ADVERTISEMENT

ರೋಟರಿಯಿಂದ ಕೊಡಗು ಸಂತ್ರಸ್ತರಿಗೆ 50 ಮನೆ

ರೋಟರಿ ಜಿಲ್ಲೆ –3181ರ ಗವರ್ನರ್‌ ಪಿ.ರೋಹಿನಾಥ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 14:36 IST
Last Updated 11 ಡಿಸೆಂಬರ್ 2018, 14:36 IST
ಪಿ.ರೋಹಿನಾಥ್
ಪಿ.ರೋಹಿನಾಥ್   

ಚಾಮರಾಜನಗರ: ಕೊಡಗಿನಲ್ಲಿ ಈ ವರ್ಷ ಅತಿವೃಷ್ಟಿಯಿಂದಾಗಿ ಸಂತ್ರಸ್ತರಾದ 50 ಕುಟುಂಬಗಳಿಗೆ ರೋಟರಿ ಸಂಸ್ಥೆಯ ವತಿಯಿಂದ ಮನೆಗಳ‌ನ್ನು ನಿರ್ಮಿಸಿಕೊಡಲಾಗುವುದು ಎಂದು ರೋಟರಿ ಜಿಲ್ಲೆ–3181ರ ಗವರ್ನರ್‌ ಪಿ. ರೋಹಿನಾಥ್‌ ಹೇಳಿದರು.

‘ಈ ಸಂಬಂಧ ನಾವು ಈಗಾಗಲೇ ಹ್ಯಾಬಿಟೇಟ್‌ ಫಾರ್‌ ಹ್ಯುಮಾನಿಟಿ ಇಂಡಿಯಾ ಎಂಬ ಸ್ವಯಂಸೇವಾ ಸಂಸ್ಥೆಯೊಂದಿಗೆ (ಎನ್‌ಜಿಒ) ಒಪ್ಪಂದ ಮಾಡಿಕೊಂಡಿದ್ದೇವೆ. ಈ ಸಂಸ್ಥೆ ಈಗಾಗಲೇ ವಿವಿಧ ಕಡೆಗಳಲ್ಲಿ 3,000 ಮನೆಗಳನ್ನು ನಿರ್ಮಿಸಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

‘ಕಂದಾಯ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು ಮತ್ತು ದಕ್ಷಿಣ ಕನ್ನಡ ರೋಟರಿ ಜಿಲ್ಲೆ–3181ರ ವ್ಯಾಪ್ತಿಗೆ ಬರುತ್ತವೆ. ಈ ವರ್ಷದ ರೋಟರಿ ಜಿಲ್ಲಾ ಕಾರ್ಯಕ್ರಮವಾಗಿ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ. 380 ಚದರ ಅಡಿ ವಿಸ್ತೀರ್ಣದ ಒಂದು ಮನೆಯ ನಿರ್ಮಾಣಕ್ಕೆ ₹ 5 ಲಕ್ಷ ವೆಚ್ಚವಾಗಲಿದೆ. ಜಿಲ್ಲೆಯಲ್ಲಿರುವ 75 ರೋಟರಿ ಕ್ಲಬ್‌ಗಳು ಈ ವೆಚ್ಚವನ್ನು ಭರಿಸಲಿವೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಮೊದಲ ಹಂತದಲ್ಲಿ 25 ಮನೆಗಳನ್ನು ಪ್ರಾಯೋಗಿಕವಾಗಿ ನಿರ್ಮಿಸಲಿದ್ದೇವೆ. ಅಗತ್ಯವಿದ್ದರೆ ಈ ಮನೆಗಳನ್ನು ಇನ್ನಷ್ಟು ವಿಸ್ತರಿಸಲು (ಕೊಠಡಿಗಳ ಅಥವಾ ಮಹಡಿ ನಿರ್ಮಾಣ) ಅವಕಾಶ ಇದೆ’ ಎಂದು ಅವರು ಮಾಹಿತಿ ನೀಡಿದರು.

