ADVERTISEMENT

‘ಪಥ ಸಂಚಲನದಲ್ಲಿ ಹೆಜ್ಜೆ ಹಾಕಿದ್ದು ಸಂಭ್ರಮದ ಕ್ಷಣ’

ಚಾಮರಾಜನಗರ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ವಿದ್ಯಾರ್ಥಿ ತ್ರಿಷಾಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 6:47 IST
Last Updated 1 ಫೆಬ್ರುವರಿ 2026, 6:47 IST
ಬೆಂಗಳೂರಿನ ಮಾಣಿಕ್ ಶಾ ‌ಪರೇಡ್‌ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದ ಪಥಸಂಚಲನದಲ್ಲಿ ಭಾಗಹಿವಹಿಸಿ ಬಹುಮಾನ ಪಡೆದ ಚಾಮರಾಜನಗರ ವಿವಿ ರಾಷ್ಟ್ರೀಯ ಸೇವಾ ಯೋಜನೆ ಕೋಶದ ತ್ರಿಷಾ ಅವರನ್ನು ಸನ್ಮಾನಿಸಲಾಯಿತು
ಬೆಂಗಳೂರಿನ ಮಾಣಿಕ್ ಶಾ ‌ಪರೇಡ್‌ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದ ಪಥಸಂಚಲನದಲ್ಲಿ ಭಾಗಹಿವಹಿಸಿ ಬಹುಮಾನ ಪಡೆದ ಚಾಮರಾಜನಗರ ವಿವಿ ರಾಷ್ಟ್ರೀಯ ಸೇವಾ ಯೋಜನೆ ಕೋಶದ ತ್ರಿಷಾ ಅವರನ್ನು ಸನ್ಮಾನಿಸಲಾಯಿತು   

ಚಾಮರಾಜನಗರ: ಬೆಂಗಳೂರಿನ ಮಾಣಿಕ್ ಶಾ ‌ಪರೇಡ್‌ ಮೈದಾನದಲ್ಲಿ ಈಚೆಗೆ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದ ಪಥಸಂಚಲನದಲ್ಲಿ ಭಾಗಹಿವಹಿಸಿದ ಚಾಮರಾಜನಗರ ವಿಶ್ವವಿದ್ಯಾಲಯದ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶದ ತ್ರಿಷಾ ಎಂ.ಪಿ ಅವರಿಗೆ ವಿವಿ ಎನ್.ಎಸ್.ಎಸ್ ಕೋಶದ ವತಿಯಿಂದ ಸನ್ಮಾನಿಸಲಾಯಿತು.

ನಗರದ ವಾಸವಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ತ್ರಿಷಾ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶದಿಂದ ವಿವಿ ಮಟ್ಟದಲ್ಲಿ  ಆಯ್ಕೆಯಾಗಿದ್ದರು. 2026ನೇ ರಾಜ್ಯ ಗಣರಾಜ್ಯೋತ್ಸವ ಪಥಸಂಚಲನ ತರಬೇತಿ ಶಿಬಿರದಲ್ಲಿ ಭಾಗವಹಿಸಿ 77ನೇ ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥಸಂಚಲನ ಪರೇಡ್‍ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದರು.

ಪಥಸಂಚಲನದಲ್ಲಿ ವಾಯುಸೇನೆ, ಎನ್‍ಸಿಸಿ, ಪೊಲೀಸ್ ಇಲಾಖೆ, ಸ್ಕೌಟ್ಸ್ ಅಂಡ್ ಗೈಡ್ಸ್ ಸೇರಿದಂತೆ 34 ತಂಡಗಳು ಭಾಗಿಯಾಗಿದ್ದವು. ಇವುಗಳ ಪೈಕಿ ತ್ರಿಷಾ ಪ್ರತಿನಿಧಿಸಿದ ಎನ್.ಎಸ್.ಎಸ್ ತಂಡ ಪ್ರಥಮ ಬಹುಮಾನ ಗಳಿಸಿರುವುದು ಜಿಲ್ಲೆ ಮತ್ತು ಚಾಮರಾಜನಗರ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕೋಶದ ಘನತೆಯನ್ನು ಹೆಚ್ಚಿಸಿದೆ ಎಂದು ವಿವಿ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಶ್ಲಾಘಿಸಿದರು.

ADVERTISEMENT

ಗಣ ರಾಜ್ಯೋತ್ಸವ ದಿನ ಪಥಸಂಚಲನದಲ್ಲಿ ಹೆಜ್ಜೆ ಹಾಕುವುದು ಪ್ರತಿ ವಿದ್ಯಾರ್ಥಿಯ ಕನಸಾಗಿರುತ್ತದೆ. ತ್ರಿಷಾ ಅಚಲ ಶಿಸ್ತು ಮತ್ತು ಪರಿಶ್ರಮದ ಮೂಲಕ ವಿಶ್ವವಿದ್ಯಾಲಯದ ಪರವಾಗಿ ಭಾಗವಹಿಸಿ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಚಾರ ಎಂದು ಹಾರೈಸಿದರು.

ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶದ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಆರ್.ಮಹೇಶ್ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು ಕೇವಲ ಶ್ರಮದಾನ, ಸಮಾಜಮುಖಿ ಕೆಲಸಗಳಿಗೆ ಸೀಮಿತವಾಗಿಲ್ಲ. ಶಿಸ್ತು, ವ್ಯಕ್ತಿತ್ವ ವಿಕಸನ, ಧೈರ್ಯ ಮತ್ತು ನಾಯಕತ್ವ ಗುಣಗಳನ್ನು ರೂಪಿಸುವ ಅನೌಪಚಾರಿಕ ವಿಶ್ವವಿದ್ಯಾಲಯವಾಗಿದೆ ಎಂದರು.

ಇದೇ ಸಂದರ್ಭ ವಾಸವಿ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಕಾರ್ಯಕ್ರಮ ಅಧಿಕಾರಿಗಳನ್ನು ವಿಶ್ವವಿದ್ಯಾನಿಲಯದ ಕುಲಪತಿಗಳು, ಸಿಂಡಿಕೇಟ್ ಸದಸ್ಯರು, ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿಗಳು ಹಾಗೂ ದೈಹಿಕಶಿಕ್ಷಣ ನಿರ್ದೇಶಕರು ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತ್ರಿಷಾ ‘ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಂಡಿದ್ದು ಜೀವನ ಸುಂದರ ಕ್ಷಣ. ಸಾವಿರಾರು ಜನರ ಎದುರು ಗಣ್ಯರ ಸಮ್ಮುಖದಲ್ಲಿ ಪಥಸಂಚಲನದಲ್ಲಿ ಹೆಜ್ಜೆ ಹಾಕಿದ ಕ್ಷಣ ರೋಮಾಂಚನಕಾರಿಯಾಗಿತ್ತು ಎಂದರು.

ವಿವಿಯ ಸಿಂಡಿಕೇಟ್ ಸದಸ್ಯ ವೈ.ಶಿವಪ್ರಕಾಶ್, ಪುಟ್ಟಸ್ವಾಮಿ, ವಾಸವಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಶಾಂತರಾಜು, ಗಣೇಶ್ ಕಾರ್ಯಕ್ರಮದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.