ADVERTISEMENT

ಗುಂಡ್ಲುಪೇಟೆ: ವಿದ್ಯಾರ್ಥಿಗಳಿಗೆ ಕಜ್ಜಾಯದ ಊಟ

​ಪ್ರಜಾವಾಣಿ ವಾರ್ತೆ
Published 31 ಮೇ 2023, 15:56 IST
Last Updated 31 ಮೇ 2023, 15:56 IST
ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಗ್ರಾಮದಲ್ಲಿ ಮಕ್ಕಳಿಗೆ ಗ್ರಾ.ಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್ ಹೂಗುಚ್ಛ ನೀಡಿ ಸ್ವಾಗತಿಸಿದರು.
ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಗ್ರಾಮದಲ್ಲಿ ಮಕ್ಕಳಿಗೆ ಗ್ರಾ.ಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್ ಹೂಗುಚ್ಛ ನೀಡಿ ಸ್ವಾಗತಿಸಿದರು.   

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಶಾಲಾ-ಪ್ರಾರಂಭೋತ್ಸವ ವಿಶಿಷ್ಟವಾಗಿ ನಡೆಯಿತು. ಶಾಲೆಗಳಲ್ಲಿ ಮಕ್ಕಳಿಗೆ ಹೂವು ನೀಡುವ ಜೊತೆಗೆ ಎತ್ತಿನಗಾಡಿ ಮೂಲಕ ಬ್ಯಾಂಡ್ ಸಮೇತ ಕರೆ ತರಲಾಯಿತು. ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಜ್ಜಾಯದ ಸಿಹಿಯೂಟ ಉಣಬಡಿಸಿ ಸ್ವಾಗತ ಕೋರಲಾಯಿತು.

ತಾಲ್ಲೂಕಿನ ಚಿಕ್ಕಾಟಿಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ವತಿಯಿಂದ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಕ್ಕಳಿಗೆ ಹೂವು ಹಾಗೂ ಸಿಹಿ ನೀಡುವ ಮೂಲಕ ಶಾಲೆಗೆ ಸ್ವಾಗತ ಕೋರಿದರು. ನಂತರ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ವಿತರಣೆ ಮಾಡಲಾಯಿತು.

ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ‘ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಶಿಕ್ಷಣ ಇಲಾಖೆಯಿಂದ ಕೊಡಲಾಗುವುದು. ಜೊತೆಗೆ ಶಾಲೆಗಳ ಕೊಠಡಿ ದುರಸ್ತಿ ಅಥವಾ ಹೊಸ ಕಟ್ಟಡ ನಿರ್ಮಾಣದ ಕುರಿತು ವರದಿ ನೀಡಿದರೆ ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಿ ಅನುದಾನ ತಂದು ಶಾಲೆ ಅಭಿವೃದ್ಧಿಪಡಿಸಲಾಗುವುದು’ ಎಂದು ತಿಳಿಸಿದರು.

ADVERTISEMENT
ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕಾಟಿಯಲ್ಲಿ ಶಾಲಾ ಮಕ್ಕಳಿಗೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಿಸಿ ಸ್ವಾಗತಿಸಿದರು

