
ಯಳಂದೂರು: ಪಟ್ಟಣದ ಪೋಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪಂಗಡದ ಕುಂದುಕೊರತೆ ಸಭೆಯಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ಮುಖಂಡರು ದೂರಿದರು. ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಉಂಟಾಗುತ್ತಿರುವ ಕಿರಿಕಿರಿ ಹಾಗೂ ಸಮಸ್ಯೆಗಳ ಬಗ್ಗೆ ದೂರಿದರು.
‘ಪಟ್ಟಣದ ಬಸ್ ನಿಲ್ದಾಣದಲ್ಲಿ ವಾಹನಗಳು ಅಡ್ಡಾದಿಡ್ಡಿ ಸಂಚರಿಸಿ ಸಾರ್ವಜನಿಕರಿಗೆ ಭಯ ಉಂಟುಮಾಡುತ್ತಿವೆ. ಬಹುತೇಕ ಅಂಗಡಿಗಳು ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿವೆ. ಪಟ್ಟಣದಲ್ಲಿ ರಸ್ತೆ ಬದಿ ವ್ಯಸನಿಗಳು ಮದ್ಯಪಾನ ಮಾಡಿ ಜನರಿಗೆ ಮುಜಗರ ಉಂಟುಮಾಡುತ್ತಿದ್ದಾರೆ. ಮಹಿಳೆಯರು ಮತ್ತು ಶಾಲಾ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ’ ಎಂದು ಮುಖಂಡರಾದ ಭೀಮಪ್ಪ ಮತ್ತು ಮಹೇಶ್ ಆರೋಪಿಸಿದರು.
‘ಬಹುತೇಕ ಕಡೆ ಹಂಪ್ಸ್ ಅಳವಡಿಸಿಲ್ಲ. ಇದರಿಂದ ಅಪಘಾತ ಸಂಭವಿಸುತ್ತದೆ. ತಳ್ಳುಗಾಡಿ ವ್ಯಾಪಾರಿಗಳು, ಆಟೋಗಳು ಎಲ್ಲೆಂದರಲ್ಲಿ ನಿಂತು ಪ್ರಯಾಣಿಕರ ಸಂಚಾರಕ್ಕೆ ತೊಂದರೆ ನೀಡುತ್ತಿದ್ದಾರೆ. ಬಸ್‌ಗಳು ನಿಲ್ದಾಣದಲ್ಲಿ ಸಮರ್ಪಕವಾಗಿ ನಿಲ್ಲುವುದಿಲ್ಲ. ಕಿರಿದಾದ ರಸ್ತೆಯಲ್ಲಿ ದಾಟಲು ವೃದ್ಧರು ಮತ್ತು ಗ್ರಾಮೀಣ ಜನರು ಪರದಾಡುವಂತೆ ಆಗಿದೆ. ಇಂತಹ ಕಡೆ ಪೊಲೀಸರು ವಾಹನಗಳ ಸುಲಭವಾಗಿ ಸಂಚರಿಸಲು ಕಾರ್ಯಾಚರಣೆ ನಡೆಸಬೇಕು. ಪಾದಚಾರಿ ರಸ್ತೆಗಳಲ್ಲಿ ಜನರು ಸಂಚರಿಸಲು ವ್ಯವಸ್ಥೆ ಮಾಡಬೇಕು. ವಾಹನ ದಟ್ಟಣೆ ಇದ್ದಾಗ ನಿಯಂತ್ರಣಕ್ಕೆ ಯೋಜನೆ ರೂಪಿಸಬೇಕು’ ಎಂದು ಮಾಲಂಗಿ ಶಿವಮಲ್ಲು ಹಾಗೂ ರಂಗಸ್ವಾಮಿ ಒತ್ತಾಯಿಸಿದರು.
ಸರ್ಕಲ್ ಇನ್ಸ್ಪೆಕ್ಟರ್ ಜಿ.ಕೆ.ಸುಬ್ರಮಣ್ಯ ಮಾತನಾಡಿ, ‘ಎಲ್ಲ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲಾಗುವುದು. ಯಾವುದೇ ಸಮಸ್ಯೆ ಕಂಡುಬಂದರೂ 112ಗೆ ಕರೆ ಮಾಡಿ, ಮಾಹಿತಿ ನೀಡಬೇಕು’ ಎಂದರು.
ಪೋಲೀಸ್ ಇನ್‌ಸ್ಪೆಕ್ಟರ್ ಆಕಾಶ್, ಅಗರ ಪೋಲೀಸ್ ಠಾಣೆಯ ಪಿಎಸ್ಐ ಎನ್.ಕರಿಬಸಪ್ಪ, ಮುಖಂಡರಾದ ಮಹೇಶ್, ನಾಗಣ್ಣ, ಸುರೇಶ್, ಗಣೇಶ್, ಟೈಗರ್ ಮಹೇಶ್, ಶಿವಮಲ್ಲು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.