
ಕೊಳ್ಳೇಗಾಲ: ಗಣರಾಜ್ಯೋತ್ಸವ ದಿನವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ್ ಬಸವರಾಜು ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಗರದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 9ಕ್ಕೆ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರು ಧ್ವಜಾರೋಹಣ ನಡೆಸಲಿದ್ದಾರೆ. ನಂತರ ಪಥಸಂಚಲನ ನಡೆಸಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿಜಿ ಭಾವಚಿತ್ರಕ್ಕೆ ಪುಷ್ಪನಮನ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಶಾಸಕರು ಹಾಜರಾಗಿ, ಭಾಷಣ ಮಾಡಲಿದ್ದಾರೆ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ’ ಎಂದರು.
‘ತಾಲ್ಲೂಕಿನ ಎಲ್ಲಾ ಕಚೇರಿಗಳಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನಡೆಸಿ ಸರಿಯಾದ ಸಮಯಕ್ಕೆ ಅಧಿಕಾರಿಗಳು ತಾಲ್ಲೂಕು ಆಡಳಿತದಿಂದ ನಡೆಯುವ ಕಾರ್ಯಕ್ರಮಕ್ಕೆ ತಪ್ಪದೆ ಭಾಗವಹಿಸಬೇಕು. ಗೈರು ಹಾಜರಾದ ಅಧಿಕಾರಿಗಳಿಗೆ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಸೂಚಿಸಲಾಗುವುದು. ಈಗಾಗಲೇ ಅನೇಕ ಬಾರಿ ಕೆಲವರು ನಿರಂತರವಾಗಿ ಗೈರಾಗುತ್ತಿದ್ದಾರೆ, ಅಂತವರಿಗೆ ಮುಲಾಜಿಲ್ಲದೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ನಗರಸಭೆ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ಹಾಗೂ ಅಧಿಕಾರಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.