ADVERTISEMENT

ಎಸ್ಸೆಸ್ಸೆಲ್ಸಿ| ಚಾಮರಾಜನಗರಕ್ಕೆ ದಾಖಲೆ ಫಲಿತಾಂಶ ಬಂದಿದ್ದು ಹೇಗೆ?

ಎಸ್ಸೆಸ್ಸೆಲ್ಸಿ: ಶಿಕ್ಷಕರ ಶ್ರಮ, ವಿದ್ಯಾರ್ಥಿಗಳ ಪ್ರಯತ್ನ, ಕೃಪಾಂಕದ ಕೊಡುಗೆಯೂ ಇದೆ

ಸೂರ್ಯನಾರಾಯಣ ವಿ
Published 20 ಮೇ 2022, 19:30 IST
Last Updated 20 ಮೇ 2022, 19:30 IST
ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಮಕ್ಕಳ ಓದಿನ ಕಡೆಗೆ ಗಮನಹರಿಸುವಂತೆ ಪೋಷಕರಿಗೆ ತಿಳಿ ಹೇಳುತ್ತಿದ್ದರು
ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಮಕ್ಕಳ ಓದಿನ ಕಡೆಗೆ ಗಮನಹರಿಸುವಂತೆ ಪೋಷಕರಿಗೆ ತಿಳಿ ಹೇಳುತ್ತಿದ್ದರು   

ಚಾಮರಾಜನಗರ: 2021–22ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯು ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಲ್ಲಿ ಶೇ 92.13 ಮಂದಿ ತೇರ್ಗಡೆಯಾಗಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ದೊರೆತ ಅತ್ಯುನ್ನತ ಫಲಿತಾಂಶ ಇದು.

ಐದು ವರ್ಷಗಳ ಫಲಿತಾಂಶವನ್ನು ಗಮನಿಸಿದರೆ ಜಿಲ್ಲೆಯಲ್ಲಿ ಫಲಿತಾಂಶ ವರ್ಷದಿಂದ ವರ್ಷಕ್ಕೆ ಸುಧಾರಿಸುತ್ತಲೇ ಬಂದಿದೆ.2018ರಲ್ಲಿ ಶೇ 74.46 ಫಲಿತಾಂಶದೊಂದಿಗೆ ಜಿಲ್ಲೆ 24ನೇ ಸ್ಥಾನಗಳಿಸಿತ್ತು. 2019ರಲ್ಲಿ 15ನೇ ಸ್ಥಾನಕ್ಕೆ ಏರಿತ್ತು. ಆ ವರ್ಷ ಶೇ 80.58ರಷ್ಟು ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. 2020ರ ವಾರ್ಷಿಕ ಪರೀಕ್ಷೆಯಲ್ಲಿ ಶೇ 87.10ರಷ್ಟು ಫಲಿತಾಂಶ ದಾಖಲಾಗಿ 11 ಸ್ಥಾನ ಗಳಿಸಿತ್ತು. ಕಳೆದ ವರ್ಷ (2021) ಕೋವಿಡ್‌ ಕಾರಣಕ್ಕೆ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದರು.

ಕಳೆದ ವರ್ಷದಿಂದ ಫಲಿತಾಂಶದಲ್ಲಿ ಗ್ರೇಡ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಹಾಗಾಗಿ, ಜಿಲ್ಲೆಗಳಿಗೆ ರ‍್ಯಾಂಕ್‌ ಅಥವಾ ಸ್ಥಾನಮಾನ ನೀಡಲಾಗುತ್ತಿಲ್ಲ. ಈ ಬಾರಿ ಜಿಲ್ಲೆಯು ‘ಎ’ ಶ್ರೇಣಿ ಪಡೆದಿರುವ ಜಿಲ್ಲೆಗಳ ಪಟ್ಟಿಯಲ್ಲಿದೆ.

ADVERTISEMENT

2021–22ನೇ ಶೈಕ್ಷಣಿಕ ಸಾಲಿನಲ್ಲಿ ಶಾಲಾರಂಭದ ಸಮಯದಲ್ಲಿ ಕೋವಿಡ್‌ ಹಾವಳಿ ಇದ್ದುದರಿಂದ ತರಗತಿಗಳು ವಿಳಂಬವಾಗಿ ಆರಂಭವಾದರೂ ನಂತರ ಸಮಸ್ಯೆ ಆಗಿರಲಿಲ್ಲ. ಪಾಠಗಳು ಎಂದಿನಂತೆ ನಡೆದವು.

