ADVERTISEMENT

ಮಹದೇಶ್ವೆರ ಬೆಟ್ಟ: ನನೆಗುದಿಗೆ ಕಾಮಗಾರಿ, ಜನರಿಗೆ ಕಿರಿಕಿರಿ

ದುರಸ್ತಿಯಾಗದ ಗಿರಿದರ್ಶಿನಿಯಿಂದ ಪಾಲಾರ್‌ಗೆ ತೆರಳುವ ಚೆಕ್‌ಪೋಸ್ಟ್‌ವರೆಗಿನ ರಸ್ತೆ

ಜಿ.ಪ್ರದೀಪ್ ಕುಮಾರ್
Published 14 ಡಿಸೆಂಬರ್ 2021, 5:06 IST
Last Updated 14 ಡಿಸೆಂಬರ್ 2021, 5:06 IST
ರಸ್ತೆಗೆ ಜಲ್ಲಿ ಹಾಕಿ ಹಾಗೆಯೇ ಬಿಡಲಾಗಿದೆ
ರಸ್ತೆಗೆ ಜಲ್ಲಿ ಹಾಕಿ ಹಾಗೆಯೇ ಬಿಡಲಾಗಿದೆ   

ಮಹದೇಶ್ವರ ಬೆಟ್ಟ: ಇಲ್ಲಿನ ಗಿರಿದರ್ಶಿನಿ ವಸತಿಗೃಹದ ಬಳಿಯಿಂದ ಪಾಲಾರ್‌ಗೆ ತೆರಳುವ, ಚೆಕ್‌ಪೋಸ್ಟ್‌ವರೆಗಿನ ರಸ್ತೆ (ಅಂತರರಾಜ್ಯ) ಕಾಮಗಾರಿ ಒಂದು ವರ್ಷದಿಂದ ನನೆಗುದಿಗೆ ಬಿದ್ದಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

2020ರ ನವೆಂಬರ್‌ 26ರಂದು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕು ಸ್ಥಾ‍ಪ‍ನೆಗಾಗಿ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಹದೇಶ್ವರ ಬೆಟ್ಟಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಈ ರಸ್ತೆಯ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಅಂದು ಆರಂಭವಾದ ಕಾಮಗಾರಿ ಇನ್ನೂ ಮುಕ್ತಾಯ ಕಂಡಿಲ್ಲ. ರಸ್ತೆಗೆ ಜಲ್ಲಿ ಮಾತ್ರ ಹಾಕಲಾಗಿದ್ದು, ಬೆಟ್ಟಕ್ಕೆ ಬರುವ ಭಕ್ತರು, ಈ ಮಾರ್ಗವಾಗಿ ಗೋಪಿನಾಥಂ, ತಮಿಳುನಾಡಿಗೆ ತೆರಳುವ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಅಂದಾಜು 700 ಮೀಟರ್‌ ದೂರದ ಈ ರಸ್ತೆಯಲ್ಲಿ ರಾತ್ರಿ ಹೊತ್ತಲ್ಲಿ ಈ ರಸ್ತೆಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲ. ರಸ್ತೆಯಲ್ಲಿ ವಿಭಜಕವೂ ಇದ್ದು, ಅದರ ಕೆಲಸವೂ ಮುಕ್ತಾಯವಾಗಿಲ್ಲ. ರಾತ್ರಿ ಹೊತ್ತಿನಲ್ಲಿ ಅರಿವಿಲ್ಲದೆ ಬರುವ ವಾಹನ ಸವಾರರು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಿದೆ. ದ್ವಿಚಕ್ರವಾಹನ ಸವಾರರಿಗೂ ಅಪಾಯ ತಪ್ಪಿದ್ದಲ್ಲ. ಒಂದು ಕಿ.ಮೀಗಿಂತಲೂ ಕಡಿಮೆ ದೂರದ ರಸ್ತೆಯನ್ನುಅಭಿವೃದ್ಧಿ ಪಡಿಸಲು ಒಂದು ವರ್ಷ ಬೇಕೇ ಎಂಬುದು ಸ್ಥಳೀಯರ ಪ‍್ರಶ್ನೆ.

