ಯಳಂದೂರು: ‘ಮಲೆಯ ಮಹಾದೇವ ಮಹಾನುಭಾವ ನಾನರಿಯೇ ನಿನ್ನ ಮಾಯ’ ಎಂಬ ಹಾಡು ಈ ಭಾಗದ ಊರು ಕೇರಿಗಳಲ್ಲಿ ಜನಜನಿತ. ಸಾಂಸ್ಕೃತಿಕ ನೆಲೆಯಲ್ಲಿ ಆಳವಾಗಿ ಬೇರೂರಿರುವ ಕಥಾ ನಿರೂಪಣೆಯ ಪುರಾತನ ಮತ್ತು ಗೌರವಾನ್ವಿತ ಭಾವ ಈ ಹಾಡಿನಲ್ಲಿ ಹಾಸುಹೊಕ್ಕಿದೆ. ಇದು ಹರಿಕಥೆ ಹೆಸರಿನಲ್ಲಿ ಕಲಾವಿದರು ಈ ಭಾಗದ ಮಹದೇಶ್ವರ ಮತ್ತು ಮಂಟೇಸ್ವಾಮಿ, ಸಿದ್ದಪ್ಪಾಜಿ ವ್ಯಕ್ತಿತ್ವಗಳ ರೂಪಕವಾಗಿ ಇಂತಹ ನೂರೆಂಟು ಕಥಾ ಪ್ರಕಾರಗಳು ಉದಯಿಸಿದ್ದು ಜನ ಜೀವನದ ಭಾವ ಕೋಶದಲ್ಲಿ ಸೇರಿಕೊಂಡಿವೆ. ಇಂತಹ ಹರಿಕಥಾ ಪ್ರಕಾರವನ್ನು ಜನಪದ ಸಂಗೀತ ಮಾರ್ಗದಲ್ಲಿ ಜನರ ಮನ ಮುಟ್ಟಿಸುತ್ತಿರುವ ಅಪರೂಪದ ಕಲಾವಿದ ಕೆಸ್ತೂರು ಪುಟ್ಟಸ್ವಾಮಿ.
ಪುಟ್ಟಸ್ವಾಮಿ ಅಭಿಜಾತ ಹಾಡುಗಾರ, ಎಪ್ಪತ್ತರ ಹರೆಯದಲ್ಲೂ ಶಾರೀರಕ್ಕೆ ಹರೆಯದ ಹುರುಪು. ತಂದೆಯಿಂದ ಬಳುವಳಿಯಾಗಿ ಬಂದ ಕಲೆಯನ್ನು ಜತನದಿಂದ ಕಾಪಿಟ್ಟಿದ್ದಾರೆ. ಕಥೆ, ಹಾಡು, ನುಡಿಸಾಣಿಕೆಯಲ್ಲೂ ಸ್ವರ ಸಂಯೋಜಿಸುವ ಕಲೆ ಇವರಿಗೆ ಅನಾಯಾಸವಾಗಿ ಒಲಿದು ಬಂದಿದೆ. ಹಾಗಾಗಿ, ಮೊದಲ ಚರಣ ಮುಗಿಯುತ್ತಿದ್ದಂತೆ ಇದರ ಭಾವ ಮತ್ತು ವಾಚ್ಯಾರ್ಥಗಳನ್ನು ಹೇಳಿ ಭಕ್ತಿಸುಧೆ ಹರಿಸುವ ಮಾರ್ಗಗಳು ಇವರಿಗೆ ಕರಗತವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಹರಿಕಥೆ ಇಲ್ಲವೆ ಭಜನೆ ಕೇಳಿ ಕೃತಾರ್ಥರಾಗುವ ಮಂದಿ ಇನ್ನೂ ಇದ್ದಾರೆ. ಅಮಾವಾಸ್ಯೆ, ಪೌರ್ಣಮಿ, ಗೌರಿ, ಸಂಕ್ರಾಂತಿ ಮತ್ತು ಬೆಟ್ಟದ ಜಾತ್ರೋತ್ಸವಗಳಲ್ಲಿ ಹರಿನಾಮ ಸ್ಮರಣೆ, ಕಥಾ ಕೀರ್ಥನೆ. ಜನಪದ ಹಾಡು ದೈವದ ಸುತ್ತಲೇ ಸ್ಮರಿಸಲಾಗುತ್ತದೆ. ಹರಿಯ ಮಹತ್ವ ಮತ್ತು ಭಜನೆ ಮೂಲಕ ಧ್ಯಾನ ಸಿದ್ಧಿಸಿದಾಗ ಮನುಕುಲ ಒಳಿತಿನತ್ತ ಸಾಗಬೇಕು ಎಂಬುದನ್ನು ಕಥಾ ಪ್ರಸಂಗಗಳಲ್ಲಿ ತಿಳಿಸುತ್ತಾರೆ. ಇಂತಹ ಕಥಾ ಸಾಗರದಲ್ಲಿ ಮನುಷ್ಯನ ಕ್ರೂರತ್ವ ಮರೆಯಾಗಿ, ತಾತ್ವಿಕ ಚಿಂತನೆಗಳ ಸಾಕಾರ ಆಗುತ್ತದೆ. ಋಜು ಮಾರ್ಗದಲ್ಲಿ ಸಾಗಲು ಹರಿಕಥೆ ಧೀಕ್ಷೆಯಾಗುತ್ತದೆ ಎನ್ನುತ್ತಾರೆ ಪುಟ್ಟಸ್ವಾಮಿ.
