ADVERTISEMENT

ಶಾಂತಿ ಕದಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ: ಎಸ್‌ಡಿಪಿಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 15:21 IST
Last Updated 1 ಏಪ್ರಿಲ್ 2022, 15:21 IST
ಎಸ್‌ಡಿಪಿಐ ವತಿಯಿಂದ ಚಾಮರಾಜನಗರದಲ್ಲಿ ಶುಕ್ರವಾರ ರಾತ್ರಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಿತು
ಎಸ್‌ಡಿಪಿಐ ವತಿಯಿಂದ ಚಾಮರಾಜನಗರದಲ್ಲಿ ಶುಕ್ರವಾರ ರಾತ್ರಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಿತು   

ಚಾಮರಾಜನಗರ: ಹಿಜಾಬ್‌, ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ, ಹಲಾಲ್‌ ವಿಚಾರಗಳನ್ನು ಮುಂದಿಟ್ಟುಕೊಂಡು ಕರ್ನಾಟಕದಲ್ಲಿ ಶಾಂತಿ ಸೌಹಾರ್ದತೆಯನ್ನು ಕದಡಲು ಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ (ಎಸ್‌ಡಿಪಿಐ) ವತಿಯಿಂದ ನಗರದಲ್ಲಿ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಯಿತು.

ಡೀವಿಯೇಷನ್‌ ರಸ್ತೆಯಲ್ಲಿರುವ ಲಾರಿ ನಿಲ್ದಾಣದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಸಮಾಜದಲ್ಲಿ ಜಾತಿ, ಧರ್ಮ ನಡುವೆ ಧ್ವೇಷವನ್ನು ಬಿತ್ತಿ ಶತ ಶತಮಾನಗಳಿಂದ ಕರ್ನಾಟಕದಲ್ಲಿ ಜನರು ಪಾಲಿಸಿಕೊಂಡು ಬಂದ ಶಾಂತಿ ಸೌಹಾರ್ದತೆಯನ್ನು ಹಾಳು ಮಾಡಲು ಸಂಘ ಪರಿವಾರದ ಸಂಘಟನೆಗಳು ಪ್ರಯತ್ನಿಸುತ್ತಿವೆ. ಇದಕ್ಕೆ ಪುಷ್ಟಿ ಕೊಡುವಂತಹ ದ್ವೇಷ ಭಾಷಣಗಳು, ಹೇಳಿಕೆಗಳನ್ನು ಅವುಗಳ ನಾಯಕರು ನೀಡುತ್ತಿದ್ದಾರೆ. ಉಡುಪಿಯಲ್ಲಿ ಹಿಜಾಬ್‌ ವಿವಾದವನ್ನು ಆರಂಭಿಸಿ, ಅಲ್ಲಿನ ಶಾಸಕ ರಘುಪತಿ ಭಟ್‌ ಮತ್ತು ಬಿಜೆಪಿ ಮುಖಂಡರು, ಸಂಘ ಪರಿವಾರದವರು ಈ ವಿಚಾರವನ್ನು ಉದ್ವಿಗ್ನಗೊಳಿಸಿ ಹಿಂದೂ ವಿದ್ಯಾರ್ಥಿಗಳು ಹಿಜಾಬ್‌ ವಿರೋಧಿಸಿ ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಬರುವಂತೆ ಪ್ರೇರಣೆ ನೀಡಿ ಹಿಂದೂ ಮುಸ್ಲಿಂ ಕೋಮು ವಿಭಜನೆಯನ್ನು ಮಕ್ಕಳ ನಡುವೆ ಬಿತ್ತಿದರು’ ಎಂದು ಆರೋಪಿಸಿದರು.

ADVERTISEMENT

‘ನಂತರ ಜಾತ್ರೆಗಳ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂಬ ವಿಚಾರವನ್ನು ಪ್ರಸ್ತಾಪಿಸಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರ ನೀಡಿ ಜಾತ್ರೆಗಳಲ್ಲಿ ಬಿಗುವಿನ ವಾತಾವರಣ ಉಂಟು ಮಾಡಿದರು. ಇದೀಗ ಹಲಾಲ್‌ ವಿಷಯವನ್ನು ಮುಂದಿಟ್ಟುಕೊಂಡು, ಹಲಾಲ್‌ ಹಿಂದೂ ವಿರೋಧಿ ಎಂದು ಬೊಬ್ಬೆ ಹಾಕುತ್ತಾ, ‘ಹಲಾಲ್‌ ಮಾಂಸವನ್ನು ಖರೀದಿಸದೆ ಜಟ್‌ ಕಾ ಕಟ್‌’ ಮಾದರಿಯಲ್ಲಿ ವಧೆ ಮಾಡಿದ ಮಾಂಸ ಖರೀದಿಸಬೇಕು ಎಂದು ಹಿಂದೂ ಗ್ರಾಹಕರಿಗೆ ಒತ್ತಾಯಿಸುತ್ತಿದ್ದಾರೆ’ ಎಂದು ದೂರಿದರು.

‘ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿರುವ ನಾಯಕರ ನೇತೃತ್ವದಲ್ಲಿ ಗೂಂಡಾ ತಂಡಗಳನ್ನು ಕಟ್ಟಿಕೊಂಡು ಬಡ ವ್ಯಾಪಾರಿಗಳ, ಹೋಟೆಲ್‌ಗಳ ಮೇಲೆ ದಾಳಿ ಮಾಡುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಇದಕ್ಕೆ ಸರ್ಕಾರದ ಭಾಗವಾಗಿರುವ ಶಾಸಕರು, ಸಚಿವರು ಪೂರಕವಾದ ಹೇಳಿಕೆ ನೀಡಿ ದ್ವೇಷ ಹಚ್ಚು ಕೆಲಸ ಮಾಡುತ್ತಿದ್ದಾರೆ. ಪೊಲೀಸ್‌ ಇಲಾಖೆ ಈ ಕೂಡಲೇ ಎಚ್ಚೆತ್ತು ಇಂತಹ ಕುಕೃತ್ಯಗಳಿಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅಬ್ರಾರ್‌ ಅಹಮದ್‌, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ, ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಸೈಯದ್‌ ಆರೀಫ್‌, ಕಾರ್ಯದರ್ಶಿ ಜಬೀನೂರ್‌, ಖಜಾಂಚಿ ನಯಾಜ್‌ಉಲ್ಲಾ, ನಗರಸಭಾ ಸದಸ್ಯರಾದ ಖಲೀಲ್‌ ಉಲ್ಲಾ, ಮೊಹಮದ್‌ ಅಮೀಕ್‌, ಅಫ್ಸರ್‌ ಪಾಷ, ಮುಖಂಡರಾದ ರಪೀಕ್‌, ಜಾಕೀರ್‌, ಇಸ್ರಾರ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.