ADVERTISEMENT

ಅಭಿವೃದ್ಧಿಗಾಗಿ ಕಾದಿದೆ ಶಂಕರೇಶ್ವರ ಬೆಟ್ಟ

ಚಾಮರಾಜನಗರ– ಸಂತೇಮರಹಳ್ಳಿ ಮಧ್ಯೆ ಇರುವ ಬೆಟ್ಟ, ಪ್ರವಾಸಿ ತಾಣವಾಗುವ ಅರ್ಹತೆ

ಮಹದೇವ್ ಹೆಗ್ಗವಾಡಿಪುರ
Published 3 ಅಕ್ಟೋಬರ್ 2021, 3:32 IST
Last Updated 3 ಅಕ್ಟೋಬರ್ 2021, 3:32 IST
ಬೆಟ್ಟದ ದೇವಾಲಯಕ್ಕೆ ತೆರಳುವ ಪ್ರವೇಶ ದ್ವಾರದ ನೋಟ
ಬೆಟ್ಟದ ದೇವಾಲಯಕ್ಕೆ ತೆರಳುವ ಪ್ರವೇಶ ದ್ವಾರದ ನೋಟ   

ಸಂತೇಮರಹಳ್ಳಿ:ಜಿಲ್ಲಾ ಕೇಂದ್ರ ಚಾಮರಾಜನಗರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂತೇಮರಹಳ್ಳಿ ಕಡೆಗೆ ಬರುವಾಗ ಮಾರ್ಗ ಮಧ್ಯೆ ಮಂಗಲ ಹಾಗೂ ಯಡಿಯೂರು ಗ್ರಾಮಗಳ ನಡುವೆ ಹಸಿರು ಗಿಡ ಮರಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಶಂಕರೇಶ್ವರ ಬೆಟ್ಟ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಸುತ್ತಲಿನ ಗಿಡ ಬಳ್ಳಿಗಳ ತಂಪಾದ ವಾತಾವರಣದಲ್ಲಿ ಬೆಟ್ಟ ಹತ್ತುವುದೇ ಆನಂದ. ಪ್ರತಿವರ್ಷ ಗೌರಿ-ಗಣೇಶ ಹಬ್ಬದ ತರುವಾಯ 5ನೇ ದಿನಕ್ಕೆ ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಇಂದಿಗೂ ಪ್ರತಿ ಸೋಮವಾರ ಹಾಗೂ ಶುಕ್ರವಾರ ವಿಶೇಷ ಪೂಜಾ ಕಾರ್ಯಕ್ರಮ ನಡೆಯುತ್ತದೆ. ಪ್ರತಿದಿನವೂ ಇಲ್ಲಿಗೆ ಭಕ್ತರು ಬರುತ್ತಾರೆ.

ಪ್ರವಾಸಿ ತಾಣವಾಗಿ ಗುರುತಿಸುವ ಎಲ್ಲ ಅರ್ಹತೆ ಹೊಂದಿರುವ ಈ ಬೆಟ್ಟವನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ಸುತ್ತಮುತ್ತಲಿನ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ.

ADVERTISEMENT

ಚಾಮರಾಜನಗರಕ್ಕೆ ತಿ.ನರಸೀಪುರದಿಂದ ಪೂರೈಕೆಯಾಗುವ ಕಾವೇರಿ ನೀರಿನ ಶುದ್ಧೀಕರಣ ಘಟಕ ಈ ಬೆಟ್ಟದ ತಪ್ಪಲಿನಲ್ಲಿದೆ. ಭಕ್ತಾದಿಗಳಿಗೆ ಕುಡಿಯುವ ನೀರಿಗೇನೂ ಇಲ್ಲಿ ತೊಂದರೆ ಇಲ್ಲ. ಆದರೆ, ಶುದ್ಧ ಕುಡಿಯುವ ನೀರು ಒದಗಿಸಿದರೇ ಅನುಕೂಲ ಎಂಬುದು ಭಕ್ತರ ಅಭಿಪ್ರಾಯ.

ಈ ಬೆಟ್ಟವು ಶತಮಾಗಳ ಹಿಂದೆ ರಾಜ ಮನೆತನಕ್ಕೆ ಒಳಪಟ್ಟಿತ್ತು ಎಂದು ಇತಿಹಾಸ ಹೇಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕುದೇರು ಸರ್ಕಾರಿ ಪದವಿ ಕಾಲೇಜಿನ ಇತಿಹಾಸ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಚಾರಣ ಹಮ್ಮಿಕೊಂಡಿದ್ದಾಗ ಹಲವು ಇತಿಹಾಸ ಗೋಚರವಾಗಿವೆ. ಶಾಸನವೊಂದು ವಿದ್ಯಾರ್ಥಿಗಳ ಕಣ್ಣಿಗೆ ಬಿದ್ದಿದೆ. ಇದರಲ್ಲಿ ಕನ್ನಡ ಅಕ್ಷರಗಳಲ್ಲಿ ಬರೆಯಲಾಗಿದೆ. ಇದು ಶಿಥಿಲಾವಸ್ಥೆ ತಲುಪಿರುವುದರಿಂದ ಬರವಣಿಗೆ ಅಸ್ಪಷ್ಟವಾಗಿ ಕಾಣುತ್ತಿದೆ. ಎರಡು ಬಂಡೆಗಳಲ್ಲಿ ಶಾಸನವನ್ನು ಕೆತ್ತಲಾಗಿದೆ. ಶಿವನ ನಂದಿ ಹಾಗೂ ಲಿಂಗದ ಚಿತ್ರಗಳು ಕಾಣುತ್ತವೆ. ಶಾಸನಗಳಲ್ಲಿ ಶಿವನ ಹೆಸರು ಹಾಗೂ ಬೆಟ್ಟದ ಹೆಸರು ಶಂಕರೇಶ್ವರ ಎಂದಿದೆ. ಹಾಗಾಗಿ, ಶಿವನ ಆರಾಧನೆ ಮಾಡುವ ಶೈವ ಪಂಥದವರು ಈ ಸ್ಥಳದಲ್ಲಿ ನೆಲೆಸಿದ್ದರು ಎಂದು ಊಹಿಸಲಾಗಿದೆ.