ಹತ್ತಾರು ಕ್ರಮ: ಫಲಿತಾಂಶವನ್ನು ಹೆಚ್ಚಿಸಲು ಪಣ ತೊಟ್ಟಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರ ಮಾರ್ಗದರ್ಶನದಲ್ಲಿ ಹಲವು ಕ್ರಮಗಳನ್ನು ಕೈಗೊಂಡಿತ್ತು.

ಜಿಲ್ಲಾ ಮಟ್ಟದಲ್ಲಿ ವಿಷಯವಾರು ಸಂಪನ್ಮೂಲ ಶಿಕ್ಷಕರ ತಂಡ ರಚನೆ, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರಗಳ ಆಯೋಜನೆ, ಪೂರ್ವ ಸಿದ್ಧತಾ ಪರೀಕ್ಷೆಗೂ ಮೊದಲು ಜಿಲ್ಲಾ ಮಟ್ಟದಲ್ಲಿ ಎರಡು ಸಾಧನಾ ಮಾದರಿ ಪರೀಕ್ಷೆ ನಡೆಸಿರುವುದು, ಮಕ್ಕಳು ಓದುವಂತೆ ಪ್ರೋತ್ಸಾಹಿಸಲುಶಿಕ್ಷಕರು ಮನೆ ಮನೆಗೆ ಭೇಟಿ, ಬೆಳಿಗ್ಗೆ ಸಂಜೆ ವಿಶೇಷ ತರಗತಿಗಳು, ಭಾನುವಾರ ಸೇರಿ ರಜಾ ದಿನಗಳಲ್ಲೂ ಪಾಠ, ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ವಿಶೇಷ ಪಾಠ, ಶಾಲೆಗಳಲ್ಲಿ ಗುಂಪು ಅಧ್ಯಯನ, ವಿದ್ಯಾರ್ಥಿಗಳಲ್ಲಿಪರೀಕ್ಷಾಭಯವನ್ನು ಹೋಗಲಾಡಿಸಲು ವಿಶೇಷ ಕಾರ್ಯಾಗಾರಗಳು, ಶಿಕ್ಷಕರಿಗೆ ವಿಶೇಷ ತರಬೇತಿಗಳು ಹೀಗೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.

ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಶಿಕ್ಷಕರು ದತ್ತು ಪಡೆದು ಬೋಧಿಸಿದ್ದು ಕೂಡ ಫಲಿತಾಂಶದ ಹೆಚ್ಚಳಕ್ಕೆ ಕಾರಣವಾಗಿದೆ. ತೇರ್ಗಡೆಯಾಗಲು ಬೇಕಾದಂತಹ ಕನಿಷ್ಠ ಅಂಕಗಳನ್ನು ಪಡೆಯುವ ಸೂತ್ರ ಪಾಲನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ಪಡೆಯುವ ಕೌಶಲವನ್ನು ತಿಳಿಸಿಕೊಡಲು ವಿಶೇಷ ಒತ್ತು.. ಮುಂತಾದ ಪ್ರಯತ್ನಗಳೂ ಜಿಲ್ಲೆಯಲ್ಲಿ ನಡೆದಿದ್ದವು.

ಕೃಪಾಂಕದ ಕೃಪೆ: ‘ಜಿಲ್ಲಾ ಮಟ್ಟದಲ್ಲಿ ಕೈಗೊಂಡಿದ್ದ ಕ್ರಮಗಳು ಒಂದೆಡೆಯಾದರೆ, ಕಡಿಮೆ ಅಂಕಗಳಿಂದ ವಿದ್ಯಾರ್ಥಿಗಳು ಅನುತ್ತೀರ್ಣವಾಗುವುದನ್ನು ತಪ್ಪಿಸುವುದಕ್ಕಾಗಿ ಗರಿಷ್ಠ ಶೇ 10ರಷ್ಟು ಕೃಪಾಂಕ ನೀಡುವ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ನಿರ್ಧಾರ ಕೂಡ. ಜಿಲ್ಲೆಯ ಹಲವು ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಇದರಿಂದಲೂ ಹಲವರು ತೇರ್ಗಡೆಯಾಗಿದ್ದಾರೆ’ ಎಂದು ಹೇಳುತ್ತಾರೆ ಶಿಕ್ಷಕರು.

