ADVERTISEMENT

ಸಾಲೂರು ಮಠ: ಎಂ.ನಾಗೇಂದ್ರ ಉತ್ತರಾಧಿಕಾರಿ

ತಡೆಯಾಜ್ಞೆ ರದ್ದಾದ ಬೆನ್ನಲ್ಲೇ ನಿರ್ಧಾರ, ಇಂದು ಪಟ್ಟಾಧಿಕಾರ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 12:56 IST
Last Updated 7 ಆಗಸ್ಟ್ 2020, 12:56 IST
ಎಂ.ನಾಗೇಂದ್ರ
ಎಂ.ನಾಗೇಂದ್ರ   

ಚಾಮರಾಜನಗರ: ಮಹದೇಶ್ವರ ಬೆಟ್ಟದ ಸಾಲೂರು ಮಠದ ಉತ್ತರಾಧಿಕಾರಿ ನೇಮಕ ಸಂಬಂಧ ಜಾರಿಯಲ್ಲಿದ್ದ ತಡೆಯಾಜ್ಞೆಯನ್ನು ಕೊಳ್ಳೇಗಾಲದ ನ್ಯಾಯಾಲಯ ರದ್ದು ಮಾಡಿದ ಬೆನ್ನಲ್ಲೇ, ಮಠದ ಸ್ವಾಮೀಜಿ ಪಟ್ಟದ ಗುರುಸ್ವಾಮಿ ಅವರ ಉತ್ತರಾಧಿಕಾರಿಯಾಗಿ ಎಂ.ನಾಗೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ.

ಶನಿವಾರವೇ (ಆಗಸ್ಟ್‌ 8) ಅವರ ಪಟ್ಟಾಧಿಕಾರ ಕಾರ್ಯಕ್ರಮ ನಡೆಯಲಿದೆ.

ಹನೂರು ತಾಲ್ಲೂಕು ಬಂಡಹಳ್ಳಿ ಗ್ರಾದ ಸುಂದ್ರಮ್ಮ ಮತ್ತು ಮಹದೇವಪ್ಪನವರ ಮಗ, 30 ವರ್ಷದ ಎಂ.ನಾಗೇಂದ್ರ ಅವರು ಗುರುಸ್ವಾಮಿ ಅವರಿಗೆ ದೂರದ ಸಂಬಂಧಿಯೂ ಹೌದು. ಕಳೆದ ವರ್ಷ ಗುರುಸ್ವಾಮಿ ಅವರು ಮಠದ ಆಸ್ತಿಯನ್ನು ಇವರ ಹೆಸರಿಗೆ ಉಯಿಲು ಬರೆದಿದ್ದು ವಿವಾದ ಸೃಷ್ಟಿಸಿತ್ತು. ನಂತರ ಒತ್ತಡಕ್ಕೆ ಮಣಿದು, ಉಯಿಲು ರದ್ದುಗೊಳಿಸಿದ್ದರು.‌

ADVERTISEMENT

ನಾಗೇಂದ್ರ ಅವರ ಆಯ್ಕೆಯನ್ನು ಘೋಷಣೆ ಮಾಡುತ್ತಿದ್ದಂತೆಯೇ ಅತ್ತ ಸಾಲೂರು ಮಠದ ಮುಂಭಾಗ ಕೆಲವು ಭಕ್ತರು ಪ್ರತಿಭಟನೆ ಮಾಡಿದ್ದಾರೆ. ಕೆಲವು ಭಕ್ತರು ಗುರುಸ್ವಾಮಿ ಮತ್ತು ಕಿರಿಯ ಸ್ವಾಮೀಜಿ, ಸುಳ್ವಾಡಿ ವಿಷ ಪ್ರಸಾದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಇಮ್ಮಡಿ ಮಹದೇವಸ್ವಾಮಿ ಅವರಿಗೆ ಹತ್ತಿರಾದವರನ್ನು ಬಿಟ್ಟು ಮೂರನೇ ವ್ಯಕ್ತಿಯನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದಾರೆ.

ಶನಿವಾರ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪಟ್ಟಾಧಿಕಾರ ಮಹೋತ್ಸವ ನಡೆಯಲಿದೆ. ಮುಂಜಾನೆ 4.30ರಿಂದ ಬೆಳಿಗ್ಗೆ ಎಂಟು ಗಂಟೆಯವರೆಗೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.

ಗುಂಡೇಗಾಲ ಮಠದ ಮಲ್ಲಿಕಾರ್ಜುನ ಸ್ವಾಮಿ, ಉತ್ತರಾಧಿಕಾರಿ ಆಯ್ಕೆ ಮತ್ತು ಮೇಲುಸ್ತವಾರಿ ಸಮಿತಿ ಅಧ್ಯಕ್ಷ

ರವೀಂದ್ರ ಕುಮಾರ್‍‍, ಪ್ರಧಾನ ಕಾರ್ಯದರ್ಶಿ ಎನ್‍ರಿಚ್‍ ಮಹಾದೇವಸ್ವಾಮಿ, ನಿರ್ದೇಶಕರಾದ ಪೊನ್ನಾಚಿ
ಮಹಾದೇವಸ್ವಾಮಿ, ಆಲಹಳ್ಳಿ ತೋಟೇಶ್‍‍ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.