ಕೊಳ್ಳೇಗಾಲ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 621 ಅಂಕಗಳಿಸುವ ಮೂಲಕ ಚಾಮರಾಜನಗರಕ್ಕೆ ಮೊದಲ ಸ್ಥಾನ ಪಡೆದ ಮಗಳು ಮೇಘನಾ ಎಂ. ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದಿವ್ಯಾ ಸಾರಾ ಥಾಮಸ್ ಅವರು ಚಿನ್ನದ ಉಂಗುರ ಉಡುಗೊರೆ ನೀಡಿ ಅಭಿನಂದಿಸಿದ್ದಾರೆ.
ನಗರದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಮೇಘನಾ ಅವರ ತಂದೆ ಮಹೇಶ್ ಅವರು ಕೊಳ್ಳೇಗಾಲದಲ್ಲಿ ಪೊಲೀಸ್ ಇಲಾಖೆಯ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೇಘನಾ ಮಾಡಿರುವ ಸಾಧನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಸೋಮವಾರ ರಾತ್ರಿ ಇತರ ಅಧಿಕಾರಿಗಳೊಂದಿಗೆ ಆಕೆಯ ಮನೆಗೆ ಹೋದ ದಿವ್ಯಾ ಅವರು, ಸಾಧಕಿಗೆ ಶಾಲು ಹೊದೆಸಿ, ಸಿಹಿ ನೀಡಿ ಸನ್ಮಾನಿಸಿದರು.
‘ನಮ್ಮ ಇಲಾಖೆಯ ಸಿಬ್ಬಂದಿಯ ಮಗಳಾಗಿ ಇಡೀ ಇಡೀ ಇಲಾಖೆಗೆ ಹೆಮ್ಮೆ ತಂದಿದ್ದೀಯಾ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ದಿವ್ಯಾ ಅವರು, ನಾಲ್ಕು ಗ್ರಾಂ ತೂಕದ ಚಿನ್ನದ ಉಂಗುರವನ್ನು ಉಡುಗೊರೆ ನೀಡಿ ಪ್ರೋತ್ಸಾಹದ ಮಾತುಗಳನ್ನಾಡಿದರು ಎಂದು ಮೇಘನಾ ಪೋಷಕರು ಹೇಳಿದರು.
'ಉತ್ತಮ ಶಿಕ್ಷಣ ಪಡೆದು ಉನ್ನತ ಅಧಿಕಾರಿಯಾಗಬೇಕು. ವಿದ್ಯಾಭ್ಯಾಸಕ್ಕೆ ಸಹಾಯ ಬೇಕಿದ್ದರೆ ಕೇಳು' ಎಂದು ಎಸ್‌ಪಿ ಅವರು ಮೇಘನಾಗೆ ತಿಳಿಸಿದರು.
ಪ್ರತಿಕ್ರಿಯೆ ಪಡೆಯಲು ದಿವ್ಯಾ ಅವರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.
ವಿದ್ಯಾರ್ಥಿನಿಯ ಸಾಧನೆ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯ ಫೇಸ್‌ಬುಕ್ ಪುಟದಲ್ಲೂ ಅಭಿನಂದನೆ ಸಲ್ಲಿಸಿರುವ ಎಸ್‌ಪಿ ಅವರು, 'ಮೇಘನಾ ಸಾಧನೆ ನಮಗೆ ಹೆಮ್ಮೆ ತಂದಿದೆ' ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ನವೀನ್ ಕುಮಾರ್, ಸಿಪಿಐ ಶ್ರೀಕಾಂತ್, ಪಿಎಸ್ಐ ರಾಜೇಂದ್ರ, ಅಶೋಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.