ADVERTISEMENT

‘ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ಗುಂಡಿಗಳು ಉಂಟಾಗಿದ್ದು ವಾಹನ ಸವಾರರಿಗೆ ಅಡಚಣೆಯಾಗಿದೆ. ರಸ್ತೆಯ ಅಭಿವೃದ್ದಿಗಾಗಿ ಜಲ್ಲಿಯನ್ನು ಹಾಕಲಾಗಿದ್ದು, ವಾಹನಗಳು ಸಂಚರಿಸುವಾಗ ಕಾಲ್ನಡಿಗೆಯಲ್ಲಿ ಸಂಚರಿಸುವವರಿಗೆ ದೂಳು ಹಾಗೂ ಸಣ್ಣ ಸಣ್ಣ ಕಲ್ಲುಗಳು ಹೊಡೆಯುತ್ತವೆ. ವಾಹನ ದಟ್ಟಣೆ ಇರುವ ಸಂದರ್ಭದಲ್ಲಿ ತಿರುಗಾಡಲೂ ಭಯವಾಗುತ್ತಿದೆ’ ಎಂದು ಹೇಳುತ್ತಾರೆ ಸ್ಥಳೀಯರು.

‘ಬೆಟ್ಟದಲ್ಲಿ ಹಲವಾರು ಕಾಮಗಾರಿ ಹಾಗೂ ರಸ್ತೆ ಅಭಿವೃದ್ದಿಯ ಕಾರ್ಯವನ್ನು ಒಬ್ಬನೇ ಗುತ್ತಿಗೆದಾರನಿಗೆ ನೀಡಲಾಗಿದೆ. ಇಂತಹ ಹಲವಾರು ಕಾಮಗಾರಿಗಳು ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿವೆ. ಪ್ರತಿ ಕಾಮಗಾರಿಗೂ ನಿಬಂಧನೆ ಹಾಗೂ ನಿರ್ಮಾಣ ಮಾಡುವ ಮಾರ್ಗಸೂಚಿ ನೀಡಲಾಗಿರುತ್ತದೆ. ಇಂತಿಷ್ಟು ಅವಧಿಯೊಳಗೆ ಕಾಮಗಾರಿ ಮುಕ್ತಾಯವಾಗಬೇಕು ಎಂದು ಗಡುವನ್ನೂ ನೀಡಲಾಗುತ್ತದೆ. ಆದರೆ, ಈ ರಸ್ತೆ ಕಾಮಗಾರಿ ಪ್ರಾರಂಭವಾಗಿ ವರ್ಷ ಕಳೆದರೂ ಸಹ ಮುಗಿದಿಲ್ಲ. ಎಲ್ಲ ತಿಳಿದಿದ್ದರೂ, ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ’ ಎಂದು ಸ್ಥಳೀಯರಾದ ಶಿವು ಹಾಗೂ ರವಿ ಅವರು ದೂರಿದರು.

ಸೂಚನೆ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘ಈ ರಸ್ತೆ ಕಾಮಗಾರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಲೋಕೋಪಯೋಗಿ ಇಲಾಖೆಯು ಮೇಲ್ವಿಚಾರಣೆ ನಡೆಸುತ್ತಿದೆ. ಈ ರಸ್ತೆ ದುರಸ್ತಿಯಾದರೆ ನಮಗೂ ಅನುಕೂಲವಾಗುತ್ತದೆ. ದುರಸ್ತಿ ಕಾರ್ಯವನ್ನು ಬೇಗ ಪೂರ್ಣಗೊಳಿಸುವಂತೆ ಪ್ರಾಧಿಕಾರದ ವತಿಯಿಂದ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಒಳಚರಂಡಿ ಕಾರಣಕ್ಕೆ ಸ್ಥಗಿತ’
ಲೋಕೋಪ‍ಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಹದೇವಸ್ವಾಮಿ ಅವರು ಮಾತನಾಡಿ, ‘ಬೆಟ್ಟ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಮುಗಿಯದಿರುವುದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.ಕಾಮಗಾರಿ ಪೂರ್ಣಗೊಂಡರೆ ಮತ್ತೆ ಒಳಚರಂಡಿ ಕಾರ್ಯವನ್ನು ಮಾಡಲಾಗುವುದಿಲ್ಲ. ಹಾಗಾಗಿ ಸಂಪೂರ್ಣವಾಗಿ ಒಳಚರಂಡಿ ಕಾಮಗಾರಿ ಮುಗಿದ ಕೂಡಲೇ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.