
ಗುಂಡ್ಲುಪೇಟೆ: ಪಟ್ಟಣದ ಮಡಹಳ್ಳಿ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ನಿರ್ಮಾಣವಾದ ವಾರದಲ್ಲೆ ಡಾಂಬರ್ ಕಿತ್ತು ಬಂದಿದೆ ಎಂದು ಆರೋಪಿಸಿ ಜಾರಕಿಹೊಳಿ ಬ್ರಿಗೇಡ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಮಡಹಳ್ಳಿ ರಸ್ತೆ ಬಳಿ ಜಮಾವಣೆಗೊಂಡ ಜಾರಕಿಹೊಳಿ ಬ್ರಿಗೇಡ್ ಪದಾಧಿಕಾರಿಗಳು ಗುತ್ತಿಗೆದಾರನ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಜಾರಕಿಹೊಳಿ ಬ್ರಿಗೇಡ್ ಸಂಸ್ಥಾಪಕರಾದ ಗೋವಿನಾಯಕ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಬದಿಯ ಮಡಹಳ್ಳಿ ಸರ್ಕಲ್ ನಿಂದ ಸುಮಾರು 800 ಮೀಟರ್ ಡಾಂಬರ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯನ್ನು 2.25 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಈಗಾಗಲೇ ಚರಂಡಿ ನಿರ್ಮಾಣ ಮುಕ್ತಾಯವಾಗಿದ್ದು, ಡಾಂಬರ್ ರಸ್ತೆ ಕಾಮಗಾರಿಯನ್ನು ಸಹ ಗುತ್ತಿಗೆದಾರರು ಮುಗಿಸಿದ್ದಾರೆ. ಆದರೆ ನಿರ್ಮಾಣ ಮಾಡಲಾದ ವಾರದಲ್ಲೇ ರಸ್ತೆಯ ಡಾಂಬರ್ ಕಿತ್ತು ಸಣ್ಣ ಜೆಲ್ಲಿ ಮೇಲೆದಿದೆ. ಇದನ್ನು ಮುಚ್ಚಿಕೊಳ್ಳಲು ಸಣ್ಣಪುಡಿ ಹಾಕಲಾಗಿದೆ. ಜೊತೆಗೆ ಚರಂಡಿ ಕಾಮಗಾರಿಗೂ ಸಹ ಕಳಪೆಯಿಂದ ಕೂಡಿದೆ. ಇದರಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ದೂರಿದರು.
ಗುತ್ತಿಗೆದಾರ ರಸ್ತೆ ಕಾಮಗಾರಿಯನ್ನು ಕಳಪೆಯಾಗಿ ನಿರ್ಮಾಣ ಮಾಡಿರುವ ಕಾರಣ ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ. ಆದ್ದರಿಂದ ಕಾಮಗಾರಿಯ ಸಂಪೂರ್ಣ ಹಣವನ್ನು ಯಾವುದೇ ಕಾರಣಕ್ಕೂ ಸರ್ಕಾರ ಬಿಡುಗಡೆ ಮಾಡಬಾರದು. ಜೊತೆಗೆ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಶೀಘ್ರ ಗುಣಮಟ್ಟ ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ನಡೆಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ನಾಗೇಂದ್ರ, ಕ್ರೇಜಿ ನಾಗರಾಜು, ಜಾರಕಿಹೊಳಿ ಬ್ರಿಗೇಡ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್, ತಾಲೂಕು ಅಧ್ಯಕ್ಷ ಗಿರೀಶ್, ವಿದ್ಯಾರ್ಥಿ ಘಟಕದ ತಾಲೂಕು ಅಧ್ಯಕ್ಷ ಮನೋಜ್ ಪಿ.ನಾಯಕ್, ಶಿವು ಮೇಲುಕಾಮನಹಳ್ಳಿ, ಸುಕೃತ್, ಅಭಿ, ಗಿರೀಶ್, ರಾಕಿ, ಶ್ರೀನಿವಾಸ್, ನಂದೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.