ADVERTISEMENT

ಸಫಾರಿ ದರ ಏರಿಕೆಗೆ ಭಾರಿ ಆಕ್ರೋಶ

ಪರಿಸರಪ್ರಿಯರಿಂದ ಟೀಕಾಪ್ರಹಾರ, ದರ ಇಳಿಕೆಗೆ ಒತ್ತಾಯ; ಜಾಲತಾಣಗಳಲ್ಲಿ ನೆಟ್ಟಿಗರ ತರಾಟೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 18:41 IST
Last Updated 3 ಏಪ್ರಿಲ್ 2021, 18:41 IST
ಎಚ್.ಡಿ.ಕೋಟೆ ತಾಲ್ಲೂಕಿನ ದಮ್ಮನಕಟ್ಟೆ (ಕಾಕನಕೋಟೆ) ಸಫಾರಿ ಕೇಂದ್ರ
ಎಚ್.ಡಿ.ಕೋಟೆ ತಾಲ್ಲೂಕಿನ ದಮ್ಮನಕಟ್ಟೆ (ಕಾಕನಕೋಟೆ) ಸಫಾರಿ ಕೇಂದ್ರ   

ಮೈಸೂರು/ಚಾಮರಾಜನಗರ: ನಾಗರಹೊಳೆ ಮತ್ತು ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿನ ದಮ್ಮನಕಟ್ಟೆ, ವೀರನಹೊಸಹಳ್ಳಿ, ನಾಗರಹೊಳೆ ಹಾಗೂ ಬಂಡೀಪುರದ ಸಫಾರಿ ಟಿಕೆಟ್‌ ದರ ಹೆಚ್ಚಿಸಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಅರಣ್ಯಾಧಿಕಾರಿಗಳ ಈ ಕ್ರಮವನ್ನು ನೆಟ್ಟಿಗರು, ಪರಿಸರವಾದಿಗಳು ‘ಮೀಮ್ಸ್‌’ಗಳ ಮೂಲಕ ತೀವ್ರವಾಗಿ ಟೀಕಿಸಿದ್ದಾರೆ.‌

‘ಸಫಾರಿ ಎಂಬುದು ಉಳ್ಳವರ ಸ್ವತ್ತು’ ಎಂಬ ಮಾತು ನಿಜ ಮಾಡಲು ಅಧಿಕಾರಿಗಳು ದರ ಹೆಚ್ಚಿಸಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಇಂತಹ ಕ್ರಮ ಬೇಕಿರಲಿಲ್ಲ ಎಂದಿದ್ದಾರೆ.

ADVERTISEMENT

‘ನಾಗರಹೊಳೆ ಸಫಾರಿಗಾಗಿ ನಾನು ನನ್ನ ಒಂದು ಮೂತ್ರಪಿಂಡವನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ’ ಎಂದು ಕೆಲವರು ಚಾಟಿ ಬೀಸಿದ್ದಾರೆ.

‘ಹೆಚ್ಚಿನ ಹಣದೊಂದಿಗೆ ಬರುತ್ತಿದ್ದ ನನ್ನನ್ನು ತಮಿಳುನಾಡಿನ ಗಡಿಯಲ್ಲಿ ಚುನಾವಣಾ ಆಯೋಗದವರು ತಡೆದು ಪ್ರಶ್ನಿಸಿದರು. ಆಗ ನಾನು ನಾಗರಹೊಳೆಗೆ ಸಫಾರಿಗಾಗಿ ಹೋಗುತ್ತಿದ್ದೇನೆ ಎಂದು ಹೇಳಿದಾಕ್ಷಣ ಬಿಟ್ಟು ಕಳುಹಿಸಿದರು!’ ಎಂದು ಹಾಸ್ಯದ ಮೊನೆಯಿಂದ ಚುಚ್ಚಿದ್ದಾರೆ.

‘ನಾಗರಹೊಳೆಯ 2 ಸಫಾರಿ ಕ್ಯಾಮೆರಾ ಟಿಕೆಟ್ ದರದಲ್ಲಿ, ಮಧ್ಯಪ್ರದೇಶದ ಪೆಂಚ್ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ರಾತ್ರಿಯನ್ನೇ ಕಳೆಯಬಹುದು’ ಎಂದು ಕೆಲವರು ಕುಟುಕಿದ್ದಾರೆ.

‘ಸಫಾರಿ ಕೇಂದ್ರಗಳಲ್ಲಿ ಮೂಲಸೌಕರ್ಯವೂ ಇಲ್ಲ. ವಸತಿ ಗೃಹಗಳು ಯಾವುದೇ ಐಷಾರಾಮಿ ಸೌಲಭ್ಯ ಹೊಂದಿಲ್ಲ. ಹೀಗಿದ್ದರೂ, ಪಂಚತಾರಾ ಹೋಟೆಲ್ ದರವನ್ನು ನಿಗದಿಪಡಿಸಿರುವುದು ಎಷ್ಟರಮಟ್ಟಿಗೆ ಸರಿ’ ಎಂಬುದು ಹಲವರ ಪ್ರಶ್ನೆ. ಏ.2ರಿಂದ ಹೊಸ ದರ ಜಾರಿಗೆ ಬಂದಿದ್ದು, ಪ್ರವೇಶ, ಸಫಾರಿ, ವಸತಿಗೃಹ, ಕ್ಯಾಮೆರಾ ದರದಲ್ಲಿಯೂ ಹೆಚ್ಚಳ ಮಾಡಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆಪ್ರತಿಕ್ರಿಯಿಸಿದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ವಿಜಯಕುಮಾರ್ ಗೋಗಿ, ‘ದರ ಪರಿಷ್ಕರಣೆ ಸಹಜ ಪ್ರಕ್ರಿಯೆ’ ಎಂದರು.

‘ಎಲ್ಲ ದರಗಳೂ ಪರಿಷ್ಕರಣೆಯಾಗುತ್ತಿವೆ. ಒಂದೇ ದರವನ್ನು 10 ವರ್ಷ ಇಟ್ಟುಕೊಂಡು, ನಂತರ ಒಮ್ಮೆಗೆ ಹೆಚ್ಚಿಸಿದರೆ ಎಲ್ಲರಿಗೂ ಹೊರೆ. ಪ್ರತಿ ವರ್ಷ ದರ ಪರಿಷ್ಕರಣೆಯಾಗಬೇಕಿತ್ತು. ಈಗ 4 ವರ್ಷಗಳ ನಂತರ ಪರಿಷ್ಕೃತಗೊಂಡಿವೆ. ಏನೇ ಮಾಡಿದರೂ ಪರ ಮತ್ತು ವಿರೋಧದ ಅಭಿಪ್ರಾಯಗಳು ಇದ್ದೇ ಇರುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.