ADVERTISEMENT

ಜಿಲ್ಲೆಯಲ್ಲಿ 3,11,624 ಕುಟುಂಬಗಳ ಸಮೀಕ್ಷೆ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಹಕರಿಸಿ: ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮನವಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 3:19 IST
Last Updated 28 ಸೆಪ್ಟೆಂಬರ್ 2025, 3:19 IST
ಸಿ.ಟಿ.ಶಿಲ್ಪಾ ನಾಗ್‌, ಜಿಲ್ಲಾಧಿಕಾರಿ
ಸಿ.ಟಿ.ಶಿಲ್ಪಾ ನಾಗ್‌, ಜಿಲ್ಲಾಧಿಕಾರಿ   

ಚಾಮರಾಜನಗರ: ಸೆ.22ರಿಂದ ಆರಂಭವಾಗಿರವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಅ.7ರವರೆಗೆ ನಡೆಯಲಿದ್ದು ಸಮೀಕ್ಷೆಯ ಪ್ರಶ್ನಾವಳಿಗಳಿಗೆ ಸಮರ್ಪಕ ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಮನವಿ ಮಾಡಿದ್ದಾರೆ.

ನಾಗರಿಕರ ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಸಮೀಕ್ಷೆ ಸಹಕಾರಿಯಾಗಿದ್ದು ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಸಮೀಕ್ಷೆಯಲ್ಲಿ ಕೇಳಲಾಗುವ 60 ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡಿ ಸಮೀಕ್ಷೆ ಯಶಸ್ವಿಗೊಳಿಸಬೇಕು. ಜಿಲ್ಲೆಯಲ್ಲಿ 11,03,619 ಜನಸಂಖ್ಯೆ ಇದ್ದು, 3,11,624 ಕುಟುಂಬಗಳನ್ನು ಅಂದಾಜಿಸಲಾಗಿದೆ. 2,61,680 ಬ್ಲಾಕ್‍ಗಳನ್ನು ಗುರುತಿಸಲಾಗಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ 3,86,831 ಜನಸಂಖ್ಯೆಯಿದ್ದು 1,10,306 ಕುಟುಂಬಗಳಿವೆ. ಸಮೀಕ್ಷೆಗೆ 98,955 ಬ್ಲಾಕ್‍ ಗುರುತಿಸಲಾಗಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ 2,41,170 ಜನಸಂಖ್ಯೆಯಿದ್ದು, 69,502 ಕುಟುಂಬಗಳು, ಸಮೀಕ್ಷೆಗೆ 58,727 ಬ್ಲಾಕ್‍ಗಳಿವೆ. ಹನೂರು ತಾಲೂಕಿನಲ್ಲಿ 1,97,749 ಜನಸಂಖ್ಯೆಯಿದ್ದು, 55,676 ಕುಟುಂಬಗಳು, 41,294 ಬ್ಲಾಕ್‍ಗಳನ್ನು ಗುರುತಿಸಲಾಗಿದೆ.

ADVERTISEMENT

ಕೊಳ್ಳೇಗಾಲ ತಾಲೂಕಿನಲ್ಲಿ 1,89,141 ಜನಸಂಖ್ಯೆಯಿದ್ದು 52,095 ಕುಟುಂಬಗಳು, 45,015 ಬ್ಲಾಕ್‍, ಯಳಂದೂರು ತಾಲೂಕಿನಲ್ಲಿ 88,728 ಜನಸಂಖ್ಯೆಯಿದ್ದು, 24,045 ಕುಟುಂಬಗಳು ಹಾಗೂ 17,689 ಬ್ಲಾಕ್‍ಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸಮೀಕ್ಷೆಯ ಮೊದಲ ಹಂತದಲ್ಲಿ ಇಂಧನ ಇಲಾಖೆಯ ಮೂಲಕ ಮನೆಗಳ ಪಟ್ಟಿಮಾಡಿ ಜಿಯೋ ಟ್ಯಾಗಿಂಗ್ ಮಾಡಲು ವಿದ್ಯುತ್ ಸಂಪರ್ಕ ಹೊಂದಿರುವ ಮನೆಗಳಿಗೆ ಮೀಟರ್ ರೀಡರ್‌ಗಳ ಮೂಲಕ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಯುಹೆಚ್‍ಐಡಿ ಸಂಖ್ಯೆ ಸೃಜಿಸಿ, ಸ್ಟಿಕ್ಕರ್‌ಗಳನ್ನು ಪ್ರತಿ ಮನೆಗಳಿಗೂ ಅಂಟಿಸಲಾಗಿದೆ. 

ಆರ್.ಆರ್ ಸಂಖ್ಯೆ ಹೊಂದಿಲ್ಲದ ಮತ್ತು ಕಾಡಂಚಿನ ಪ್ರದೇಶಗಳ ಕುಟುಂಬಗಳಿಗೆ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಯುಹೆಚ್‍ಐಡಿ ಸೃಜಿಸಿ, ಸ್ಟಿಕ್ಕರ್‌ಗಳನ್ನು ಪ್ರತಿ ಮನೆಗೆ ಅಂಟಿಸುವ ಕೆಲಸವನ್ನು ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಪೂರ್ಣಗೊಳಿಸಿದ್ದಾರೆ.

