ADVERTISEMENT

ಚಾಮರಾಜನಗರ: 'ಶರಣರ ತತ್ವಸಿದ್ಧಾಂತ ಬದುಕಿಗೆ ದಾರಿ ದೀಪ'

ಶರಣ ಸಾಹಿತ್ಯ ಪರಿಷತ್‌ನ ದತ್ತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 3:02 IST
Last Updated 2 ಡಿಸೆಂಬರ್ 2025, 3:02 IST
ಚಾಮರಾಜನಗರದ ಕರಿನಂಜನಪುರದಲ್ಲಿರುವ ಗುಬ್ಬಿ ತೋಟದಪ್ಪ ವಿದ್ಯಾರ್ಥಿನಿಯರ ನಿಲಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ರವಿಕುಮಾರ್ ಉದ್ಘಾಟಿಸಿದರು
ಚಾಮರಾಜನಗರದ ಕರಿನಂಜನಪುರದಲ್ಲಿರುವ ಗುಬ್ಬಿ ತೋಟದಪ್ಪ ವಿದ್ಯಾರ್ಥಿನಿಯರ ನಿಲಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ರವಿಕುಮಾರ್ ಉದ್ಘಾಟಿಸಿದರು   

ಚಾಮರಾಜನಗರ: ಶರಣ ತತ್ವ, ಸಿದ್ದಾಂತ ಹಾಗೂ ಅದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ರವಿಕುಮಾರ್ ತಿಳಿಸಿದರು.

ನಗರದ ಕರಿನಂಜನಪುರದಲ್ಲಿರುವ ಗುಬ್ಬಿ ತೋಟದಪ್ಪ ವಿದ್ಯಾರ್ಥಿನಿಯರ ನಿಲಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸುತ್ತೂರು ಕ್ಷೇತ್ರದ ಹಿರಿಯ ಶ್ರೀಗಳಾದ ರಾಜೇಂದ್ರ ಸ್ವಾಮೀಜಿ ಶರಣ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಿದರು.

ಶರಣರ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸಿ ಶರಣ ಪರಂಪರೆಯ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ರೂಪಿಸಿದರು. ಶ್ರೀಗಳ ಸ್ಥಾಪಿಸಿದ ಶರಣ ಸಾಃಇತ್ಯ ಪರಿಷತ್ ರಾಜ್ಯದಾದ್ಯಂತ ವಿಸ್ತರಣೆಗೊಂಡು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿದೆ.

ADVERTISEMENT

ಪರಿಷತ್‌ನಿಂದ ಸ್ಥಾಪಿಸಲಾಗಿರುವ ದತ್ತಿಗಳಿಂದ ಬರುವ ಆರ್ಥಿಕ ಸಂಪನ್ಮೂಲ ಬಳಸಿಕೊಂಡು ಉಪನ್ಯಾಸ, ಸಾಧಕರಿಗೆ ಸನ್ಮಾನಿಸುವ ಹಾಗೂ ಕಾರ್ಯಕ್ರಮ ಆಯೋಜಿಸುವ ಕೆಲಸ ನಿರಂತರವಾಗಿ ನಡೆಯುತ್ತಾ ಬಂದಿದೆ. ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ಸುಗಮವಾಗಿ ನಡೆಯುತ್ತಿವೆ ಎಂದರು.

ಗುಬ್ಬಿ ತೋಟದಪ್ಪ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಸ್ವಅನುಭವದಿಂದ ರಚಿಸಿರುವ ವಚನಗಳು ಬದುಕಿಗೆ ಅದರ್ಶವಾಗಿವೆ. ಪ್ರತಿದಿನ ವಚನಗಳನ್ನು ಓದಿ ಅರ್ಥೈಸಿಕೊಂಡರೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು. ವಿಚಾರ ಲಹರಿ ಗಟ್ಟಿತನವಾಗಲಿದೆ ಎಂದರು.

ಚಿಂತಕ ಎಂ.ಶ್ರೀಕಾಂತ್ ‘ಯುವ ಜನತೆ ಮತ್ತು ಸಂಸ್ಕೃತಿ’ ವಿಷಯದ ಕುರಿತು ಮಾತನಾಡಿ, ಬಸವಾದಿ ಶರಣರು ನಡೆದು ಬಂದ ಹಾದಿಯಲ್ಲಿ ಎಲ್ಲರೂ ಸಾಗಬೇಕಿದೆ. ಶರಣರ ವಚನಗಳು ಬದುಕಿನ ಪಾಠವಾಗಿದ್ದು ಪ್ರತಿಯೊಬ್ಬರೂ ವಚನಗಳ ಸಾರ ಅರಿತು ಜೀವನ ಸಾಗಿಸಬೇಕು. ವಿದ್ಯೆಯ ಜೊತೆಗೆ ಸಂಸ್ಕೃತಿ ರೂಡಿಸಿಕೊಳ್ಳಬೇಕು.

ಗುಬ್ಬಿ ತೋಟದಪ್ಪ ಟ್ರಸ್ಟ್‌ ಕಾರ್ಯದರ್ಶಿ ಆರ್.ಪುಟ್ಟಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿಗಳಾದ ಎಂ. ಚಿನ್ನಸ್ವಾಮಿ, ವಿಜಯಾ ಹಾಗೂ ಕುಟುಂಬ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಎಸ್.ಲಿಂಗರಾಜು, ಕೆಂಪನಪುರ ಕೆ.ಎಂ.ಮಹದೇವಸ್ವಾಮಿ, ಮೂಡ್ನಾಕೂಡು ನಿಂಗಪ್ಪ, ರಾಮಸಮುದ್ರ ಶಿವಕುಮಾರ ಸ್ವಾಮಿ, ಅರ್ಕಪ್ಪ, ಕೊತ್ತಲವಾಡಿ ಮಹದೇವಸ್ವಾಮಿ, ವಾರ್ಡನ್ ದಾಕ್ಷಾಯಿಣಿ ಹಾಗೂ ವಿದ್ಯಾರ್ಥಿಗಳು ಇದ್ದರು.

‘ಗುರು ಹಿರಿಯರು ಪೋಷಕರನ್ನು ಗೌರವಿಸಿ’ ‘ಭಾರತೀಯ ಸಂಸ್ಕೃತಿ, ಶರಣರ ಪರಂಪರೆ ಪಾಲಿಸಿ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.