ಗುಂಡ್ಲುಪೇಟೆ: ಪೂರ್ವಾನುಮತಿ ಇಲ್ಲದೆ ಶಾಲೆ ಮುಚ್ಚುವಂತಿಲ್ಲ ಎಂದು ತಾಲ್ಲೂಕಿನ ಮಾಡ್ರಹಳ್ಳಿ ಸಮೀಪವಿರುವ ಎಸ್‍ಎನ್‍ಎಸ್ ಶಾಲೆಯನ್ನು ಪೂರ್ವಾನುಮತಿ ಇಲ್ಲದೇ ಮುಚ್ಚುವ ಅವಕಾಶವಿಲ್ಲದ ಕಾರಣ ನಿರ್ಧಾರ ಕೈಬಿಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ಶಾಲಾ ಆಡಳಿತ ಮಂಡಳಿಯವರಿಗೆ ಸೂಚನೆ ನೀಡಿದರು.
ಮಾಡ್ರಹಳ್ಳಿ ಸಮೀಪದ ಎಸ್‍ಎನ್‍ಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದ ಕಾರಣ ಯಾವುದೇ ಸೂಚನೆ ನೀಡದೇ ಶಾಲೆ ಮುಚ್ಚುವುದಾಗಿ ಆಡಳಿತ ಮಂಡಳಿಯವರು ತಿಳಿಸಿದ ಹಿನ್ನೆಲೆಯಲ್ಲಿ ಪೋಷಕರು ಮತ್ತು ಕರ್ನಾಟಕ ಕಾವಲುಪಡೆ ಕಾರ್ಯಕರ್ತರು ಕ್ರಮದ ವಿರುದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಶಾಲೆ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್ ಖುದ್ದು ಶಾಲೆಗೆ ಭೇಟಿ ನೀಡಿ ಅಲ್ಲಿನ ಆಡಳಿತ ಮಂಡಳಿಯವರ ಜೊತೆಗೆ ಚರ್ಚಿಸಿದರು.
ಮಕ್ಕಳ ಸಂಖ್ಯೆ ಕಡಿಮೆ ಇರುವುದು ಇತರೆ ಕಾರಣಗಳಿಗೆ ಶಾಲೆ ಮುಚ್ಚುವುದಿದ್ದರೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಅನುಮತಿ ಪಡೆಯದ ಕಾರಣ ಶಾಲೆಗೆ ಪ್ರವೇಶಾತಿ ಕೊಡಿ, ಈ ಬಗ್ಗೆ ಫಲಕದಲ್ಲಿ ಪ್ರಕಟಣೆ ಹಾಕುವಂತೆ ಶಾಲೆ ಆಡಳಿತ ಮಂಡಳಿಯವರಿಗೆ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ಸೂಚಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿಯಮ ಮೀರದಂತೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಕಾವಲು ಪಡೆ ತಾಲೂಕು ಅಧ್ಯಕ್ಷ ಅಬ್ದುಲ್ ಮಾಲೀಕ್, ಜಿಲ್ಲಾ ಕಾರ್ಯಾಧ್ಯಕ್ಷ ಅಬ್ದುಲ್ ರಷೀದ್, ನವೀನ್ ಮಾಡ್ರಹಳ್ಳಿ ಸೇರಿದಂತೆ ಪೋಷಕರು, ರೈತ ಸಂಘಟನೆ ಮುಖಂಡರು ಮತ್ತು ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.