ADVERTISEMENT

ಕೊಳ್ಳೇಗಾಲ | ಹದಗೆಟ್ಟ ರಸ್ತೆ: ಪ್ರಯಾಸದ ಪ್ರಯಾಣ

ಅವಿನ್ ಪ್ರಕಾಶ್
Published 5 ಸೆಪ್ಟೆಂಬರ್ 2024, 6:24 IST
Last Updated 5 ಸೆಪ್ಟೆಂಬರ್ 2024, 6:24 IST

ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಹಾಗೂ ಲೊಕ್ಕನಹಳ್ಳಿ ಗ್ರಾಮದ ರಸ್ತೆ ಗುಂಡಿ ಬಿದ್ದಿರುವುದು

ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಹಾಗೂ ಲೊಕ್ಕನಹಳ್ಳಿ ಗ್ರಾಮದ ರಸ್ತೆ ಗುಂಡಿ ಬಿದ್ದಿರುವುದು

ಕೊಳ್ಳೇಗಾಲ: ನಗರ ಹಾಗೂ ಗ್ರಾಮಾಂತರ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಗುಂಡಿಗಳು ಬಿದ್ದಿದ್ದು ಪ್ರಯಾಣಿಕರು ನಿತ್ಯ ಜೀವ ಕೈಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ವಾಹನಗಳನ್ನು ಇಳಿಸಿ ನಿತ್ಯವೂ ಬೈಕ್ ಸವಾರರು ಅಪಘಾತಗಳಿಗೆ ತುತ್ತಾಗುತ್ತಿದ್ದೂ ಸಂಬಂಧಪಟ್ಟ ಇಲಾಖೆಗಳು ಗುಂಡಿಗಳನ್ನು ಮುಚ್ಚುವ ಗೋಜಿಗೆ ಹೋಗದೆ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಬಹುತೇಕ ರಸ್ತೆಗಳು ಹದಗೆಟ್ಟು ಸಂಚರಿಸಲು ಅಸಾಧ್ಯ ಎಂಬ ಪರಿಸ್ಥಿತಿ ಇದ್ದರೂ ಅಧಿಕಾರಿಗಳು ರಸ್ತೆ ದುರಸ್ತಿಗೊಳಿಸುವ ಗೋಜಿಗೆ ಹೋಗುತ್ತಿಲ್ಲ. ನಿತ್ಯವೂ ಅಧಿಕಾರಿಗಳು, ಜನಪ್ರತಿನಿಧಿಗಳು ಗುಂಡಿಬಿದ್ದ ರಸ್ತೆಗಳಲ್ಲಿ ಸಂಚರಿಸುತ್ತಿದ್ದರೂ ಸಮಸ್ಯೆಯ ಗಂಭೀರತೆಯ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಲೊಕ್ಕನಹಳ್ಳಿ, ಒಡೆಯರಪಾಳ್ಯ ರಸ್ತೆ ಅಧ್ವಾನ:

ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಿಂದ ಗುಂಡಲ್ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಹನೂರು ತಾಲ್ಲೂಕಿನ ಒಡೆಯರಪಾಳ್ಯ, ಲೊಕ್ಕನಹಳ್ಳಿ ಹಾಗೂ ನೆರೆ ರಾಜ್ಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹಾಳಾಗಿದೆ. ಮಧುವನ ಹಳ್ಳಿಯಿಂದ ಲೊಕ್ಕನಹಳ್ಳಿ ರಸ್ತೆಯ ಸ್ಥಿತಿಯಂತೂ ಹೇಳತೀರದು.

ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ವಾಹನ ಸವಾರರು ಬೈಕ್ ಸವಾರರು ಸರ್ಕಸ್ ಮಾಡಿಕೊಂಡೇ ಸಾಗಬೇಕಾದ ಪರಿಸ್ಥಿತಿ ಇದೆ. ತಾಲ್ಲೂಕನ ಸುಮಾರು 50 ರಿಂದ 60 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದರೂ ಇದುವರೆಗೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಿ ದುರಸ್ತಿಪಡಿಸಲ ಮುಂದಾಗಿಲ್ಲ.

