ADVERTISEMENT

‘ಧಾರ್ಮಿಕ ಸಂವಿಧಾನ ವಿನಾಶಕ್ಕೆ ಆಹ್ವಾನ’

ಸರ್ವರಿಗೂ ಸಮಾನತೆ, ಸಮಾನ ಅವಕಾಶ, ಕಾನೂನು ನೀಡಿರುವ ದೇಶದ ಸಂವಿಧಾನ; ತಜ್ಞ ವಿರೂಪಾಕ್ಷ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 2:21 IST
Last Updated 24 ಜನವರಿ 2026, 2:21 IST
ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಸಹಯೋಗದಲ್ಲಿ ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ‘ನಮ್ಮ ಸಂವಿಧಾನ ಒಂದು ಅವಲೋಕನ’ ವಿಷಯದ ಕುರಿತು ವಕೀಲ ವಿರೂಪಾಕ್ಷ ಮಾತನಾಡಿದರು
ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಸಹಯೋಗದಲ್ಲಿ ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ‘ನಮ್ಮ ಸಂವಿಧಾನ ಒಂದು ಅವಲೋಕನ’ ವಿಷಯದ ಕುರಿತು ವಕೀಲ ವಿರೂಪಾಕ್ಷ ಮಾತನಾಡಿದರು   

ಚಾಮರಾಜನಗರ: ‘ಧಾರ್ಮಿಕ ಸಂವಿಧಾನ ಅಳವಡಿಸಿಕೊಂಡಿರುವ ವಿಶ್ವದ ಹಲವು ರಾಷ್ಟ್ರಗಳು ಆರ್ಥಿಕ ಹಾಗೂ ಸಾಮಾಜಿಕವಾಗಿ ವಿನಾಶದ ಅಂಚು ತಲುಪಿರುವುದು ಸಂವಿಧಾನ ಬದಲಾಯಿಸಲು ಹೊರಟಿರುವ ಧಾರ್ಮಿಕ ಮೂಲಭೂತವಾದಿಗಳಿಗೆ ಎಚ್ಚರಿಕೆಯ ಗಂಟೆ’ ಎಂದು  ವಕೀಲ ವಿರೂಪಾಕ್ಷ ಅಭಿಪ್ರಾಯಪಟ್ಟರು.

ಚಕೋರ ಸಾಹಿತ್ಯ ವಿಚಾರ ವೇದಿಕೆ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಸಹಯೋಗದಲ್ಲಿ ಶುಕ್ರವಾರ ಇಲ್ಲಿ ಹಮ್ಮಿಕೊಂಡಿದ್ದ ‘ನಮ್ಮ ಸಂವಿಧಾನ ಒಂದು ಅವಲೋಕನ’ ವಿಷಯದಲ್ಲಿ ಅವರು ಮಾತನಾಡಿದರು.

 ಧರ್ಮ ನಿರಪೇಕ್ಷತೆ ಹಾಗೂ ಜಾತ್ಯತೀತತೆಯನ್ನು ಸಂವಿಧಾನದಲ್ಲಿ ಅಳವಡಿಸಿಕೊಂಡಿರುವ ದೇಶಗಳು ಜಗತ್ತಿನಲ್ಲಿ ಮೇಲುಗೈ ಸಾಧಿಸಿವೆ. ಧರ್ಮವನ್ನೇ ಸಂವಿಧಾನವಾಗಿಸಿಕೊಂಡ ರಾಷ್ಟ್ರಗಳು ನಾಶದ ಹಾದಿ ಹಿಡಿದಿವೆ. ಭಾರತವು ಸಾರ್ವಭೌಮ, ಸಮಾಜವಾದಿ, ಧರ್ಮ ನಿರಪೇಕ್ಷ ಹಾಗೂ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಸಂವಿಧಾನದ ಪೀಠಿಕೆಯ ಆರಂಭದಲ್ಲೇ ಸ್ಪಷ್ಟವಾಗಿ ಹೇಳಲಾಗಿದೆ. ಧರ್ಮದ ತಳಹದಿಯ ಮೇಲೆ ಸಂವಿಧಾನ ರಚನೆಯಾಗಿಲ್ಲ. ಬದಲಾಗಿ ಸಮಾನತೆ, ಸಮಾಜವಾದ, ಜಾತ್ಯತೀತೆಯ ಅಂಶಗಳನ್ನು ಒಳಗೊಂಡಿದೆ ಎಂದರು.