‘ಕೇವಲ ಸರ್ಕಾರದ ಮೇಲೆ ಅವಲಂಬಿತವಾಗದೆ ಗ್ರಾಮದಲ್ಲಿರುವ ಶಾಲೆಯನ್ನು ನಮ್ಮದು ಎಂದು ಎಲ್ಲರೂ ಭಾವಿಸಬೇಕು. ಈ ಮೂಲಕ ಶಾಲೆ ಅಭಿವೃದ್ಧಿಗೆ ಒತ್ತು ನೀಡಿ, ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಪೋಷಕರು ನೋಡಿಕೊಳ್ಳಬೇಕು. ಇದರಿಂದ ಮಾತ್ರ ಉತ್ತಮ ಶಿಕ್ಷಣ ಕಲಿಯಲು ಸಾಧ್ಯ. ಕೇವಲ ಉದ್ಯೋಗಕ್ಕೆ ಮಾತ್ರವಲ್ಲ ಜೀವನ ನಡೆಸಲು ಶಿಕ್ಷಣ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳು ಹಾಗೂ ಪೋಷಕರು ಶಿಕ್ಷಣಕ್ಕೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ಗುಂಡ್ಲುಪೇಟೆ ತಾಲ್ಲೂಕಿನ ಹೊಂಗಹಳ್ಳಿಯಲ್ಲಿ ಎತ್ತಿನಗಾಡಿಯಲ್ಲಿ ಮಕ್ಕಳನ್ನು ಶಾಲೆಗೆ ಕರೆತರಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ಮಾತನಾಡಿ, ‘ತಾಲ್ಲೂಕಿನಲ್ಲಿ 258 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿದ್ದು, ಎಲ್ಲಾ ಶಾಲೆಗಳಲ್ಲಿಯೂ ತಳಿರು ತೋರಣ ಕಟ್ಟಿ ಮಕ್ಕಳನ್ನು ಸಂಭ್ರಮದಿಂದ ವಿಭಿನ್ನವಾಗಿ ಸ್ವಾಗತಿಸಲಾಗಿದೆ. ಜೊತೆಗೆ ಪೋಷಕರು, ಎಸ್‍ಡಿಎಂಸಿಯವರ ಸಹಭಾಗಿತ್ವವನ್ನು ಮಾಡಿಕೊಳ್ಳಲಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರಿಂದ ಮಾತ್ರ ಉತ್ತಮ ಶಿಕ್ಷಣ ಕೊಡಲು ಸಾಧ್ಯವಿಲ್ಲ. ಇದರಲ್ಲಿ ಸಮುದಾಯ ಪಾಲ್ಗೊಳ್ಳುವಿಕೆ ಅಗತ್ಯ. ಪ್ರತಿಯೊಬ್ಬರು ಸಹಕಾರ ನೀಡಿದರೆ ಗುಣಮಟ್ಟದ ಶಿಕ್ಷಣ ನೀಡಬಹುದು’ ಎಂದು ತಿಳಿಸಿದರು.

ಎತ್ತಿನಗಾಡಿಯಲ್ಲಿ ಬಂದ ಮಕ್ಕಳು ಗುಂಡ್ಲುಪೇಟೆ:

ಹೊಂಗಹಳ್ಳಿಯ ಪರಿಸರ ಮಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎತ್ತಿನಗಾಡಿಯಲ್ಲಿ ಮಕ್ಕಳನ್ನು ಶಾಲೆಗೆ ಕರೆ ತರಲಾಯಿತು. ಜೊತೆಗೆ ಕಜ್ಜಾಯದ ಸಿಹಿಯೂಟವನ್ನು ನೀಡುವ ಮೂಲಕ ಪ್ರಾರಂಭೋತ್ಸವ ಅದ್ಧೂರಿಯಾಗಿ ನಡೆಯಿತು. ಶಾಲೆಯ ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ ನೇತೃತ್ವದಲ್ಲಿ ಸುಮಾರು ಇಪ್ಪತ್ತು ಜೊತೆ ಎತ್ತಿನ ಗಾಡಿಗಳನ್ನು ಶೃಂಗಾರ ಮಾಡಿ ಮಕ್ಕಳನ್ನು ಕೂರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಮಕ್ಕಳನ್ನು ಶಾಲೆಗೆ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಎಸ್‍ಡಿಎಂಸಿ ಅಧ್ಯಕ್ಷ ಸುಬ್ಬಪ್ಪ ಹಾಗೂ ಗ್ರಾ.ಪಂ ಸದಸ್ಯ ರೇವಣ್ಣ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು. ನಂತರ ಮಕ್ಕಳು ಹಾಗೂ ಪೋಷಕರಿಗೆ ಕಜ್ಜಾಯ ಕೇಸರಿ ಬಾತ್ ತರಕಾರಿ ಬಾತ್ ಮೊಸರು ಬಜ್ಜಿ ಉಣ ಬಡಿಸಲಾಯಿತು. ಈ ಸಂದರ್ಭದಲ್ಲಿ ಚಾಮರಾಜನಗರ ಡಯಟ್ ಹಿರಿಯ ಉಪನ್ಯಾಸಕ ಕೆಂಪಲಿಂಗಪ್ಪ ಡಾ.ಎಚ್.ಟಿ.ಸರೋಜಮ್ಮ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಮಂಜಣ್ಣ ಬಿಆರ್‌ಪಿ ನಾಗೇಂದ್ರ ಸಿ.ಆರ್.ಪಿ. ಶಿವಸ್ವಾಮಿ ಎಸ್‍ಡಿಎಂಸಿ ಸದಸ್ಯ ಮಹೇಂದ್ರ ಸುನೀತಾ ಆಶಾ ನಿಂಗಮ್ಮಣ್ಣಿ ಸುಧಾ ಉಮಾ ಅನುಶ್ರೀ ಶಿಕ್ಷಕರಾದ ಪ್ರಭಾಕರ ವಿನೋದ ಶಿಕ್ಷಕಿ ಕವಿತಾ ಪೋಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.