ಯಳಂದೂರು: ತಾಲ್ಲೂಕಿನ ವೈ.ಕೆ.ಮೋಳೆ ಗ್ರಾಮದ ಪರಿಶಿಷ್ಟ ಜಾತಿ ಸ್ಮಶಾನದ ಗಡಿ ಗುರುತು ಮತ್ತು ದಾಖಲೆಗಳನ್ನು ಅಧಿಕಾರಿಗಳು ನವೀಕರಿಸಿ, ಗ್ರಾಮಸ್ಥರ ಸಮ್ಮುಖದಲ್ಲಿ ಶನಿವಾರ ಫಲಕ ನೆಟ್ಟು, ಹತ್ತಾರು ವರ್ಷಗಳ ಸಮಸ್ಯೆಯನ್ನು ಬಗೆಹರಿಸಿದರು..
ತಹಶೀಲ್ದಾರ್ ಎಸ್,ಎನ್.ನಯನಾ ಮಾತನಾಡಿ, ‘ಸರ್ವೇ ನಂಬರ್ 306ರಲ್ಲಿ ಪರಿಶಿಷ್ಟರ ಸ್ಮಶಾನದ ಸ್ಥಳ 1 ಎಕರೆ 4ಗುಂಟೆ ಹಾಗೂ ಸರ್ಕಾರಿ ಬೀಳು ಮತ್ತು ಕಟ್ಟೆ 20 ಗುಂಟೆ ಪ್ರದೇಶದಲ್ಲಿ ಇದೆ. ಸ್ಮಶಾನದ ಜಾಗವನ್ನು 2.20 ಎಕರೆ ಪ್ರದೇಶಕ್ಕೆ ವಿಸ್ತರಿಸಲಾಗಿದೆ. ಸ್ಮಶಾನದ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆ ಹಣ ಬಿಡುಗಡೆ ಮಾಡಿದ್ದು, ಇಲ್ಲಿ ಮೂಲ ಸೌಕರ್ಯ ಕಲ್ಪಿಸಲು ಯೋಜನೆ ಜಾರಿಗೆ ಬರಲಿದೆ’ ಎಂದರು.
‘ಬಹಳ ವರ್ಷಗಳಿಂದ ಜಾಗದ ಸಮಸ್ಯೆ ಇದ್ದು, ದಾಖಲೆಗಳ ಕೊರತೆ ಎದುರಾಗಿತ್ತು. ಈ ಬಗ್ಗೆ ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಈಗ ಸಮಸ್ಯೆ ಬಗೆಹರಿದಿದ್ದು, ಈ ಸ್ಥಳದಲ್ಲಿ ಪರಿಶಿಷ್ಟರಿಗೆ ಸ್ಮಶಾನ ಮಂಜೂರಾದ ಬಗ್ಗೆ ಫಲಕ ಅಳವಡಿಸಲಾಗಿದೆ. ಸುತ್ತಲ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಹೋಗಲಾಗುವುದು’ ಎಂದು ಸಮುದಾಯದ ಮುಖಂಡರು ಹೇಳಿದರು.
ರಾಜಸ್ವ ನಿರೀಕ್ಷಕ ಎಂ.ಎಸ್.ಯದುಗಿರಿ, ಸರ್ವೇಯರ್ ಕೀರ್ತಿ, ವಿಎ ಸುಹಾಸ್, ಗ್ರಾಮದ ಯಜಮಾನರು ಮತ್ತು ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.