ಕಳೆದ ಹತ್ತು ವರ್ಷಗಳಿಂದಲೂ ಹಳ್ಳ ಕೊಳ್ಳಗಳಿಂದ ಕೂಡಿರರುವ ರಸ್ತೆಗಳಲ್ಲಿ ವಾಹನ ಸವಾರರು ಸಂಚರಿಸಬೇಕಾಗಿದೆ. ರಸ್ತೆಯ ಕೆಲವು ಕಡೆ ಅರ್ಧ ಅಡಿ ಆಳದ ಗುಂಡಿಗಳು ಬಿದ್ದಿದ್ದುಮಳೆ ಬಂದರೆ ರಸ್ತೆಗಳು ಕೆರೆಯಂತೆ ಭಾಸವಾಗುತ್ತವೆ. ರಸ್ತೆ ಯಾವುದು, ಗುಂಡಿ ಯಾವುದು ಎಂದು ಗುರುತಿಸಲು ಸಾಧ್ಯವಾಗದಷ್ಟು ಅಧ್ವಾನವಾಗಿದೆ.

ಕಳೆದ ಐದಾರು ವರ್ಷಗಳ ಹಿಂದೆ ರಸ್ತೆಗೆ ತೇಪೆ ಹಾಕಿದ್ದು ಬಿಟ್ಟರೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವ ಕೆಲಸ ನಡೆದಿಲ್ಲ.ರಸ್ತೆ ಅವ್ಯವಸ್ಥೆ ಸರಿಪಡಿಸುವಂತೆ ಗ್ರಾಮಸ್ಥರು ಹನೂರು ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಲೊಕ್ಕನಹಳ್ಳಿ ಗ್ರಾಮದ ಮುಖಂಡ ಮಹದೇವ ಅಸಮಾಧಾನ ವ್ಯಕ್ತಪಡಿಸಿದರು.

ಶಾಲಾ ಕಾಲೇಜು ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚಾಗಿ ಕೊಳ್ಳೇಗಾಲ ನಗರವನ್ನೇ ಅವಲಂಬಿಸಿದ್ದು ಗುಂಡಿಬಿದ್ದ ರಸ್ತೆಗಳಲ್ಲಿ ಜೀವಭಯದಿಂದ ಸಂಚರಿಸಬೇಕಾಗಿದೆ. ವಾರದ ಹಿಂದೆ ಹಳ್ಳಕ್ಕೆ ಆಟೋ ಚಕ್ರ ಸಿಲುಕಿ ಪಲ್ಟಿ ಯಾಗಿದ್ದು 12ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ದಂಪತಿಗಳಿಬ್ಬರೂ ರಾತ್ರಿ ಕೊಳ್ಳೇಗಾಲಕ್ಕೆ ಬರುತ್ತಿದ್ದ ವೇಳೆ ಹಳ್ಳಕ್ಕೆ ಬೈಕ್ ಬಿದ್ದು ಕಾಲು ಕೈ ಮುರಿದ ಕೊಂಡಿದ್ದಾರೆ.

ಒಡೆಯರ ಪಾಳ್ಯ ಟಿಬೆಟ್ ಕ್ಯಾಂಪ್‌ಗೆ ಹೋಗಬೇಕಾದರೂ ಇದೇ ರಸ್ತೆಯಲ್ಲಿ ಹೋಗಬೇಕು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಟಿಬೆಟ್ ಕ್ಯಾಂಪ್ ವೀಕ್ಷಣೆಗೆ ಹೋಗುವಾಗ ರಸ್ತೆಯ ದುಸ್ಥಿತಿಗೆ ಕಂಡು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.

