟು ಸಬ್ಸಿಡಿ ನೀಡುತ್ತಿದೆ. ರಾಜ್ಯ ಸರ್ಕಾರವೂ ಶೇ 15ರಷ್ಟು ಸಬ್ಸಿಡಿ ಘೋಷಿಸಿರುವುದು ಒಳ್ಳೆಯ ಬೆಳವಣಿಗೆ. ಸಾವಯವ ಇಂಗಾಲ ಹೆಚ್ಚಳಕ್ಕೆ ಪ್ರೋತ್ಸಾಹ ನೀಡುವ ಪ್ರಸ್ತಾವವು ಉತ್ತಮ ನಿರ್ಧಾರ. ಈ ಎಲ್ಲ ಘೋಷಣೆಗಳು ಜಾರಿಗೆ ಬರಬೇಕು. ಬಜೆಟ್‌ನಲ್ಲಿ ಜಿಲ್ಲೆಗೆ ಹೆಚ್ಚಿನ ಪ್ರಾತಿನಿಧ್ಯ ಇಲ್ಲ. ನೀರಾವರಿ ಯೋಜನೆಗಳನ್ನು ಘೋಷಣೆ ಮಾಡಿಲ್ಲ.

– ಹೊನ್ನೂರು ಪ್ರಕಾಶ್‌, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.