ADVERTISEMENT

ಮನೆಗಳಲ್ಲಿ ಉಪವಾಸ, ಮುಚ್ಚಿದ ದೇವಸ್ಥಾನಗಳು

ಗ್ರಹಣ: ಮನೆ, ಊರಿಗೆ ಕೇಡು ಬಾರದಿರಲು ಒನಕೆಯಿಂದ ರಕ್ಷಣೆ ಪಡೆದ ಜನ, ಮನೆ ಬಾಗಿಲಲ್ಲಿ ಕಬ್ಬಿಣ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 10:22 IST
Last Updated 27 ಡಿಸೆಂಬರ್ 2019, 10:22 IST
ಸೂರ್ಯ ಗ್ರಹಣದ ಅಂಗವಾಗಿ ಚಾಮರಾಜೇಶ್ವರ ದೇವಾಲಯವನ್ನು ಮುಚ್ಚಲಾಗಿತ್ತು
ಸೂರ್ಯ ಗ್ರಹಣದ ಅಂಗವಾಗಿ ಚಾಮರಾಜೇಶ್ವರ ದೇವಾಲಯವನ್ನು ಮುಚ್ಚಲಾಗಿತ್ತು   

ಚಾಮರಾಜನಗರ/ಕೊಳ್ಳೇಗಾಲ: ಕಂಕಣ ಸೂರ್ಯಗ್ರಹಣ ಆರಂಭವಾಗುತ್ತಲೇ ಜಿಲ್ಲೆಯ ಬಹುತೇಕ ದೇವಾಲಯಗಳು ಮುಚ್ಚಿದವು. ಪೂಜೆ ಪುನಸ್ಕಾರಗಳು ನಡೆಯಲಿಲ್ಲ.

ಗ್ರಹಣ ಮೋಕ್ಷವಾದ ನಂತರವಷ್ಟೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ಆದರೆ, ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳವಾದ ಮಹದೇಶ್ವರ ಬೆಟ್ಟದಲ್ಲಿ ಎಂದಿನಂತೆ ಪೂಜೆಗಳು ನಡೆದವು. ಭಕ್ತರು ಎಂದಿನಂತೆ ಮಾದಪ್ಪನ ದರ್ಶನ ಪಡೆದರು. ಆದರೆ, ಭಕ್ತಾದಿಗಳ ಸಂಖ್ಯೆ ಮಾತ್ರ ಕಡಿಮೆ ಇತ್ತು.

ಜಿಲ್ಲಾ ಕೇಂದ್ರ ಚಾಮರಾಜನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ದೇವಾಲಯ ಮುಚ್ಚಿತ್ತು. ಇತರೆ ದೇವಾಲಯಗಳಲ್ಲೂ ಪೂಜೆ‌ಪುನಸ್ಕಾರ ನಡೆಯಲಿಲ್ಲ.ಬಿಳಿಗಿರಿರಂಗನ ಬೆಟ್ಟದ ದೇವಾಲಯ, ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲೂ ಪೂಜೆ ನಡೆಯಲಿಲ್ಲ.

ADVERTISEMENT

ಕೊಳ್ಳೇಗಾಲತಾಲ್ಲೂಕಿನ ಮರಳೇಶ್ವರ ಸ್ವಾಮಿ ಸನ್ನಿಧಿ, ಕನ್ನಿಕಾಪರಮೇಶ್ವರಿ, ನಾರಾಯಣಸ್ವಾಮಿ, ಆಂಜನೇಯ ದೇವಾಲಯ, ಸುಬ್ರಹ್ಮಣೇಶ್ವರ ವರಸಿದ್ಧಿವಿನಾಯಕ ಸೇರಿದಂತೆ ವಿವಿಧ ದೇವಾಲಯಗಳು ಮುಚ್ಚಿದ್ದವು.

ಮನೆಗಳಲ್ಲಿ ಅಡುಗೆ ಬಂದ್‌: ಬಹುತೇಕ ಹಿಂದೂಗಳ ಮನೆಗಳಲ್ಲಿ ಗ್ರಹಣ ಸಮಯದಲ್ಲಿ ಆಹಾರ ಸೇವಿಸುವುದಕ್ಕೆ ನಿರ್ಬಂಧ ಹೇರಲಾಗಿತ್ತು. ಬೆಳಗಿನ ಉಪಾಹಾರವನ್ನು ಎಂಟು ಗಂಟೆಯ ಮೊದಲೇ ಪೂರೈಸಿದ್ದರು. ಗ್ರಹಣ ಬಿಟ್ಟ ನಂತರ ಸ್ನಾನ ಮಾಡಿ, ಹೊಸದಾಗಿ ಅಡುಗೆ ಸಿದ್ಧಪಡಿಸಿ ಆಹಾರ ಸೇವಿಸಿದರು. ಮಹಿಳೆಯರು ಹಾಗೂ ವೃದ್ಧರು ಗ್ರಹಣದ ಸಂದರ್ಭದಲ್ಲಿ ದೇವರನಾಮ ಸ್ಮರಣೆ ಮಾಡಿದರೆ, ಪುರುಷರು ಟಿವಿ ನೋಡುತ್ತಾ ಕಾಲ ಕಳೆದರು.ಗರ್ಭಿಣಿಯರು, ಮಕ್ಕಳು, ವೃದ್ಧರು ಮನೆಯಿಂದ ಹೊರಗಡೆ ಬರಲಿಲ್ಲ.

