
ಗುಂಡ್ಲುಪೇಟೆ: ‘ಚೆಕ್ ಡ್ಯಾಂ ನಿರ್ಮಾಣದ ಮೂಲಕ ಮಣ್ಣಿನ ಸವಕಳಿ ತಡೆಯಬೇಕು’ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಹೇಳಿದರು.
ತಾಲ್ಲೂಕಿನ ಭೀಮನಬೀಡು ಗ್ರಾಮದ ಕಾಡು ಬಸವೇಶ್ವರ ದೇವಾಲಯ ಆವರಣದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಯ್ ಯೋಜನೆ, ಜಲಾನಯನ ಘಟಕದಿಂದ ನಡೆದ ಜಲಾನಯನೋತ್ಸವ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
‘ಮಣ್ಣು ಮತ್ತು ನೀರಿನ ಸಂರಕ್ಷಣೆ ಅವಶ್ಯ. ಇವು ನಮ್ಮ ಭವಿಷ್ಯ ನಿರ್ಧರಿಸುತ್ತವೆ. ಹೀಗಾಗಿ ಪ್ರತಿಯೊಬ್ಬರು ಕಾಳಜಿ ವಹಿಸಬೇಕು’ ಎಂದು ತಿಳಿಸಿದರು.
ಕೂತನೂರು, ಕಣ್ಣೇಗಾಲ ಮತ್ತು ಭೀಮನಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಕೇರಳದ ಗಡಿಯಲ್ಲಿರುವ ಕಾರಣ ಸಹಜವಾಗಿ ಇಲ್ಲಿ ಹೆಚ್ಚಾಗಿ ಮಳೆ ಆಗುತ್ತದೆ. ಆದ್ದರಿಂದ ಮಳೆ ನೀರಿನ ಸಂರಕ್ಷಣೆಗೆ ಜಲಾನಯನ ಯೋಜನೆಯನ್ನು ಪ್ರಯೋಜನಕಾರಿಯಾಗಿ ಬಳಸಿಕೊಳ್ಳಬೇಕು. ಮಣ್ಣು ಮತ್ತು ನೀರು ಪ್ರಕೃತಿಯ ಕೊಡುಗೆ. ಹೀಗಾಗಿ ಬದುಗಳ ನಿರ್ಮಾಣ ಮಾಡಿ ಗಿಡ ನೆಡಬೇಕು. ಹೆಚ್ಚಿನ ರೀತಿಯಲ್ಲಿ ಮಳೆನೀರು ಸಂಗ್ರಹ ಮಾಡುವ ಮೂಲಕ ಉಪಯೋಗ ಪಡೆದುಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ತಾಲ್ಲೂಕು ಬರಪೀಡಿತ ಪ್ರದೇಶವಾದ ಕಾರಣ 2012ರಿಂದ ಹಂತ ಹಂತವಾಗಿ ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆಗುತ್ತಿದೆ. ಮಾನವ ನಿರ್ಮಿತವಾದ ಕಾರಣ ಯಂತ್ರಗಳು ಕೆಟ್ಟು ಹೋಗುವುದು ಸಾಮಾನ್ಯವಾಗಿರುತ್ತದೆ. ಈ ಕಾರಣ ವಿಳಂಬವಾಗಿರುವುದರ ಹೊರತು ಕೆರೆಗಳಿಗೆ ನೀರು ತುಂಬಿಸುವ ವಿಷಯದಲ್ಲಿ ಸಮಾಧಾನವಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಲಾನಯನ ಯೋಜನೆಗೆ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ಯೋಜನೆಯಡಿ ₹1.50 ಕೋಟಿ ನೆರವು ನೀಡಿದ ಐಸಿಐಸಿಐ ಬ್ಯಾಂಕ್‌ನವರನ್ನು ಅಭಿನಂದಿಸಲಾಯಿತು. 6 ಮಂದಿ ಜಲಾನಯನ ವಾರಿಯರ್ಸ್ ಅವರನ್ನು ಸನ್ಮಾನಿಸಲಾಯಿತು. ೀ ಜಲಾನಯನ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಷ್ಮಾ, ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪಂಪನಗೌಡ ತಾಂತ್ರಿಕ ಮಾಹಿತಿ ನೀಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್, ಎಪಿಎಂಸಿ ಅಧ್ಯಕ್ಷ ರಂಗೂಪುರ ನಾಗರಾಜು, ನಿರ್ದೇಶಕ ಅರಸಶೆಟ್ಟಿ, ಕೂತನೂರು ಮತ್ತು ಕಣ್ಣೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹದೇವಮ್ಮ, ಮಂಗಳಮ್ಮ, ಸದಸ್ಯರಾದ ಸ್ವಾಮಿ, ಸಿದ್ದಶೆಟ್ಟಿ, ಲೋಕೇಶ್, ಚಿಕ್ಕೂಸಯ್ಯ, ತಾಲ್ಲೂಕು ಭೂ ನ್ಯಾಯ ಮಂಡಳಿ ಸದಸ್ಯ ಜಿ.ಕೆ.ಲೋಕೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.