ADVERTISEMENT

ಚಾಮರಾಜನಗರ | ಮಹಿಳಾ ಸ್ವಾವಲಂಬನೆಗೆ ವರವಾದ ‘ಶಕ್ತಿ’

ಶಕ್ತಿ ಯೋಜನೆಯಡಿ 500 ಕೋಟಿ ಟಿಕೆಟ್ ವಿತರಣೆ ಹಿನ್ನೆಲೆಯಲ್ಲಿ ಸಂಭ್ರಮೋತ್ಸವ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 5:01 IST
Last Updated 15 ಜುಲೈ 2025, 5:01 IST
ಶಕ್ತಿ ಯೋಜನೆಯಡಿ 500 ಕೋಟಿ ಟಿಕೆಟ್‌ಗಳು ವಿತರಣೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಸಂಭ್ರಮೋತ್ಸವಕ್ಕೆ ಶಾಸಕ ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು
ಶಕ್ತಿ ಯೋಜನೆಯಡಿ 500 ಕೋಟಿ ಟಿಕೆಟ್‌ಗಳು ವಿತರಣೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಸಂಭ್ರಮೋತ್ಸವಕ್ಕೆ ಶಾಸಕ ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು   

ಚಾಮರಾಜನಗರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯದಾದ್ಯಂತ 500 ಕೋಟಿ ಟಿಕೆಟ್‌ಗಳು ವಿತರಣೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಸಂಭ್ರಮೋತ್ಸವಕ್ಕೆ ಶಾಸಕ ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.

ನಿಲ್ದಾಣದಲ್ಲಿ ಸಿಂಗಾರಗೊಂಡು ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪೂಜೆ ಸಲ್ಲಿಸಿ ಪ್ರಯಾಣಿಕರಿಗೆ ಸಿಹಿ ಹಂಚಲಾಯಿತು. ರಸ್ತೆ ಸಾರಿಗೆ ನಿಗಮದ ಇಬ್ಬರು ಚಾಲಕರು ಹಾಗೂ ನಿರ್ವಾಹಕರನ್ನು ಸನ್ಮಾನಿಸಲಾಯಿತು. 500 ಕೋಟಿ ಉಚಿತ ಟಿಕೆಟ್ ವಿತರಣೆಯ ಅಂಗವಾಗಿ ಹೊರತಂದಿರುವ ಪೋಸ್ಟರ್‌ಗಳನ್ನು ಪ್ರದರ್ಶನ ಮಾಡಲಾಯಿತು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಚುನಾವಣಾ ಪೂರ್ವ ನೀಡಿದ್ದ ವಾಗ್ದಾನದಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆಯಡಿ ರಾಜ್ಯದಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದು ಯೋಜನೆ ಮತ್ತಷ್ಟು ಸದುಪಯೋಗವಾಗಲಿ ಎಂದರು.

ADVERTISEMENT

ಶಕ್ತಿ ಯೋಜನೆಯಡಿ ಇದುವರೆಗೂ 500 ಕೋಟಿ ಟಿಕೆಟ್‌ಗಳು ವಿತರಣೆಯಾಗಿವೆ. ಮಹಿಳೆಯರು ಕೆಲಸ ಕಾರ್ಯಕ್ಕೆ ಓಡಾಟ ಮಾಡಲು, ಉದ್ಯೋಗಗಳಿಗೆ ತೆರಳಲು ಶಕ್ತಿಯೋಜನೆ ನೆರವಾಗಿದೆ. ರಜಾ ದಿನಗಳಲ್ಲಿ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದರಿಂದ ರಾಜ್ಯದ ದೇಗುಲಗಳ ಆದಾಯದಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ವಿ.ಚಂದ್ರು ಮಾತನಾಡಿ ‘ಶಕ್ತಿ ಯೋಜನೆಯಡಿ ಸ್ತ್ರೀಯರ ಸ್ವಾವಲಂಬನೆಯ ಕನಸು ನನಸಾಗಲು ನೆರವಾಗಿದೆ. ಯೋಜನೆಗೆ ಜಿಲ್ಲೆಯಲ್ಲೂ ಅಭೂತಪೂರ್ವ ಸ್ಪಂದನೆ ಸಿಕ್ಕಿದ್ದು ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಎಸ್‌ಪಿ ಬಿ.ಟಿ.ಕವಿತಾ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಶ್ರೀಕಂಠರಾಜೇ ಅರಸ್, ಚಾಮರಾಜನಗರ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷ ಸೋಮೇಶ್ವರ, ಸದಸ್ಯರಾದ ಭಾಗ್ಯಾ, ತಾಲ್ಲೂಕು ಸಮಿತಿಯ ಸದಸ್ಯರಾದ ಕುಮಾರ ಮಾದಾಪುರ, ಮರಿಯಾಲದಹುಂಡಿ ಕುಮಾರ್, ರಾಜೇಶ್, ಜಡೆಯಪ್ಪ, ಮಂಜುಳಾ, ಸಿದ್ದಿಕ್ ವುಲ್ಲಾ, ರಮೇಶ್, ಗಣೇಶ್ ಕುಮಾರ್, ಚಿನ್ನಸ್ವಾಮಿ ಇದ್ದರು.

ಸಂಭ್ರಮೋತ್ಸವದಲ್ಲಿ ಶಕ್ತಿ ಯೋಜನೆಯ ಭಿತ್ತಪತ್ರಗಳನ್ನು ಪ್ರದರ್ಶಿಸಲಾಯಿತು

ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮ ದೇವಾಲಯಗಳ ಆದಾಯ ಹೆಚ್ಚಳಕ್ಕೆ ‘ಶಕ್ತಿ’ ನೆರವು ಶಕ್ತಿಯಿಂದ ಮಹಿಳೆಯರ ಸಾರಿಗೆ ವೆಚ್ಚ ಉಳಿತಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.