ADVERTISEMENT

ಚಾಮರಾಜನಗರ| ಸಾಹಿತ್ಯಿಕವಾಗಿ ಶ್ರೀಮಂತ ‘ಹಿಂದುಳಿದ ಜಿಲ್ಲೆ’

ಜಿಲ್ಲೆಯ ಆಧುನಿಕ ಕನ್ನಡ ಸಾಹಿತ್ಯದ ಯುವ ದನಿ, ಮಹಿಳಾ ದನಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 16:23 IST
Last Updated 24 ಜನವರಿ 2020, 16:23 IST
ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಭಾಗವಹಿಸಿದ್ದ ವಿದ್ಯಾರ್ಥಿಗಳು
ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಭಾಗವಹಿಸಿದ್ದ ವಿದ್ಯಾರ್ಥಿಗಳು   

ಹನೂರು: ‘ಜಾನಪದ ಶ್ರೀಮಂತ ಚಾಮರಾಜನಗರ ಜಿಲ್ಲೆಯ ಸಾಹಿತ್ಯವು ವಿದ್ವಾಂಸರು, ಸಾಹಿತಿಗಳು, ಸಂಶೋಧಕರಿಗೆ ವಿಪುಲ ಸಂಪನ್ಮೂಲ ಒದಗಿಸುವ ಸಂಸ್ಕೃತಿಯ ಕಣಜ’ ಎಂದು ಮದ್ರಾಸ್ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ರಂಗಸ್ವಾಮಿ ಬಣ್ಣಿಸಿದರು.

ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಚಾಮರಾಜನಗರ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶುಕ್ರವಾರ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ ಸಾಹಿತ್ಯ ಐನೂರು ವರ್ಷಗಳಿಂದ ಈಚೆಗೆ ವ್ಯಾಪಕವಾಗಿ ಬೆಳೆದು ಬಂದಿದೆ. ರಾಜ್ಯದಲ್ಲೇ ವಿಶಿಷ್ಟವಾದ ಜಾನಪದ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಿಲ್ಲೆ ಹೊಂದಿದೆ’ ಎಂದರು.

ADVERTISEMENT

‘ಚಾಮರಾಜನಗರ ಜಿಲ್ಲೆಯ ಆಧುನಿಕ ಕನ್ನಡ ಸಾಹಿತ್ಯ: ಯುವ ದನಿ’ ವಿಷಯ ಮಂಡನೆ ಮಾಡಿದ ಅಧ್ಯಾಪಕ ಡಾ.ಎಂ.ಮಹೇಂದ್ರ ಪಟೇಲ್ ಅವರು, ‘ಚಾಮರಾಜನಗರವು ‘ಹಿಂದುಳಿದ ಜಿಲ್ಲೆ’ ಎಂದು ಗುರುತಿಸಿಕೊಂಡಿದ್ದರೂ ಇಲ್ಲಿ ಜನಿಸಿದ ಮುಪ್ಪಿನಷಡಕ್ಷರಿ, ನಿಜಗುಣ ಶಿವಯೋಗಿ, ಷಡಕ್ಷರದೇವ, ಸಂಚಿ ಹೊನ್ನಮ್ಮ ಹಾಗೂ ದೇವಚಂದ್ರ ಮುಂತಾದ ಕವಿಗಳಿಂದಾಗಿ ಸಾಹಿತ್ಯಿಕ ಶ್ರೀಮಂತಿಕೆ ಗಳಿಸಿದೆ’ ಎಂದರು.

‘ಇಲ್ಲಿನ ಯುವ ‌ಕವಿಗಳು ಯಾವುದೇ ಪಂಥ, ಚಳವಳಿಗೆ ಸಿಲುಕದೆ ಮಾನವೀಯ ನೆಲೆಗಟ್ಟಿನಲ್ಲಿ ತಮ್ಮ ವಿಚಾರಧಾರೆಗಳನ್ನು ಕೃತಿಗಳಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ. ಸಾಮಾಜಿಕ ಪ್ರಜ್ಞೆಯನ್ನು ತಲೆಯ ಮೇಲೆ ಹೊತ್ತು ತಮ್ಮ ಕರ್ತವ್ಯವನ್ನು ನಿಭಾಯಿಸುವ ಮೂಲಕ ಸಮಾಜದ ಸಮಸ್ಯೆಗಳಿಗೆ ದನಿಯಾಗಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜಿಲ್ಲೆಯ ಸಾಹಿತಿಗಳು ವೈಚಾರಿಕ ವಿಚಾರಗಳನ್ನು ಸುವಿಸ್ತಾರವಾಗಿ ತಿಳಿಸಿದ್ದಾರೆ’ ಎಂದರು.

ಗೋಷ್ಠಿಯ ನಂತರಧಾರವಾಡದ ಉಸ್ತಾದ್ ಮೊಹಸಿನ್ ಖಾನ್ ಮತ್ತು ಇಟಲಿಯ ಫುಲ್ ವಿಯೋ ಕೊರೆನ್, ಪ್ರಶಾಂತ್ ಆರೋಗೇರಿ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಗಮನಸೆಳೆಯಿತು.

ಹನೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಕೆ.ನಿಂಗರಾಜು, ಆರ್.ಪಿ.ನರೇಂದ್ರನಾಥ್, ಲೆಕ್ಕಪರಿಶೋಧಕ ಕಮಲ್ ರಾಜ್ ಇದ್ದರು.

ಭದ್ರ ಬೇರು ಬಿಟ್ಟಿದೆ ಮಹಿಳಾ ಸಾಹಿತ್ಯ

‘ಚಾಮರಾಜನಗರ ಜಿಲ್ಲೆಯ ಆಧುನಿಕ ಕನ್ನಡ ಸಾಹಿತ್ಯ: ಮಹಿಳಾ ದನಿ’ ಕುರಿತು ಮಾತನಾಡಿದ ಚಾಮರಾಜನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಎಸ್. ಪ್ರೇಮಲತಾ ಅವರು, ‘ವಚನಕಾರ್ತಿ ಅಕ್ಕಮಹಾದೇವಿ ಹಾಗೂ ಸಂಚಿ ಹೊನ್ನಮ್ಮ ಅವರಿಂದಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳಾ ಸಾಹಿತ್ಯ ಇಂದು ಭದ್ರವಾಗಿ ಬೇರೂರಿದೆ’ ಎಂದು ಪ್ರತಿಪಾದಿಸಿದರು.

‘ಪುರುಷ ಪ್ರಧಾನ ವ್ಯವಸ್ಥೆಯೊಳಗೆ ತಮ್ಮ ಇತಿಮಿತಿಯನ್ನು ಮೀರಿ ಅನೇಕ ಕವಯಿತ್ರಿಯರು ಕನ್ನಡ ಸಾರಸ್ವತ ಲೋಕಕ್ಕೆ ಅತ್ಯುನ್ನತ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ. 1980-90 ದಶಕಗಳಿಂದ ಈಚೆಗೆ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಮಹಿಳೆಯರು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬದುಕು ಬರಹಗಳೊಂದಿಗೆ ಆಧುನಿಕ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಸಾಹಿತ್ಯ ರಚನೆ ಮಾಡುವ ಮೂಲಕ ಗಮನಸೆಳೆದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.