ADVERTISEMENT

ಈಶ್ವರಪ್ಪ ವಜಾ, ಬಂಧನಕ್ಕೆ ಎಸ್‌ಡಿಪಿಐ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 5:52 IST
Last Updated 14 ಏಪ್ರಿಲ್ 2022, 5:52 IST
ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಿ, ಬಂಧಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಬುಧವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು
ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಿ, ಬಂಧಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಬುಧವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಗುತ್ತಿಗೆದಾರ ಸಂತೋಷ್‌ ಪಾಟೀಲ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ಬಂಧಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ನಗರದಲ್ಲಿ ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು.

ಡೀವಿಯೇಷನ್‌ ರಸ್ತೆಯಲ್ಲಿರುವ ಪಕ್ಷದ ಕಚೇರಿಯಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಅವರು ಬಿಜೆಪಿ ಸರ್ಕಾರ ಹಾಗೂ ಈಶ್ವರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.

‘ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಶೇ 40ರ ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಬೆಳಗಾವಿಯ ಸಂತೋಷ್ ಪಾಟೀಲ ಅವರು ‘ನನ್ನ ಸಾವಿಗೆ ಈಶ್ವರಪ್ಪ ಅವರೇ ಕಾರಣ’ ಎಂದು ಮರಣ ಹೇಳಿಕೆ ನೀಡಿ ಆ‌ತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಶ್ವರಪ್ಪ ಅವರು ಶೇ 40ರಷ್ಟು ಕಮಿಷನ್‌ಗೆ ಪೀಡಿಸುತ್ತಿರುವ ಬಗ್ಗೆ ಸಂತೋಷ್‌ ಪಾಟೀಲ ಅವರು ಹೋರಾಟ ನಡೆಸಿಕೊಂಡು ಬಂದಿದ್ದರು. ಪ್ರಧಾನಿ ಮೋದಿ ಅವರಿಗೆ ಪತ್ರವನ್ನೂ ಬರೆದಿದ್ದರು. ಬಿಜೆಪಿಯ ಮುಖಂಡರನ್ನು ಭೇಟಿಯಾಗಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಹಾಗಿದ್ದರೂ ಅವರಿಗೆ ನ್ಯಾಯ ದೊರಕಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಅವರು ಆತ್ಮಹತ್ಯೆಗೂ ಮುನ್ನ ಬರೆದಿರುವ ಟಿಪ್ಪಣಿಯಿಂದ ಸಾಬೀತಾಗುತ್ತದೆ’ ಎಂದು ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅಬ್ರಾರ್‌ ಅಹಮದ್‌ ಹೇಳಿದರು.

ADVERTISEMENT

ಸವಾಲು: ‘ಹಿಂದೂ ನಾವೆಲ್ಲರೂ ಒಂದು’ ಎನ್ನುತ್ತಾ ನಿರಂತರ ಕೋಮುದ್ವೇಷವನ್ನು ಬಿತ್ತುತ್ತಿರುವ ಸಂಘ ಪರಿವಾರಕ್ಕೆ ತಾಕತ್ತಿದ್ದರೆ, ನಿಮ್ಮದೇ ಕಾರ್ಯಕರ್ತ ಸಂತೋಷ್ ಪಾಟೀಲ ಅವರ ಸಾವಿನ ನ್ಯಾಯಕ್ಕಾಗಿ, ಕೆ.ಎಸ್ ಈಶ್ವರಪ್ಪರನ್ನು ಬಂಧಿಸಬೇಕೆಂದು ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿ’ ಎಂದು ಅವರು ಸವಾಲು ಹಾಕಿದರು.

‘ತನ್ನದೇ ಪಕ್ಷದ ಕಾರ್ಯಕರ್ತನಿಗೆ ನ್ಯಾಯ ಕೊಡಲು ವಿಫಲವಾಗಿರುವ ಬಿಜೆಪಿಯು ಜನಸಾಮಾನ್ಯರ ಬಗ್ಗೆ ಏನು ಕಾಳಜಿ ವಹಿಸಬಹುದು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕಾಗಿದೆ’ ಎಂದರು.

ಜಿಲ್ಲಾ ಕಾರ್ಯದರ್ಶಿ ಜಬೀ ನೂರ್ ನಗರಸಭಾ ಸದಸ್ಯರಾದ ಖಲೀಲ್ ಉಲ್ಲಾ, ಮೊಹಮ್ಮದ್ ಅಮೀಕ್, ಅಫ್ಸರ್ ಪಾಷ ಹಾಗೂ ಮುಖಂಡರಾದ ಜಕೀರ್, ಇಸ್ರಾರ್, ಜಬೀ ಮತ್ತು ಪಿ.ಎಫ್.ಐ ಜಿಲ್ಲಾಧ್ಯಕ್ಷ ಕಫೀಲ್ ಆಹಮದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.