ಚಾಮರಾಜನಗರ ತಾಲ್ಲೂಕಿಗೆ ಕೊನೆಯ ಸ್ಥಾನ

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚಾಮರಾಜನಗರ ತಾಲ್ಲೂಕು ಕೊನೆಯ ಸ್ಥಾನಕ್ಕೆ ಕುಸಿದಿದೆ. ಪ್ರತಿವರ್ಷ ಮೂರು ಇಲ್ಲವೇ ನಾಲ್ಕನೇ ಸ್ಥಾನ ಗಳಿಸುತ್ತಿತ್ತು. ಈ ಸಲ ಶೇ 87.70ರಷ್ಟು ಫಲಿತಾಂಶ ಬಂದಿದೆ.

ಚಾಮರಾಜನಗರ ತಾಲ್ಲೂಕಿನ ಫಲಿತಾಂಶ ಶೇ 2–3ರಷ್ಟು ಹೆಚ್ಚಾಗಿದ್ದರೂ, ಜಿಲ್ಲೆಯ ಒಟ್ಟಾರೆ ಫಲಿತಾಂಶ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದು ಹೇಳುತ್ತಾರೆ ಅಧಿಕಾರಿಗಳು.

ಹೆಚ್ಚು ವಿದ್ಯಾರ್ಥಿಗಳು: ಐದು ತಾಲ್ಲೂಕುಗಳ ಪೈಕಿ ಚಾಮರಾಜನಗರದಲ್ಲೇ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಎದುರಿಸಿದ್ದ 3,787 ವಿದ್ಯಾರ್ಥಿಗಳ ಪೈಕಿ 3,330 ಮಂದಿ ಉತ್ತೀರ್ಣರಾಗಿದ್ದಾರೆ.

‘ಇಲಾಖೆ ರೂಪಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿತ್ತು. ನಮ್ಮಲ್ಲಿ ಶಾಲೆಗಳ ಸಂಖ್ಯೆ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು. ವಿಷಯವಾರು ಫಲಿತಾಂಶ ವಿಶ್ಲೇಷಿಸಿದಾಗ ಗಣಿತದಲ್ಲಿ ಸ್ವಲ್ಪ ಹಿನ್ನಡೆಯಾಗಿರುವುದು ಕಂಡು ಬಂದಿದೆ. ಮುಂದಿನ ವರ್ಷ ಈ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಿ ಫಲಿತಾಂಶ ಸುಧಾರಿಸಲು ಕ್ರಮ ವಹಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಡಿದ ಶಿಕ್ಷಕರ ಕೊರತೆ: ‘ಡಿಸೆಂಬರ್‌ನಲ್ಲಿ ಶಿಕ್ಷಕರ ವರ್ಗಾವಣೆಯಾಗಿದ್ದರಿಂದ ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಡಿತು. ತಾಲ್ಲೂಕಿನಿಂದ ಒಂಬತ್ತು ಮಂದಿ ಹಿಂದಿ ಶಿಕ್ಷಕರು ಬೇರೆಡೆಗೆ ವರ್ಗವಾಗಿದ್ದರು. ಅತಿಥಿ ಶಿಕ್ಷಕರನ್ನು ನೇಮಕಮಾಡಲಾಗಿತ್ತು. ಬೇರೆ ಶಾಲೆಗಳ ಶಿಕ್ಷಕರನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿತ್ತು’ ಎಂದು ಹೇಳುತ್ತಾರೆ ಅಧಿಕಾರಿಗಳು.

––

ಉತ್ತಮ ಫಲಿತಾಂಶಕ್ಕಾಗಿ ಜಾರಿಗೆ ತಂದಿದ್ದ ಕಾರ್ಯಕ್ರಮಗಳಿಂದ ಸಾಕಷ್ಟು ಅನುಕೂಲವಾಗಿದೆ. ತಾಲ್ಲೂಕುವಾರು ಫಲಿತಾಂಶವನ್ನು ವಿಶ್ಲೇಷಿಸಲಾಗುತ್ತಿದೆ
ಎಸ್‌.ಎನ್‌.ಮಂಜುನಾಥ್‌, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.