ADVERTISEMENT

ರಿಕ್ರಿಯೇಷನ್‌ ಕ್ಲಬ್‌ ಹೆಸರಲ್ಲಿ ದಂಧೆ: ಆರೋಪ

ಪ್ರತಿ ಮೂರು ತಿಂಗಳಿಗೊಮ್ಮೆ ಎಸ್.ಸಿ, ಎಸ್.ಟಿ ಹಿತರಕ್ಷಣಾ ಸಭೆ: ಎಸ್‌.ಪಿ ಶಿವಕುಮಾರ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಮೇ 2022, 2:55 IST
Last Updated 25 ಮೇ 2022, 2:55 IST
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮುಖಂಡರು ಭಾಗವಹಿಸಿದ್ದರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮುಖಂಡರು ಭಾಗವಹಿಸಿದ್ದರು   

ಚಾಮರಾಜನಗರ: ನಗರ ಸೇರಿದಂತೆ ವಿವಿಧೆಡೆಗಳಲ್ಲಿ ಜೂಜು ಕೇಂದ್ರಗಳು ಅವ್ಯಾಹತವಾಗಿ ನಡೆಯುತ್ತಿವೆ. ರಿಕ್ರಿಯೇಷನ್ ಕ್ಲಬ್‌ಗಳ ಹೆಸರಿನಲ್ಲಿ ದಂಧೆ ನಡೆಯುತ್ತಿದೆ. ಪೊಲೀಸ್‌ ಸಿಬ್ಬಂದಿಯೇ ಜೂಜು ಆಡುತ್ತಾರೆ. ‌ಅಕ್ರಮ ಮದ್ಯ ಮಾರಾಟ, ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ... ಎಂಬುದೂ ಸೇರಿದಂತೆ ದೂರುಗಳ ಮಹಾಪೂರವೇ ಹರಿದು ಬಂತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಹಿತರಕ್ಷಣಾ ಸಭೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮುಖಂಡರು ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ನಗರದ ಮುಖಂಡ ಸುರೇಶ್‌ ನಾಯ್ಕ ಅವರು ಮಾತನಾಡಿ, ‘ಜೂಜು ಕೇಂದ್ರಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತವೆ. ರಿಕ್ರಿಯೇಷನ್‌ ಕ್ಲಬ್‌ಗಳ ಹೆಸರಿನಲ್ಲಿ ದಂಧೆ ನಡೆಸಲಾಗುತ್ತಿದೆ. ನಿಮ್ಮ ಇಲಾಖೆಯ ಸಿಬ್ಬಂದಿಯೇ ಈ ಕೇಂದ್ರಗಳಿಗೆ ತೆರಳಿ ಜೂಜಾಟದಲ್ಲಿ ತೊಡಗುತ್ತಿದ್ದಾರೆ. ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಶಿವಕುಮಾರ್‌ ಅವರು, ‘ರಿಕ್ರಿಯೇಷನ್‌ಕ್ಲಬ್‌ಗಳಿಗೆ ಪರವಾನಗಿ ಇರುತ್ತದೆ. ಪರವಾನಗಿ ಇಲ್ಲದ ಕ್ಲಬ್‌ಗಳ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದರೆ ಕ್ರಮ ವಹಿಸಲಾಗುವುದು. ಇಲಾಖೆಯ ಸಿಬ್ಬಂದಿ ಯಾರೇ ಆಗಲಿ ಜೂಟಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ನೀಡಿದರೆ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ ಅವರು ಮಾತನಾಡಿ, ‘2019ರಿಂದ ಜಿಲ್ಲಾ ಪೊಲೀಸ್‌ ದೂರು ಪ್ರಾಧಿಕಾರದ ನಾಗರಿಕ ಸಮಾಜದ ಮೂರು ಸದಸ್ಯರ ಸ್ಥಾನ ಖಾಲಿ ಇದೆ. ಹೆಸರುಗಳನ್ನು ಶಿಫಾರಸು ಮಾಡಿದ್ದರೂ, ಇನ್ನೂ ನೇಮಕ ಮಾಡಿಲ್ಲ. ಹಾಗಾಗಿ, ಪ್ರಾಧಿಕಾರ ಸಮರ್ಪಕವಾಗಿ ಕಾರ್ಯನಿ
ರ್ವಹಿಸುತ್ತಿಲ್ಲ’ ಎಂದು ದೂರಿದರು. ‌

