
ಕೊಳ್ಳೇಗಾಲ: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡುವಾಗ ಸುರಕ್ಷಿತ ಕಿಟ್ ಧರಿಸಿಯೇ ಕೆಲಸ ಮಾಡಬೇಕು ಎಂದು ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಹೇಳಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಉಪ ವಿಭಾಗ ಮಟ್ಟದ ಸಫಾಯಿ ಕರ್ಮಚಾರಿ ಉಸ್ತುವಾರಿ ಸಮಿತಿ ಸಭೆ ಹಾಗೂ ಉಪ ವಿಭಾಗ ಮಟ್ಟದ ಜಾಗೃತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಪೌರಕಾರ್ಮಿಕರು ದಿನನಿತ್ಯ ಸ್ವಚ್ಛತಾ ಕಿಟ್‌ಗಳನ್ನು ಹಾಕಿಕೊಂಡು ಕೆಲಸ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಪ್ರತಿಯೊಬ್ಬರೂ ಸಮವಸ್ತ್ರ ಹಾಗೂ ಸ್ವಚ್ಛತಾ ಕಿಟ್ ಹಾಕಿಕೊಂಡು ಕೆಲಸ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳು ವಾಟ್ಸ್ ಆ್ಯಪ್ ಗ್ರೂಪ್ ರಚಿಸಿ ಪ್ರತಿನಿತ್ಯ ಕೆಲಸ ಮಾಡುವ ಪೌರಕಾರ್ಮಿಕರ ಫೋಟೋಗಳನ್ನು ಹಾಕಬೇಕು. ಒಂದು ವೇಳೆ ಈ ನಿಯಮವನ್ನುಯಾರು ಪಾಲಿಸುವುದಿಲ್ಲವೋ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಪೌರಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಹಾಗೂ ಇಲಾಖೆ ವತಿಯಿಂದ ಪ್ರತಿ ತಿಂಗಳು ಆರೋಗ್ಯ ತಪಾಸಣಾ ಶಿಬಿರ ಇರುತ್ತದೆ. ಹಾಗಾಗಿ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಈಗಾಗಲೇ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆಯಲ್ಲಿ ಪೌರ ಕಾರ್ಮಿಕರ ವಿಶ್ರಾಂತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಕೊಳ್ಳೇಗಾಲ ಹಾಗೂ ಹನೂರಿನಲ್ಲಿ ಇನ್ನೂ ನಿರ್ಮಾಣ ಮಾಡಿಲ್ಲ. ಪೌರಾಯುಕ್ತರು ಇದರ ಬಗ್ಗೆ ಗಮನ ಹರಿಸಿ, ಅವರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಪೌರಕಾರ್ಮಿಕ ಮಕ್ಕಳಿಗೆ ಕಡ್ಡಾಯವಾಗಿ ಸನ್ಮಾನ ಮಾಡಿ ಗೌರವ ಸಲ್ಲಿಸಬೇಕು. ಪೌರ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ವಿದ್ಯಾಭ್ಯಾಸಕ್ಕೆ ಸಿಗುವ ಸವಲತ್ತುಗಳನ್ನು ದೊರಕಿಸಿ ಕೊಡುವಲ್ಲಿ ಅಧಿಕಾರಿಗಳು ಉತ್ತಮ ಕಾರ್ಯ ಮಾಡಬೇಕು ಎಂದರು.
ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೇಶವಮೂರ್ತಿ, ಪೌರಕಾರ್ಮಿಕ ಮಕ್ಕಳು ಕೆಎಎಸ್, ಐಎಎಸ್‌ಗೆ ಸಜ್ಜಾಗಲು ಹಾಗೂ ವಿದೇಶದಲ್ಲಿ ಶಿಕ್ಷಣ ಪಡೆಯಲು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅವಕಾಶ ಇದೆ. ಇದರ ಜೊತೆಗೆ ಉನ್ನತ ವಿದ್ಯಾಭ್ಯಾಸ ಮಾಡಲು ಸಹ ಅವಕಾಶ ಇದೆ. ಪೌರಕಾರ್ಮಿಕರ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡುವವರಿದ್ದರೆ ಅರ್ಜಿ ಸಲ್ಲಿಸಬಹುದು ಎಂದರು.
ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಪೌರಕಾರ್ಮಿಕರ ಕೊರತೆ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಇದರ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಸಹ ಮಾಡಿದ್ದೇನೆ. ಹಾಗಾಗಿ ಜಿಲ್ಲಾ ಪಂಚಾಯಿತಿಯ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದು ಹೊರಗುತ್ತಿಗೆ ನೌಕರರನ್ನು ತೆಗೆದುಕೊಂಡರೆ ಪೌರಕಾರ್ಮಿಕರ ಕೊರತೆ ಕಡಿಮೆಯಾಗುತ್ತದೆ. ಇದರ ಜೊತೆಗೆ ಗ್ರಾಮಗಳು ಸಹ ಸ್ವಚ್ಛವಾಗಿ ಇರುತ್ತವೆ. ಸರ್ಕಾರದಿಂದ ಬರುವ ಸವಲತ್ತುಗಳನ್ನು ಪೌರಕಾರ್ಮಿಕರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ನಿರ್ವಹಿಸಬೇಕು ಎಂದರು.
ಮಲೈ ಮಹದೇಶ್ವರ ಬೆಟ್ಟದ ಸಹಾಯಕ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಮಲೆ ಮಹದೇಶ್ವರ ಬೆಟ್ಟದಲ್ಲಿ 146 ಪೌರಕಾರ್ಮಿಕರು ಇದ್ದಾರೆ. ಅದರಲ್ಲಿ 90 ಮಂದಿ ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿದ್ದೇವೆ. ಎಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸಾವಿರಾರು ಮಂದಿ ಭಕ್ತಾದಿಗಳು ಪ್ರತಿನಿತ್ಯ ಆಗಮಿಸುವುದರಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಕುಮಾರ್ ಮೀನಾ ‘ಪ್ರಾಧಿಕಾರದ ವತಿಯಿಂದ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಮಾಡಬೇಕು. ಸುರಕ್ಷಿತ ಕಿಟ್ ಗಳನ್ನು ಸಹ ನೀಡಬೇಕು. ಜೊತೆಗೆ ಪೌರಕಾರ್ಮಿಕ ಮಕ್ಕಳಿಗೆ ಸನ್ಮಾನ ಮಾಡುವುದರ ಜೊತೆಗೆ ಉನ್ನತ ಶಿಕ್ಷಣ ಪಡೆಯಲು ಪ್ರಾಧಿಕಾರದ ವತಿಯಿಂದ ಅವಕಾಶವನ್ನು ಕಲ್ಪಿಸಿಕೊಡಿ’ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜಾತಿ ನಿಂದನೆ ದೌರ್ಜನ್ಯ ಸೇರಿ ಅನೇಕ ಪ್ರಕರಣಗಳನ್ನು ಸೂಕ್ತವಾಗಿ ತನಿಖೆ ನಡೆಸಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಬೇಕು. ಸುಳ್ವಾಡಿ ಕಿಚ್ ಗುತ್ ಮಾರಮ್ಮ ವಿಷ ಪ್ರಸಾದ ಪ್ರಕರಣದ ಸಂತ್ರಸ್ತರಿಗೆ ಈಗಾಗಲೇ ಸರ್ಕಾರ ಎರಡು ಎಕರೆ ಜಾಗವನ್ನು ಗುರುತು ಮಾಡಿದೆ ಹಾಗಾಗಿ ಅರ್ಹ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರ ಜೊತೆ ಚರ್ಚೆ ನಡೆಸಿ ನಿವೇಶನವನ್ನು ಶೀಘ್ರವೇ ಕಲ್ಪಿಸಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.