ಬೆಟ್ಟದ ಸುತ್ತಲೂ 15-20 ಗುಹೆಗಳು ಇವೆ. ಇವುಗಳಿಗೆ ಮೆಟ್ಟಿಲುಗಳ ವ್ಯವಸ್ಥೆ ಇದ್ದ ಕುರುಹುಗಳೂ ಇವೆ. ಹಿಂದೆ ರಾಜರ ಆಡಳಿತಕ್ಕೆ ಒಳಪಟ್ಟ ಈ ಶಂಕರೇಶ್ವರ ಬೆಟ್ಟವು ಒಂದು ಧಾರ್ಮಿಕ ಕೇಂದ್ರವಾಗಿತ್ತು ಎಂಬುದಕ್ಕೆ ಪುರಾವೆಗಳೂ ಇಲ್ಲಿ ಸಿಗುತ್ತವೆ.

ಬೆಟ್ಟದ ತುದಿಯಲ್ಲಿ ಗಣೇಶ, ವೀರಭದ್ರೇಶ್ವರ ಹಾಗೂ ಬಸವೇಶ್ವರ ದೇವಸ್ಥಾನಗಳಿವೆ. ಇಲ್ಲಿರುವ ಐತಿಹಾಸಿಕ ಶಾಸನ ಹಾಗೂ ಸ್ಮಾರಕಗಳನ್ನು ಪುರಾತತ್ವ ಇಲಾಖೆ ಅವರು ಸಂರಕ್ಷಿಸಿ ಐತಿಹಾಸಿಕ ಮಹತ್ವ ಹಾಗೂ ಇಲ್ಲಿನ ಆಚರಣೆಗಳನ್ನು ಬೆಳಕಿಗೆ ತರಬೇಕು. ಜತೆಗೆ ಪ್ರವಾಸೋಧ್ಯಮ ಇಲಾಖೆಯವರು ಧಾರ್ಮಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಮಂಗಲ ಹಾಗೂ ಯಡಿಯೂರು ಗ್ರಾಮಸ್ಥರ ಒತ್ತಾಯ.

‘ಈ ಬೆಟ್ಟ ಚಾರಣಕ್ಕೆ ಹೇಳಿ ಮಾಡಿಸಿದ ಹಾಗಿದೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಸ್ವಲ್ಪ ಅಭಿವೃದ್ಧಿ ಕೆಲಸ ಆಗಿದೆ. ಸಣ್ಣ ಉದ್ಯಾನ ಇದೆ. ಆದರೆ, ಅದು ಬಳಕೆಯಲ್ಲಿಲ್ಲ. ಇದನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಅವಕಾಶ ಇದೆ. ಆ ಕೆಲಸ ಆಗಬೇಕು’ ಎಂಬುದು ಊರಿನವರ ಅಭಿಪ್ರಾಯ.

‘ಧಾರ್ಮಿಕ ಪ್ರವಾಸಿ ಕೇಂದ್ರವಾಗಲಿ’
‘ಬೆಟ್ಟಕ್ಕೆ ಇಂದಿಗೂ ಸಾಕಷ್ಟು ಭಕ್ತರು ಹಾಗೂ ಪ್ರವಾಸಿಗರು ಬರುತ್ತಿದ್ದಾರೆ. ಆದರೆ, ಅವರ ಅನುಕೂಲಕ್ಕೆ ತಕ್ಕಂತೆ ಅಭಿವೃದ್ಧಿಯಾಗಿಲ್ಲ. ಮುಖ್ಯರಸ್ತೆಯಿಂದ ಬೆಟ್ಟಕ್ಕೆ ಬರುವ ರಸ್ತೆಯನ್ನು ಡಾಂಬರೀಕರಣಗೊಳಿಸಬೇಕು. ಬೆಟ್ಟಕ್ಕೆ ಭಕ್ತರು ಹತ್ತಲು ಮೆಟ್ಟಿಲುಗಳನ್ನು ಸಮರ್ಪಕವಾಗಿ ಕಟ್ಟಿಸಬೇಕು. ಸಾಕಷ್ಟು ಸ್ಥಳಾವಕಾಶ ಇರುವುದರಿಂದ ದೊಡ್ಡ ಉದ್ಯಾನ ನಿರ್ಮಿಸಬಹುದು. ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು. ಧಾರ್ಮಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸಿ ಆದಾಯ ಕೇಂದ್ರವನ್ನಾಗಿ ಮಾಡಬೇಕು ’ಎಂದು ಯಡಿಯೂರು ಗ್ರಾಮದ ಹಿರಿಯ ಶಿಕ್ಷಕ ವೈ.ಪಿ.ವಿಶ್ವ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.