
ಸಂತೇಮರಹಳ್ಳಿ: ಇಲ್ಲಿನ ಸೆಸ್ಕ್ ಉಪ ವಿಭಾಗದ ಸಿಬ್ಬಂದಿ ಶುಕ್ರವಾರ ‘ವಸೂಲಾತಿ ಅಭಿಯಾನ’ ಅಂಗವಾಗಿ ವಿದ್ಯುತ್ ಬಿಲ್ ಪಾವತಿ ಮಾಡದೇ ಇರುವ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಖಡಿತಗೊಳಿಸಿದರು.
ಪ್ರಭಾರ ಎಇಇ ಮುದ್ದರಾಜು ಮಾತನಾಡಿ, ಸೆಸ್ಕ್ ಗ್ರಾಹಕರು ಬಳಕೆ ಮಾಡಿದ ವಿದ್ಯುತ್ ಬಿಲ್ ಅನ್ನು ಶೇ100 ವಸೂಲಾತಿ ಮಾಡಬೇಕು ಎಂದು ಎಂ.ಡಿ. ಮುನಿಗೋಪಾಲ್‌ರಾಜು ಆದೇಶ ನೀಡಿದ್ದಾರೆ. ಅದರಂತೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸಂತೇಮರಹಳ್ಳಿ ಉಪ ವಿಭಾಗದ ಹೊಂಗನೂರು, ಗಣಗನೂರು, ಕಾಗಲವಾಡಿ, ಕುದೇರು ಶಾಖಾ ಕಚೇರಿ ವ್ಯಾಪ್ತಿಯಲ್ಲಿರುವ ಗೃಹ ಬಳಕೆ, ವಾಣಿಜ್ಯ, ಕೈಗಾರಿಕೆಗಳಿಂದ ₹ 93 ಲಕ್ಷ ಶುಲ್ಕ ಪಾವತಿ ಬಾಕಿ ಉಳಿದಿದೆ. ಈ ಗ್ರಾಹಕರಿಗೆ ಈಗಾಗಲೇ ಹಲವು ಬಾರಿ ಮನವಿ ನೀಡಿದ್ದರೂ ಪಾವತಿ ಮಾಡಿಲ್ಲ. ಹೀಗಾಗಿ ಅಂಥವರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದೆ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಮ ಪಂಚಾಯಿತಿ, ಸರ್ಕಾರಿ ಇಲಾಖೆಗಳ ಸಂಪರ್ಕ ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಜೆಇ ಸತೀಶ್, ಸಿಬ್ಬಂದಿ ಮರಿಸ್ವಾಮಿ, ನಿರಂಜನ್, ರಾಜು ಸ್ಥಳದಲ್ಲಿದ್ದರು.