‘ನಗರದ ಜಿಲ್ಲಾಸ್ಪತ್ರೆ ಮುಂಭಾಗವಿರುವ ಮದ್ಯದಂಗಡಿ ತೆರವುಗೊಳಿಸಲು ಜಿಲ್ಲಾಧಿಕಾರಿ ಅವರು ಈಗಾಗಲೇ ಆದೇಶ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ತಕ್ಷಣ ಅದನ್ನು ಬೇರೆ ಕಡೆಗೆ ವರ್ಗಾವಣೆಗೆ ಕ್ರಮ ವಹಿಸಬೇಕು. ರೌಡಿಪಟ್ಟಿಯಲ್ಲಿ ಹೆಸರು ಇರುವಂತಹ, ಉತ್ತಮ ಜೀವನ ನಡೆಸುತ್ತಿರುವವರನ್ನು ಪಟ್ಟಿಯಿಂದ ಹೆಸರು ಕೈ ಬಿಡಬೇಕು’ ಎಂದು ಮನವಿ ಮಾಡಬೇಕು. ‌

ಶಿವಕುಮಾರ್ ಅವರು ಪ್ರತಿಕ್ರಿಯಿಸಿ, ‘ಪೊಲೀಸ್ ದೂರು ಪ್ರಾಧಿಕಾರದಲ್ಲಿ ಒಂಬತ್ತು ದೂರುಗಳು ಇತ್ಯರ್ಥಕ್ಕೆ ಬಾಕಿ ಇವೆ. ನಾಗರಿಕ ಸಮಾಜದ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿಂದ ಶಿಫಾರಸು ಹೋಗಿದೆ. ರಾಜ್ಯ ಮಟ್ಟದಲ್ಲಿ ಆದೇಶ ಆಗಬೇಕಿದೆ. ರೌಡಿಪಟ್ಟಿಯಿಂದ ಹೆಸರು ಕೈ ಬಿಡುವ ಸಂಬಂಧ ಪರಿಶೀಲಿಸಿ ಕ್ರಮ ವಹಿಸಲಾಗುವುದು’ ಎಂದರು.

ಮುಖಂಡ ಚಾ.ಗು. ನಾಗರಾಜು ಮಾತನಾಡಿ, ‘ಠಾಣೆಗಳಲ್ಲಿ ಎಫ್.ಐ.ಆರ್. ದಾಖಲಿಸುವಾಗ ಪ್ರಭಾವಿಗಳ ಹಿತರಕ್ಷಣೆಗಾಗಿ ಸತ್ಯಾಸತ್ಯತೆಯನ್ನು ಮರೆಮಾಚಲಾಗುತ್ತಿದೆ. ಪ್ರಕರಣವನ್ನು ವೈಜ್ಞಾನಿಕವಾಗಿ, ಕೂಲಂಕಷವಾಗಿ ಪರಿಶೀಲನೆ ಮಾಡಿ ಎಫ್.ಐ.ಆರ್. ದಾಖಲಿಸಬೇಕು. ಎಸ್.ಸಿ, ಎಸ್.ಟಿ ಬಡಾವಣೆಗಳಿಗೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಬೇಕು’ ಎಂದು ಕೋರಿದರು. ‌

ಬೊಮ್ಮಲಾಪುರದ ನಂದೀಶ್ ಮಾತನಾಡಿ, ‘ಗ್ರಾಮಗಳಲ್ಲಿ ಇನ್ನೂ ಸಾಮಾಜಿಕ ಬಹಿಷ್ಕಾರಗಳು ಚಾಲ್ತಿಯಲ್ಲಿವೆ. ಇದನ್ನು ತಡೆಯಬೇಕು’ ಎಂದು ಒತ್ತಾಯಿಸಿದರು.‌

ಕೊಳ್ಳೇಗಾಲದ ನಾಗರಾಜು ಅವರು, ‘ಕೊಳ್ಳೇಗಾಲಕ್ಕೆ ಮಹಿಳಾ ಪೊಲೀಸ್ ಹಾಗೂ ಸಂಚಾರ ಪೊಲೀಸ್ ಠಾಣೆಗಳ ಅಗತ್ಯವಿದ್ದು, ಶೀಘ್ರವಾಗಿ ಮಂಜೂರು ಮಾಡಬೇಕು’ ಎಂದರು.‌

ಜಮೀನುಗಳಲ್ಲಿ ಮೋಟಾರ್, ಪಂಪ್‌ ಸೆಟ್ ಕಳ್ಳತನ, ದರೋಡೆ, ವಾಹನ ಹಾಗೂ ಸಂಚಾರದಟ್ಟಣೆಯಂತಹ ಸಮಸ್ಯೆಗಳ ಬಗ್ಗೆ ಮುಖಂಡರು ಪ್ರಸ್ತಾಪಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜು, ಡಿ.ವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಕೊಳ್ಳೇಗಾಲ ಡಿವೈಎಸ್‌ಪಿ ನಾಗರಾಜು, ಅಬಕಾರಿ ಉಪ ಆಯುಕ್ತ ಶ್ರೀನಿವಾಸ್, ಸೂಪರಿಂಟೆಂಡೆಂಟ್‌ ಮೋಹನ್‌ಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.