ಗಣನಾಥನ ಸ್ವರಣೆ ಕಡ್ಡಾಯ:
‘ವರಗಳ ಕರುಣಿಸು ಗಣಪತಿಯೇ, ಶುಭಮಣಿ ಕರೆಯುವ ಗುಣ ನಿಧಿಯೇ..’ ಎಂಬ ಕೀರ್ತನೆ ಆರಂಭಿಸುವ ಅನೂಚಾನ ಸಂಸ್ಕೃತಿ ಇನ್ನೂ ಉಳಿದಿದೆ. ಕಥೆ ಓದುವುದು. ಆಸ್ವಾದಿಸುವುದು, ಕೀರ್ತನೆ ಆಲಿಸುವುದು, ಹಾಡುವುದು ಹರಿಕಥೆ ಭಾಗವಾಗಿದೆ. ದಾಸ ಪರಂಪರೆಯಿಂದ ರೂಪ ಪಡೆದರೂ ಶಾಸ್ತ್ರೋಕ್ತ ಕ್ರಮ ಮೀರಿದ ಶೈಲಿಯಲ್ಲಿ ಕಥೆಗಾರರು ಹರಿಕಥೆಗೆ ಹೊಸ ಸ್ಪರ್ಶ ಕಟ್ಟಿಕೊಡುತ್ತಾರೆ.
ನಿರೂಪಣೆಯಲ್ಲಿ ಹಾಸ್ಯ, ವಿನೋಧ, ನೀತಿ, ಮೌಲ್ಯಗಳನ್ನು ಬಿಟ್ಟುಕೊಡದೆ ಕೊನೆಯಲ್ಲಿ ಜ್ಞಾನೋಧಯ ಉಂಟುಮಾಡುವ ಚಮತ್ಕಾರ ಕಲೆಯಲ್ಲಿದೆ. ಜಾತಿ ಮತವನ್ನು ಮೀರಿ ಜನ ಕಥೆ ಓದಿಸಿ, ದೇವರನ್ನು ಸ್ಮರಿಸಿ ಪುನೀತರಾಗುತ್ತಾರೆ. ಆದರೆ, ಕಥೆ ಆರಂಭ ಮತ್ತು ಅಂತ್ಯ ಗಣನಾಥನ ಗುಣಗಾನದೊಂದಿಗೆ ಹಾಡಬೇಕು ಎನ್ನುತ್ತಾರೆ ಕಲಾವಿದರು.
ಸರಳ ಸಂಗೀತ ಪರಿಕರ
ಕೆ.ಪುಟ್ಟಸ್ವಾಮಿ ಹಾಡುತ್ತಾರೆ. ನಾದದಿಂದ ಹೊಮ್ಮಿದ ಪಲ್ಲವಿಯ ಅರ್ಥ ವಿವರಿಸುತ್ತಾರೆ. ತಂಡದ ಸದಸ್ಯರು ನುಡಿಸುವ ತಾಳಬದ್ದ ಗಗ್ಗರ ದಂಬಡಿ ಕಂಸಾಳೆಯ ನಾದ ವಾಣಿಯೂ ಕಥಾ ಕೀರ್ತನೆ ಜೊತೆ ಬೆರತು ಕಿವಿ ತುಂಬಿಕೊಳ್ಳುತ್ತದೆ. ಹರಿಕಥೆ ಕೇಳುವುದು ಕಾಲಕ್ಷೇಪದ ಭಾಗವಲ್ಲ. ದೈವವನ್ನು ತನುಮನಕ್ಕೆ ಮುಟ್ಟಿಸುವ ಕಥೆಗಾರ ನೋಡುಗರಲ್ಲೂ ದೈವಭಾವ ಸ್ಪುರಿಸಬೇಕು. ಹೊಸವಸ್ತ್ರ ಪಾಣಿಪಂಚೆ ಹಣೆಗೆ ವಿಭೂತಿ ನಡುವೆ ಗಂಧದ ಬೊಟ್ಟು ಕಿವಿಗೆ ಹೂ ಇಡಬೇಕು ಎಂದು ಹರಿಭಕ್ತಿಯ ಸ್ವರೂಪ ಧಿರಿಸಿನ ಸಂಗಡ ಮೇಳೈಸಿರುವುದನ್ನು ಅನುಭವದಿಂದ ಕಂಡುಕೊಂಡಿದ್ದಾರೆ ಕೆಸ್ತೂರು ಪುಟ್ಟಸ್ವಾಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.