3,11,624 ಕುಟುಂಬಗಳಿಗೆ ಅನುಗುಣವಾಗಿ 150 ಮನೆಗಳಿಗೆ ಒಬ್ಬರಂತೆ 2,456 ಗಣತಿದಾರರು, 50 ಗಣತಿದಾರರಿಗೆ ಒಬ್ಬರಂತೆ 45 ಮಾಸ್ಟರ್ ಟ್ರೈನರ್ಸ್‌ಗಳು ಹಾಗೂ 20 ಗಣತಿದಾರರಿಗೆ ಒಬ್ಬರಂತೆ 110 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಸಮೀಕ್ಷೆಗೆ 6 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಆಧಾರ್ ಕಾರ್ಡ್ ಹೊಂದಿರಬೇಕು ಹಾಗೂ ಮಾಹಿತಿ ನೀಡುವ ಪ್ರತಿ ಮನೆಯ ಸದಸ್ಯರ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಜೋಡಣೆ ಆಗಿರುವುದು ಕಡ್ಡಾಯ.

ಸಮೀಕ್ಷೆಗಾಗಿ ಕುಟುಂಬ ಪಡಿತರ ಚೀಟಿಯನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ಪಡಿತರ ಚೀಟಿ ಹೊಂದಿಲ್ಲದವರು ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು, ಆಧಾರ್ ಸಂಖ್ಯೆ ಹೊಂದಿಲ್ಲದಿದ್ದಲ್ಲಿ ಹತ್ತಿರದ ಆಧಾರ್ ಸೆಂಟರ್‌ಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಚುನಾವಣಾ ಗುರುತಿನ ಚೀಟಿ ಹಾಗೂ ಇತ್ಯಾದಿ ದಾಖಲೆಗಳನ್ನು ಹೊಂದಿರಬೇಕು ಎಂದು ತಿಳಿಸಿದ್ದಾರೆ.

ಕುಟುಂಬದ ಸದಸ್ಯರಲ್ಲಿ ಯಾರಾದರೂ ಅಂಗವಿಕಲರಿದ್ದಲ್ಲಿ ಯುಡಿಐಡಿ ಸಂಖ್ಯೆ ಹೊಂದಿರಬೇಕು. ಇಲ್ಲದಿದ್ದಲ್ಲಿ ಅಂಗವಿಕಲರ ಗುರುತಿನ ಚೀಟಿ ಹಾಜರುಪಡಿಸಬೇಕು. ಪ್ರಶ್ನಾವಳಿಗಳ ಮಾದರಿ ನಮೂನೆಯನ್ನು ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಡಿ ನೋದಾಯಿಸಿಕೊಂಡಿರುವ ಸ್ವಸಹಾಯ ಗುಂಪುಗಳ ಸದಸ್ಯರಿಂದ ಪ್ರತಿ ಮನೆಗೆ ವಿತರಣೆ ಮಾಡಲಾಗುತ್ತಿದ್ದು ಅಗತ್ಯ ದಾಖಲಾತಿ ಸಿದ್ದವಾಗಿಟ್ಟುಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಸಮೀಕ್ಷಾದಾರರು ಮನೆಗಳಿಗೆ ಬಂದಾಗ ಸಾರ್ವಜನಿಕರು ಸಹಕರಿಸಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.

ಶಿಬಿರಗಳ ಆಯೋಜನೆ

ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇರುವ ಪ್ರದೇಶಗಳು ಮತ್ತು ಕಾಡಂಚಿನ ಪ್ರದೇಶಗಳ 24 ಗ್ರಾಮ ಪಂಚಾಯಿತಿಗಳಲ್ಲಿರುವ 94 ಹಾಡಿ ಗ್ರಾಮಗಳಲ್ಲಿ 17449 ಕುಟುಂಬಗಳು ಸಮೀಕ್ಷಾ ಕಾರ್ಯಕ್ಕೆ ಹತ್ತಿರದ ಗ್ರಾಮ ಪಂಚಾಯಿ ಸರ್ಕಾರಿ ಶಾಲೆ ಗ್ರಂಥಾಲಯ ಮತ್ತು ಇತ್ಯಾದಿ ಸ್ಥಳಗಳಲ್ಲಿ ಶಿಬಿರ ಆಯೋಜನೆ ಮಾಡಲಾಗಿದೆ. ಅಲೆಮಾರಿ ಅರೆ ಅಲೆಮಾರಿ ಜನಾಂಗದ ಕಾಲೋನಿಗಳಲ್ಲಿ ಆರ್.ಆರ್ ಸಂಖ್ಯೆ ಹೊಂದಿರದವರ ಮನೆಗಳಿಗೆ ಗ್ರಾಮಾಡಳಿತ ಅಧಿಕಾರಿಗಳಿಂದ ಯುಹೆಚ್‍ಐಡಿ ಸಂಖ್ಯೆ ಸೃಜಿಸಲು ಕ್ರಮವಹಿಸಲಾಗುತ್ತಿದೆ. ಮೊಬೈಲ್ ಆಪ್‍ನಲ್ಲಿ ತಾಂತ್ರಿಕ ಸಮಸ್ಯೆ ಪರಿಹರಿಸಲಾಗಿದ್ದು ಮತ್ತೆ ಸಮಸ್ಯೆ ಎದುರಾದರೆ ಪರಿಹರಿಸಲು ತಾಂತ್ರಿಕ ಪರಿಣಿತರನ್ನು ತಾಲ್ಲೂಕುವಾರು ನೇಮಕಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.