ADVERTISEMENT

ಕೋವಿಡ್‌ ಲಸಿಕಾ ಮೇಳ: ಗುರಿ ಮೀರಿದ ಸಾಧನೆ

ಒಂದೇ ದಿನ ದಾಖಲೆಯ 20,571ಕ್ಕೂ ಹೆಚ್ಚು ಮಂದಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 16:23 IST
Last Updated 21 ಜೂನ್ 2021, 16:23 IST
ಯೋಗ ದಿನದ ಅಂಗವಾಗಿ ಸೋಮವಾರ ನಡೆದ ಕೋವಿಡ್‌ ಲಸಿಕಾ ಮೇಳದಲ್ಲಿ ಲಸಿಕೆ ಪಡೆಯಲು ಚಾಮರಾಜನಗರದ ಕೇಂದ್ರವೊಂದರಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯರು
ಯೋಗ ದಿನದ ಅಂಗವಾಗಿ ಸೋಮವಾರ ನಡೆದ ಕೋವಿಡ್‌ ಲಸಿಕಾ ಮೇಳದಲ್ಲಿ ಲಸಿಕೆ ಪಡೆಯಲು ಚಾಮರಾಜನಗರದ ಕೇಂದ್ರವೊಂದರಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯರು   

ಚಾಮರಾಜನಗರ: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜಿಲ್ಲೆಯಾದ್ಯಂತ ಸೋಮವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕೋವಿಡ್‌ ಲಸಿಕಾ ಮೇಳ ಯಶಸ್ವಿಯಾಗಿದ್ದು, 20 ಸಾವಿರ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಜಿಲ್ಲಾಡಳಿತ ಮೀರಿದೆ.

ರಾತ್ರಿ 10 ಗಂಟೆಯವರೆಗೆ ಲಭ್ಯವಾದ ಮಾಹಿತಿ ಪ್ರಕಾರ, 20,571 ಮಂದಿಗೆ ಲಸಿಕೆ ಹಾಕಲಾಗಿದೆ.

18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಆದ್ಯತಾ ವಲಯದವರು ಹಾಗೂ 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲರಿಗೂ ಲಸಿಕೆ ಹಾಕಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಪುರುಷರು, ಮಹಿಳೆಯರು ಲಸಿಕೆ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಲಸಿಕೆ ಹಾಕಿಸಿಕೊಂಡರು.

ADVERTISEMENT

ಚಾಮರಾಜನಗರ ಜಿಲ್ಲಾ ಆಸ್ಪತ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರದ ಉಪ್ಪಾರ ಬೀದಿಯ ಸರ್ಕಾರಿ ಶಾಲೆ, ಪೇಟೆ ಪ್ರೈಮರಿ ಶಾಲೆ ಹಾಗೂಕೊಳ್ಳೇಗಾಲದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಕೊಳ್ಳೇಗಾಲ ಪಟ್ಟಣದ ನಗರ ಆರೋಗ್ಯ ಕೇಂದ್ರ, ವಾಸವಿ ಮಹಲ್,ಗುಂಡ್ಲುಪೇಟೆ, ಯಳಂದೂರು ತಾಲ್ಲೂಕು ಆಸ್ಪತ್ರೆಗಳು ಸೇರಿದಂತೆ ಜಿಲ್ಲೆಯ ಎಲ್ಲ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿತ್ತು.

ಚಾಮರಾಜನಗರ ತಾಲ್ಲೂಕಿನಲ್ಲಿ 6,000, ಗುಂಡ್ಲುಪೇಟೆತಾಲ್ಲೂಕಿನಲ್ಲಿ 5,000, ಕೊಳ್ಳೇಗಾಲ ತಾಲ್ಲೂಕಿನಲ್ಲಿ 4,000, ಹನೂರು ತಾಲ್ಲೂಕಿನಲ್ಲಿ 3,000 ಮತ್ತು ಯಳಂದೂರು ತಾಲ್ಲೂಕಿನಲ್ಲಿ 2,000 ಜನರಿಗೆ ಲಸಿಕೆ ನೀಡುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿತ್ತು.

‘ಕೋವಿಡ್‌ ಲಸಿಕಾ ಮೇಳ ಯಶಸ್ವಿಯಾಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಜನರು ಲಸಿಕೆ ಪಡೆಯಲು ಸ್ವಯಂ ಪ್ರೇರಿತರಾಗಿ ಬಂದಿದ್ದಾರೆ’ ಎಂದು ಆರ್‌ಸಿಎಚ್‌ ಅಧಿಕಾರಿ ಡಾ.ವಿಶ್ವೇಶ್ವರಯ್ಯ ಅವರು ಹೇಳಿದರು.

ಶಾಸಕರಿಂದ ಚಾಲನೆ:ನಗರದ ಉಪ್ಪಾರ ಬಡಾವಣೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಲಸಿಕಾ ಮೇಳಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಯೋಗ ದಿನದ ಪ್ರಯುಕ್ತ ಇಂದು ವಿಶೇಷವಾಗಿ ಲಸಿಕಾ ಮೇಳ ಆಯೋಜಿಸಲಾಗಿದೆ. ಲಸಿಕಾ ಕಾರ್ಯಕ್ರಮಕ್ಕೆ ಉತ್ತಮ ಆರಂಭ ದೊರಕಿದ್ದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದಿರುವುದು ಸಂತಸ ತಂದಿದೆ’ ಎಂದರು.

ಜನರಲ್ಲಿ ಈ ಹಿಂದೆ ಲಸಿಕೆ ಬಗ್ಗೆ ಗೊಂದಲ, ತಪ್ಪು ಕಲ್ಪನೆ ಮನೆ ಮಾಡಿತ್ತು. ಆದರೆ ಇಂದು ಲಸಿಕೆ ಮಹತ್ವ ತಿಳಿದು ಜನರು ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯುತ್ತಿದ್ದಾರೆ. ಕಾಡಂಚಿನ ಪ್ರದೇಶದಲ್ಲಿ ವಾಸಿಸುವ ಜನರ ಮನವೊಲಿಸಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ ಲಸಿಕೆ ನೀಡಲಾಗುತ್ತಿದೆ. ಈ ಕೇಂದ್ರಗಳು ಒಂದೇ ದಿನಕ್ಕೆ ಸೀಮಿತವಾಗಿರದೆ ವಾರ್ಡ್‌ಗಳಲ್ಲಿಯೂ ಲಸಿಕೆ ಅಭಿಯಾನವು ಮುಂದುವರೆಯಬೇಕು’ ಎಂದರು.

ನಗರಸಭಾ ಅಧ್ಯಕ್ಷೆ ಆಶಾ ನಟರಾಜು, ನಗರಸಭಾ ಸದಸ್ಯರಾದ ಬಸವಣ್ಣ, ಚಂದ್ರಕಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ ರವಿ, ಆರ್ಸಿಎಚ್ ಅಧಿಕಾರಿ ಡಾ.ವಿಶ್ವೇಶ್ವರಯ್ಯ, ಆಯಕ್ತರಾದ ಕರಿಬಸವಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.