ADVERTISEMENT

ಕಸಾಪ: ಸರಸ್ವತಿ ಚಿಮ್ಮಲಗಿ ಏಕೈಕ ಮಹಿಳಾ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 11:53 IST
Last Updated 11 ಏಪ್ರಿಲ್ 2021, 11:53 IST
ಡಾ.ಸರಸ್ವತಿ ಚಿಮ್ಮಲಗಿ
ಡಾ.ಸರಸ್ವತಿ ಚಿಮ್ಮಲಗಿ   

ಚಾಮರಾಜನಗರ: ಮೇ 9ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನಕ್ಕೆಲೇಖಕಿ ಡಾ.ಸರಸ್ವತಿ ಚಿಮ್ಮಲಗಿ ಅವರು ಸ್ಪರ್ಧಿಸುತ್ತಿದ್ದು, 22 ಮಂದಿ ಅಭ್ಯರ್ಥಿಗಳಲ್ಲಿ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರಸ್ವತಿ ಚಮ್ಮಲಗಿ ಅವರು, ‘ಕನ್ನಡ ಸಾಹಿತ್ಯ ಪರಿಷತ್ತಿನ 105 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಮಹಿಳೆಯರು ಯಾರೂ ಅಧ್ಯಕ್ಷರಾಗಿಲ್ಲ. ಪರಿಷತ್ತಿನಲ್ಲಿ ಮಹಿಳೆಗೆ ಸಮಾನ ಅವಕಾಶ ದೊರಕಿಲ್ಲ. ಪುರುಷರೇ ಪ್ರಧಾನವಾಗಿರುವ ಇಲ್ಲಿ ಸಮಾನತೆ ಇಲ್ಲ. ಲಿಂಗ ತಾರತಮ್ಯ ಹೋಗಲಾಡಿಸುವ ಅಗತ್ಯವಿದೆ. ಈ ಉದ್ದೇಶದಿಂದ ಎಲ್ಲ ಮಹಿಳೆಯರ ಒತ್ತಾಸೆಯಿಂದ ಮತ್ತು ಅವರ ಪ್ರತಿನಿಧಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ’ ಎಂದು ಹೇಳಿದರು.

‘ಕಸಾಪದ ಒಟ್ಟು ಸದಸ್ಯರ ಪೈಕಿ 80 ಸಾವಿರದಷ್ಟು ಮಹಿಳೆಯರಿದ್ದಾರೆ. ಎಲ್ಲ ಸದಸ್ಯೆಯರು ನನಗೆ ಮತ ನೀಡಬೇಕು. ಮಹಿಳಾ ಸದಸ್ಯರು ಮಾತ್ರವಲ್ಲ, ಮಹಿಳಾ ಸಬಲೀಕರಣಕ್ಕೆ ಬೆಂಬಲ ಸೂಚಿಸುವ ಎಲ್ಲರೂ ನನ್ನನ್ನೇ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಹೇಳಿದರು.

ADVERTISEMENT

‘ನಾನು ಅಧ್ಯಕ್ಷೆಯಾಗಿ ಆಯ್ಕೆಯಾದರೆ, ಪರಿಷತ್ತಿನಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಗೌರವ ಕಾರ್ಯದರ್ಶಿಗಳ ಎರಡು ಹುದ್ದೆಗಳ ಪೈಕಿ ಒಂದು ಮಹಿಳೆಯರಿಗೆ ಮೀಸಲಿಡಲು ಬೈಲಾದಲ್ಲಿ ಬದಲಾವಣೆ ತರಲಾಗುವುದು. ಐದು ವರ್ಷಗಳ ಅವಧಿಯಲ್ಲಿ ಎರಡು ಸಾಮಾನ್ಯ, ಎರಡು ಮಹಿಳಾ ಸಮ್ಮೇಳನ, ಒಂದು ವಿಶ್ವ ಕನ್ನಡ ಸಮ್ಮೇಳನ, ದಲಿತ ಸಾಹಿತ್ಯ ಸಮ್ಮೇಳನ, ಯುವ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುವುದು’ ಎಂದರು.

‘ಸದ್ಯ ಕಸಾಪದ ಚಟುವಟಿಕೆ ಬೆಂಗಳೂರು ಕೇಂದ್ರಿತವಾಗಿದೆ. ಅದನ್ನು ಹಳ್ಳಿಯವರೆಗೂ ತೆಗೆದುಕೊಂಡು ಹೋಗಲು ಶ್ರಮಿಸುತ್ತೇನೆ’ ಎಂದು ಸರಸ್ವತಿ ಚಿಮ್ಮಲಗಿ ಅವರು ಹೇಳಿದರು.

ಲಕ್ಷ್ಮಿರಂಗರಾವ್‌, ಅಶ್ವಿನಿ ಹಾಗೂ ಪತ್ರಕರ್ತ ಗಣೇಶ ಅಮಿನಗಡ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.