ನೀರು ತುಂಬಿಸಲು ಹಿಂದೇಟು: ಗ್ರಹಣದ ಸಮಯದಲ್ಲಿ ಬಡಾವಣೆಗಳ ನಲ್ಲಿ ನೀರು ಬರುತ್ತಿದ್ದರೂ, ನಿವಾಸಿಗಳು ತುಂಬಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು!

ಒನಕೆ, ಕಬ್ಬಿಣಕ್ಕೆ ಮೊರೆ

ಕಂಕಣ ಸೂರ್ಯಗ್ರಹಣದ ಅಂಗವಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನರು ವಿಶಿಷ್ಟ ಆಚರಣೆ ನಡೆಸಿದ್ದಾರೆ.

ಗ್ರಹಣದಿಂದ ಮನೆ, ಊರಿಗೆ ಕೇಡು ಉಂಟಾಗುತ್ತದೆ ಎಂಬ ನಂಬಿಕೆ ಜನರಲ್ಲಿದ್ದು, ಇದರಿಂದ ರಕ್ಷಣೆ ಪಡೆಯಲು ಒನಕೆ, ಕಬ್ಬಿಣದ ವಸ್ತುಗಳ ಮೊರೆ ಹೋದರು.

ಚಾಮರಾಜನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನರು ನೆಲದ ಮೇಲೆ ತಾಮ್ರದ/ಸ್ಟೀಲ್‌ ತಟ್ಟೆ ಇಟ್ಟು ಅದರಲ್ಲಿ ನೀರು ತುಂಬಿಸಿ, ಅರಿಸಿನ ಪುಡಿ ಹಾಕಿ ಒನಕೆಯನ್ನು ನೆಟ್ಟಗೆ ನಿಲ್ಲಿಸಿದ್ದರು. ಒನಕೆಗೆ ಪೂಜೆಯನ್ನೂ ಮಾಡಲಾಗಿತ್ತು.

ಒನಕೆಯನ್ನು ನಿಲ್ಲಿಸಿದರೆ ಗ್ರಹಣ ಸಂದರ್ಭದಲ್ಲಿ ಮನೆ, ಊರಿಗೆ ಯಾವುದೇ ಕೇಡು ಉಂಟಾಗುವುದಿಲ್ಲ ಎಂಬುದು ಜನರ ನಂಬಿಕೆ. ಇದರ ಜೊತೆಗೆ ಗ್ರಹಣ ಆರಂಭ ಹಾಗೂ ಅಂತ್ಯವಾಗುವ ಸಮಯವನ್ನು ನಿರ್ಧರಿಸುತ್ತಾರೆ. ನೆಟ್ಟಗೆ ನಿಂತಿರುವ ಒನಕೆ ನೆಲಕ್ಕೆ ಬಿದ್ದಾಗ ಗ್ರಹಣ ಮುಕ್ತಾಯವಾಯಿತು ಎಂದು ಜನರು ನಂಬುತ್ತಾರೆ.

ಕೊಳ್ಳೇಗಾಲ ತಾಲ್ಲೂಕಿನ ಉಗನೀಯ ಗ್ರಾಮದ ಮೂರು ಬಡಾವಣೆಗಳಲ್ಲಿ ಒನಕೆಯನ್ನು ನಿಲ್ಲಿಸಲಾಗಿತ್ತು. ಗ್ರಾಮದ ಹಿರಿಯ ರಾಚೇಗೌಡ ಅವರ ಮನೆ ಮುಂದೆ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಒನಕೆಯನ್ನು ಇಡಲಾಗಿತ್ತು. ಸರಿಯಾಗಿ 11.05ರ ಹೊತ್ತಿಗೆ ಅದು ಬಿದ್ದು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿತು.ಅದೇ ರೀತಿ ಮಹೇಂದ್ರ ಎಂಬುವವರ ಮನೆ ಎದುರು ಇಟ್ಟಿದ್ದ ಒನಕೆ 11.15ಕ್ಕೆ ಕೆಳಗೆ ಬಿತ್ತು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರಾಚೇಗೌಡ ಅವರು, ‘ನಮ್ಮ ಪೂರ್ವಿಕರ ಕಾಲದಿಂದಲ್ಲೂ ಸಹ ಈ ಪದ್ಧತಿಯನ್ನು ಅನುಸರಿಸುತ್ತಾ ಬಂದಿದ್ದೇವೆ. ಸೂರ್ಯಗ್ರಹಣದಿಂದ ಕಡುಕಾಗಬಾರದು ಎಂಬ ಕಾರಣಕ್ಕೆ ಗ್ರಾಮದಲ್ಲಿ ಬೆಳಿಗ್ಗೆಯಿಂದ ಯಾರೂ ಊಟ, ತಿಂಡಿ, ನೀರನ್ನು ಸೇವನೆ ಮಾಡಿಲ್ಲ. ಗ್ರಹಣ ಮುಗಿದ ನಂತರ ಮನೆಯನ್ನು ಸ್ವಚ್ಛ ಮಾಡಿ, ಸ್ನಾನ ಮಾಡಿ ನಂತರ ಆಹಾರ ಸೇವಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.