ADVERTISEMENT

ಸಂವಿಧಾನ ನೀಡಿರುವ ಪ್ರಮುಖ ಹಕ್ಕುಗಳಲ್ಲಿ ಒಂದಾಗಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದ್ದು, ಬೇರೆಧರ್ಮಗಳನ್ನು ದೂಷಿಸುವ, ದ್ವೇಷಿಸುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಹಾಗೆಯೇ ಸಂಸ್ಕೃತಿಯನ್ನು ಧರ್ಮದೊಂದಿಗೆ ಜೋಡಿಸುವ ಮೂಲಕ ಅನರ್ಥಗಳಿಗೆ ಎಡೆಮಾಡಿಕೊಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

‘ಧರ್ಮ ಹಾಗೂ ಸಂಸ್ಕೃತಿ ಬೇರೆಯಾಗಿದ್ದು ಜನರು ಬದುಕುವ ರೀತಿ ರಿವಾಜುಗಳು ಸಂಸ್ಕೃತಿಯಾಗಿದೆ. ಉಡುಗೆ ತೊಡುಗೆ, ಊಟೋಪಚಾರ, ಆಚರಣೆಗಳು ಸಂಸ್ಕೃತಿಯ ಬಹುಮುಖ್ಯ ಭಾಗಗಳಾಗಿದ್ದು, ಧರ್ಮದ ಲೇಪನ ಕೊಡುವುದು ಸಲ್ಲದು. ಇಂದಿಗೂ ಗ್ರಾಮೀಣ ಭಾಗಗಳಲ್ಲಿ ನಡೆಯುವ ಉತ್ಸವಗಳು, ಆಚರಣೆಗಳು ಸಂಸ್ಕೃತಿಯ ಬೇರುಗಳಾಗಿವೆ’ ಎಂದು ವಿರೂಪಾಕ್ಷ ಹೇಳಿದರು.

 ರಂಗಕರ್ಮಿ ಕೆ.ವೆಂಕಟರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.  ವೇದಿಕೆಯ ಸದಸ್ಯ ಸಂಚಾಲಕ ಪ್ರಕಾಶ್ ರಾಜ್ ಮೇಹು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎನ್‌.ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್, ಹಿರಿಯ ಪತ್ರಕರ್ತ ಅಬ್ರಾಹಂ ಡಿ’ಸಿಲ್ವ ಇದ್ದರು.

‘ಬದಲಾವಣೆ ಅಗತ್ಯವಿಲ್ಲ’

ಸಂವಿಧಾನ ಬದಲಾವಣೆಯಾಗಬೇಕು ಧರ್ಮಾಧರಿತ ಸಂವಿಧಾನ ಜಾರಿಯಾಗಬೇಕು ಎಂದು ಕೆಲವರು ವಾದಿಸುತ್ತಾರೆ. ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆ ಭದ್ರತೆ ಕಡ್ಡಾಯ ಶಿಕ್ಷಣ ಆರೋಗ್ಯ ವ್ಯಕ್ತಿ ಗೌರವ ಕಾನೂನುಗಳ ರಕ್ಷಣೆ ಹಾಗೂ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ. ಸಂವಿಧಾನ ಬದಲಾವಣೆಗೆ ಒಂದೆರಡು ಕಾರಣ ನೀಡಬಹುದಷ್ಟೆ ಸಂವಿಧಾನ ಉಳಿವಿಗೆ ಸಾವಿರ ಕಾರಣಗಳನ್ನು ನೀಡಬಹುದು’ ಎಂದು ವಿರೂಪಾಕ್ಷ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.