ರೋಟರಿ ಜಿಲ್ಲೆ–3181ರ ಸಹಾಯಕ ಗವರ್ನರ್‌ ಬಿ.ಎನ್.ಸುರೇಶ್‌, ಚಾಮರಾಜನಗರದ ರೋಟರಿ ಸಿಲ್ಕ್‌ ಸಿಟಿ ಸಂಸ್ಥೆಯ ಅಧ್ಯಕ್ಷ ಎನ್‌.ಎನ್‌.ಅಜಯ್‌, ಕಾರ್ಯದರ್ಶಿ ಎ.ಶ್ರೀನಿವಾಸ್‌ ಮತ್ತು ಚಾಮರಾಜನಗರ ರೋಟರಿ ಸಂಸ್ಥೆಯ ಅಧ್ಯಕ್ಷ ಡಿ.ನಾಗರಾಜು ಇದ್ದರು.

‘ಅಂಗನವಾಡಿಗಳ ದತ್ತು’
‘ಈ ವರ್ಷದ ಇನ್ನೊಂದು ಜಿಲ್ಲಾ ಕಾರ್ಯಕ್ರಮವಾಗಿ ರೋಟರಿ ಸಂಸ್ಥೆಯು ಅಂಗನವಾಡಿಗಳನ್ನು ದತ್ತು ಪಡೆದು ಅವುಗಳನ್ನು ಅಭಿವೃದ್ಧಿಪಡಿಸಲಿದೆ’ ಎಂದು ರೋಹಿನಾಥ್‌ ಹೇಳಿದರು.

‘ರೋಟರಿ ಜಿಲ್ಲೆ–3181ರಲ್ಲಿ 7,600 ಅಂಗನವಾಡಿಗಳಿವೆ. ಹಲವು ಅಂಗನವಾಡಿ ಕೇಂದ್ರಗಳು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಅಂತಹವುಗಳನ್ನು ಆಯ್ಕೆ ಮಾಡಿ ಅಲ್ಲಿಗೆ ಬೇಕಾದ ಮೂಲಸೌಕರ್ಯಗಳನ್ನು ರೋಟರಿ ಕ್ಲಬ್‌ಗಳು ಒದಗಿಸಲಿವೆ’ ಎಂದು ಅವರು ಹೇಳಿದರು.

‘ಗರಿಷ್ಠ 40 ಸದಸ್ಯರಿರುವ ಕ್ಲಬ್‌ಗಳು ಕನಿಷ್ಠ 5 ಅಂಗನವಾಡಿ ಕೇಂದ್ರ, 60 ಸದಸ್ಯರಿರುವ ಕ್ಲಬ್‌ 8 ಹಾಗೂ 60ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಕ್ಲಬ್‌ಗಳು ಕನಿಷ್ಠ 12 ಅಂಗನವಾಡಿಗಳನ್ನು ದತ್ತು ಪಡೆಯಲಿವೆ. ಕೆಲವು ಕಡೆಗಳಲ್ಲಿ ಈಗಾಗಲೇ ಆ ಕಾರ್ಯ ಆರಂಭವಾಗಿದೆ’ ಎಂದು ಅವರು ಹೇಳಿದರು.

‘ಚಾಮರಾಜನಗರ ಜಿಲ್ಲೆಯಲ್ಲಿ 5 ರೋಟರಿ ಕ್ಲಬ್‌ಗಳಿವೆ. 20ರಿಂದ 25 ಅಂಗನವಾಡಿಗಳನ್ನು ದತ್ತು ತೆಗೆದುಕೊಳ್ಳಲಿವೆ. ಚಾಮರಾಜನಗರ ತಾಲ್ಲೂಕಿನಲ್ಲಿ ಈಗಾಗಲೇ ನಾಲ್ಕು ಅಂಗನವಾಡಿಗಳಿಗೆ ಅಗತ್ಯ ಸಲಕರಣೆಗಳನ್ನು ನೀಡಲಾಗಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.