ರೈತರು ಗೊಬ್ಬರ ಸಾಕಾಟ ಮಾಡಲು ಹಾಗೂ ಕೃಷಿ ಪರಿಕರಗಳನ್ನು ಕೊಂಡೊಯ್ಯುವಾಗ ಪ್ರಯಾಸ ಪಡಬೇಕು. ರಸ್ತೆಯಲ್ಲಿ ಬೀದಿದೀಪಗಳ ವ್ಯವಸ್ಥೆಯೂ ಇಲ್ಲದೆ ರಾತ್ರಿ ವೇಳೆ ಜಮೀನಿಗೆ ಹೋಗಬೇಕಾದರೆ ಹರಸಾಹಸ ಪಡಬೇಕು. ಗುಂಡಿಬಿದ್ದ ರಸ್ತೆಯಲ್ಲಿ ಹೋಗುವಾಗ ಬಿದ್ದು ಆಸ್ಪತ್ರೆ ಸೇರಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಕೂಡಲೇ ರಸ್ತೆ ದುರಸ್ತಿ ಪಡಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಟಿಪ್ಪರ್‌ಗಳು ಕಾರಣ:

ನಿಗದಿಗಿಂತ ಹೆಚ್ಚು ಭಾರ ಹೊತ್ತುಕೊಂಡು ಈ ರಸ್ತೆಯಲ್ಲಿ ಟಿಪ್ಪರ್‌ಗಳಲ್ಲಿ ಮಣ್ಣು, ಎಂ ಸ್ಯಾಂಡ್‌ ಹಾಗೂ ಮರದ ದಿಮ್ಮಿಗಳನ್ನು ಸಾಗಿಸುವುದರಿಂದ  ರಸ್ತೆ ಹಾಳಾಗಿದೆ. ನಿಯಮ ಉಲ್ಲಂಘನೆಯಾಗುತ್ತಿದ್ದರೂ ಆರ್‌ಟಿಒ ಹಾಗೂ ಪೊಲೀಸ್ ಇಲಾಖೆ ಗಮನ ಹರಿಸುತ್ತಿಲ್ಲ. ಹೆಚ್ಚು ಭಾರ ಹೊತ್ತು ಸಾಗುವ ವಾಹನಗಳಿಗೆ ದಂಡ ಹಾಕುತ್ತಿಲ್ಲ ಎನ್ನುತ್ತಾರೆ ಮಧುವನಹಳ್ಳಿ ಗ್ರಾಮದ ಜ್ಯೋತಿ ಪ್ರಕಾಶ್..

‘ಅನುದಾನ ಬಿಡುಗಡೆಯಾದ ಕೂಡಲೇ ರಸ್ತೆ ದುರಸ್ತಿ’

ಮಧುವನಹಳ್ಳಿ ಗ್ರಾಮದಿಂದ ಲೊಕ್ಕನಹಳ್ಳಿ ಗ್ರಾಮದ ಮುಖ್ಯರಸ್ತೆ ಸಂಪೂರ್ಣ ಹಾಳಾಗಿರುವುದು ಗಮನಕ್ಕೆ ಬಂದಿದೆ. ರಸ್ತೆ ದುರಸ್ತಿಗೆ ಕ್ರಿಯಾಯೋಜನೆ ತಯಾರು ಮಾಡಿ ಶಾಸಕರ ಗಮನಕ್ಕೆ ತರಲಾಗಿದ್ದು ಅನುದಾನ ಬಂದ ನಂತರ ರಸ್ತೆ ದುರಸ್ಥಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.

– ಪುರುಷೋತ್ತಮ್, ಲೋಕೋಪಯೋಗಿ ಇಲಾಖೆ ಎಇಇ

‘ಪ್ರತಿಭಟನೆ ಎಚ್ಚರಿಕೆ’

ಜಮೀನಿಗೆ ಹೋಗಬೇಕಾದರೆ ನಿತ್ಯವೂ ತೊಂದರೆ ಅನುಭವಿಸಬೇಕು. ನೆರೆ ರಾಜ್ಯ ತಮಿಳುನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದರೂ ಜನಪ್ರತಿನಿಧಿಗಳು ಅಧಿಕಾರಿಗಳು ರಸ್ತೆ ದುರಸ್ತಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ರಸ್ತೆ ದುರಸ್ತಿಪಡಿಸದಿದ್ದರೆ ಪ್ರತಿಭಟನೆ ಮಾಡಲಾಗುವುದು.

– ಶಶಿಕುಮಾರ್, ಲೊಕ್ಕನಹಳ್ಳಿ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.