ADVERTISEMENT

ಗುಂಡ್ಲುಪೇಟೆ | ಕಂದಾಯ ದಾಖಲೆ ಸಮರ್ಪಕ ವಿತರಣೆಗೆ ಆಗ್ರಹ

ತಾಲ್ಲೂಕು ಕಚೇರಿ ಎದುರು ರೈತ ಸಂಘಟನೆ ಪದಾಧಿಕಾರಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 5:34 IST
Last Updated 30 ಡಿಸೆಂಬರ್ 2025, 5:34 IST
ಗುಂಡ್ಲುಪೇಟೆಯಲ್ಲಿ ಕಂದಾಯ ದಾಖಲೆಗಳ ಸಮರ್ಪಕ ವಿತರಣೆಗೆ ಆಗ್ರಹಿಸಿ ರೈತ ಸಂಘಟನೆಯವರು ಪ್ರತಿಭಟನೆ ನಡೆಸಿದರು
ಗುಂಡ್ಲುಪೇಟೆಯಲ್ಲಿ ಕಂದಾಯ ದಾಖಲೆಗಳ ಸಮರ್ಪಕ ವಿತರಣೆಗೆ ಆಗ್ರಹಿಸಿ ರೈತ ಸಂಘಟನೆಯವರು ಪ್ರತಿಭಟನೆ ನಡೆಸಿದರು   

ಗುಂಡ್ಲುಪೇಟೆ: ಕಂದಾಯ ದಾಖಲೆಗಳ ಸಮರ್ಪಕ ವಿತರಣೆಗೆ ಆಗ್ರಹಿಸಿ ರೈತ ಸಂಘಟನೆ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲ್ಲೂಕಿನ ಕಚೇರಿ ಅಭಿಲೇಖಾಲಯದ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ದಿಕ್ಕಾರ ಘೋಷಣೆ ಕೂಗಿದರು. ಡಿಜಿಟಲೀಕರಣಕ್ಕಾಗಿ ದಾಖಲೆಗಳ ಸ್ಕ್ಯಾನಿಂಗ್‌ ಮಾಡಲಾಗುತ್ತಿದೆ ಎಂಬ ನೆಪ ಹೇಳಿಕೊಂಡು ಕೈಬರವಣಿಗೆ, ಎಂ.ಆರ್ ಇತರೆ ಕಂದಾಯ ದಾಖಲೆಗಳ ಸಮರ್ಪಕವಾಗಿ ನೀಡದೇ ರೈತರನ್ನು ಅಲೆಸಲಾಗುತ್ತಿದೆ. ಕ್ರಯ ನೋಂದಣಿ, ಆಸ್ತಿ ವಿಭಾಗ ಪತ್ರ, ಭೋಗ್ಯ ಇನ್ನೂ ಹಲವು ಉದ್ದೇಶಗಳಿಗೆ ದಾಖಲೆಗಳನ್ನು ಕೋರಿ ಸಲ್ಲಿಸುವ ರೈತರ ಅರ್ಜಿಗಳಿಗೆ ಸಕಾಲದಲ್ಲಿ ದಾಖಲೆಗಳನ್ನು ನೀಡುತ್ತಿಲ್ಲ. ನಿತ್ಯ ಸರ್ವರ್ ಸಮಸ್ಯೆ ಇದೆ, ಆಪರೇಟರ್ ಬಂದಿಲ್ಲ. ಇಂಟರ್‌ನೆಟ್ ಇಲ್ಲ ಕಾರಣಗಳನ್ನು ಹೇಳಿಕೊಂಡು ವಾಪಸ್ಸು ಕಳುಹಿಸಲಾಗುತ್ತಿದೆ. ಜುಲೈ ತಿಂಗಳಲ್ಲಿ ಸಲ್ಲಿಸಿದ ಅರ್ಜಿಗಳಿಗೆ ದಾಖಲೆಗಳನ್ನು ನೀಡಿಲ್ಲ ಎಂದು ಸ್ವೀಕೃತಿಯನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕೇರಳ ಮೂಲದವರಿಗೆ ಕೇಳಿದ ತಕ್ಷಣ ದಾಖಲೆ ಸಿಗುತ್ತದೆ. ನಮಗೇಕೇ ಕೊಡುವುದಿಲ್ಲ ಎಂದು ಪ್ರಶ್ನಿಸಿದರು. ಸಮಸ್ಯೆ ಗಂಭೀರವಾಗಿರುವ ಹಿನ್ನೆಲೆಯಲ್ಲಿ ತಹಶೀಲ್ದಾರರು ಸ್ಥಳಕ್ಕಾಗಮಿಸಿ ಈ ಬಗ್ಗೆ ವಿವರಣೆ ನೀಡಬೇಕು ಎಂದು ಒತ್ತಾಯಿಸಿದರು. ನಂತರ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉಪತಹಶೀಲ್ದಾರ್ ಜಯಪ್ರಕಾಶ್ ಸಮಸ್ಯೆ ಆಲಿಸಿದರು. ವಿತರಣಾ ವ್ಯವಸ್ಥೆ ಸರಿಪಡಿಸಿಕೊಂಡು, ಸೂಕ್ತ ರೀತಿಯಲ್ಲಿ ದಾಖಲೆಗಳನ್ನು ನೀಡುವ ಸಂಬಂಧ ಮೇಲಧಿಕಾರಿಗಳ ಜತೆ ಚರ್ಚಿಸಿ ಕ್ರಮ ವಹಿಸುವ ಭರವಸೆ ನೀಡಿದರು.

ADVERTISEMENT

ಈ ಸಂದರ್ಭದಲ್ಲಿ ರೈತ ಸಂಘಟನೆ ಮುಖಂಡರಾದ ಹೊನ್ನೇಗೌಡನಹಳ್ಳಿ ಶಿವಮಲ್ಲು, ಗೋಪಾಲಪುರ ವಾಟಾಳ್, ಹಕ್ಕಲಾಪುರ ನಾಗೇಶ್, ಮಳವಳ್ಳಿ ಮಹೇಂದ್ರ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.