ADVERTISEMENT

ಶಬರಿಮಲೆ ಯಾತ್ರಿಗಳ ಮೇಲೆ ಹಲ್ಲೆ; ದುರುದ್ದೇಶವಿಲ್ಲ: ತಮಿಳುನಾಡು ಪೊಲೀಸರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 2:28 IST
Last Updated 19 ಜನವರಿ 2026, 2:28 IST
   

ಚಾಮರಾಜನಗರ: ತಮಿಳುನಾಡಿನ ಥೇಣಿಯಲ್ಲಿ ಕರ್ನಾಟಕದ ಅಯ್ಯಪ್ಪ ಮಲಾಧಾರಿಗಳ ಮೇಲೆ ಹಲ್ಲೆ ನಡೆಸಿ ಕನ್ನಡ ಬಾವುಟಕ್ಕೆ ಹಾನಿ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಕುರಿತು ತಮಿಳುನಾಡು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಅದರ ಸಾರಾಂಶ ಕೆಳಕಂಡಂತಿದೆ.

‘ಜ.12ರಂದು ಸಂಜೆ 4.30ರ ಸುಮಾರಿಗೆ ಥೇಣಿ ಜಿಲ್ಲೆಯ ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಕರ್ನಾಟಕ ನೋಂದಣಿ ಸಂಖ್ಯೆಯ ಟೆಂಪೊ ಟ್ರಾವಲರ್ ನಡುವೆ ಸಣ್ಣ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ, ಟಿ.ಟಿ ಹಿಂಬದಿಗೆ ಲಾರಿ ಡಿಕ್ಕಿ ಹೊಡೆದು ಹಿಂಬದಿ ದೀಪಕ್ಕೆ ಹಾನಿಯಾಗಿತ್ತು. ಈ ವಿಷಯವಾಗಿ ಲಾರಿ ಚಾಲಕ, ಸ್ಥಳೀಯರು ಹಾಗೂ ಟೆಂಪೊ ಟ್ರಾವೆಲರ್‌ನಲ್ಲಿದ್ದ ಅಯ್ಯಪ್ಪ ಮಾಲಾಧಾರಿಗಳ ಮಧ್ಯೆ ವಾಗ್ವಾದ ನಡೆದಿತ್ತು. 

ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಠಾಣೆ ಪೊಲೀಸರು ಮಧ್ಯಸ್ಥಿಕೆ ವಹಿಸಿ ಶಾಂತಿಯುತವಾಗಿ ವಿವಾದ ಬಗೆಹರಿಸಿದ್ದಾರೆ. ತಪ್ಪೆಸಗಿದ ಲಾರಿ ಚಾಲಕನಿಂದ ₹ 1,000 ದಂಡ ಪಡೆದು ಟೆಂಪೊ ದುರಸ್ತಿಗೆ ಪರಿಹಾರವಾಗಿ ಚಾಲಕನಿಗೆ ನೀಡಿದ್ದಾರೆ. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.

ADVERTISEMENT

ಆದರೆ, ತಮಿಳುನಾಡಿನಲ್ಲಿ ಕನ್ನಡ ಬಾವುಟಕ್ಕೆ ಹಾನಿ ಮಾಡಲಾಗಿದೆ, ಕನ್ನಡಿಗರಿಗೆ ಹಲ್ಲೆ ನಡೆಸಲಾಗಿದೆ ಎಂಬ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಾಗಿದ್ದು ಈ ಸಂಬಂಧ ವಿಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದ್ದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸ್ಥಳೀಯ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಶಬರಿಮಲೆ ಯಾತ್ರಿಗಳ ಮೇಲೆ ನಡೆದಿರುವ ಹಲ್ಲೆಯ ಹಿಂದೆ ದುರುದ್ದೇಶಗಳು ಕಂಡುಬಂದಿಲ್ಲ, ಅಪಘಾತವೇ ಹಲ್ಲೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ತಮಿಳುನಾಡು ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ.

ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಯುತ್ತಿದ್ದು ಸಮಾಜದ ಶಾಂತಿ ಸುವ್ಯವಸ್ಥೆ ಕದಡಲು ಯತ್ನಿಸಿದವರ ವಿರುದ್ಧ ನಿರ್ದಾಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು. ಘಟನಾ ಸ್ಥಳದಲ್ಲಿ ಸ್ಥಳೀಯ ಪೊಲೀಸರ ಕರ್ತವ್ಯ ನಿರ್ಲಕ್ಷ್ಯ ಕಂಡುಬಂದರೆ ಇಲಾಖಾ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಲಾಗುವುದು.

ತಮಿಳುನಾಡು ಪ್ರವೇಶಿಸುವ ಯಾವುದೇ ರಾಜ್ಯಗಳ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಭದ್ರತೆ ಹಾಗೂ ಸುರಕ್ಷತೆ ನೀಡುವುದು ತಮಿಳುನಾಡು ಪೊಲೀಸರ ಕರ್ತವ್ಯವಾಗಿದೆ. ಅಂತರ ರಾಜ್ಯಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗುವಂತಹ, ದ್ವೇಷ ಹುಟ್ಟುಹಾಕುವಂತಹ ಸಂದೇಶ ಹಾಗೂ ಸುಳ್ಳು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಬಾರದು ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.

ಯಾತ್ರಾತ್ರಿಗಳು ಗುಂಡ್ಲುಪೇಟೆಯವರು:

ತಮಿಳುನಾಡಿನಲ್ಲಿ ಹಲ್ಲೆಗೊಳಗಾದವರು ಗುಂಡ್ಲುಪೇಟೆ ತಾಲ್ಲೂಕಿನ ಅಣ್ಣೂರು ಕೇರಿ ಗ್ರಾಮದ ಅಯ್ಯಪ್ಪ ಮಾಲಾಧಾರಿಗಳಾಗಿದ್ದು, ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ದರ್ಶನ ಪಡೆದು ತಮಿಳುನಾಡಿನ ಪಳನಿಯಲ್ಲಿರುವ ದೇವಸ್ಥಾನಕ್ಕೆ ಹೋಗುವಾಗ ಮಾರ್ಗಮಧ್ಯೆ ಘಟನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.