ADVERTISEMENT

ಚಾಮರಾಜನಗರ: ಕನ್ನಡದ ಪೂಜಾರಿಯಿಂದ ಕನ್ನಡ ಮಂತ್ರೋಚ್ಚಾರಣೆ ಪಾಠ

ಕನ್ನಡದಲ್ಲಿ ಮಂತ್ರ ಪಠಣ: ಜಿಲ್ಲಾಡಳಿತದಿಂದ ಕಾರ್ಯಾಗಾರ ಆಯೋಜನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 14:22 IST
Last Updated 30 ನವೆಂಬರ್ 2020, 14:22 IST
ಹಿರೇಮಗಳೂರು ಕಣ್ಣನ್‌ ಅವರು ಅರ್ಚಕರಿಗೆ ಕನ್ನಡದಲ್ಲಿ ಮಂತ್ರ ಹೇಳುವ ತರಬೇತಿ ನೀಡಿದರು
ಹಿರೇಮಗಳೂರು ಕಣ್ಣನ್‌ ಅವರು ಅರ್ಚಕರಿಗೆ ಕನ್ನಡದಲ್ಲಿ ಮಂತ್ರ ಹೇಳುವ ತರಬೇತಿ ನೀಡಿದರು   

ಚಾಮರಾಜನಗರ: ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ಕನ್ನಡದಲ್ಲೇ ಮಂತ್ರ ಹೇಳಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವ ಸಲುವಾಗಿ ‘ಕನ್ನಡದ ಪೂಜಾರಿ’ ಎಂದೇ ಕರೆಸಿಕೊಳ್ಳುವ ಹಿರೇಮಗಳೂರು ಕಣ್ಣನ್‌ ಅವರು ಸೋಮವಾರಈ ದೇಗುಲಗಳ ಅರ್ಚಕರಿಗೆ ಕನ್ನಡ ಭಾಷೆಯಲ್ಲಿ ಮಂತ್ರ ಹೇಳುವ ತರಬೇತಿ ನೀಡಿದರು.

ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಕಣ್ಣನ್‌ ಅವರು, ದೇವಾಲಯಗಳಲ್ಲಿ ಪೂಜೆ, ಪ್ರಾರ್ಥನೆಯ ಸಂದರ್ಭದಲ್ಲಿ ಬಳಸಲಾಗುವ ಸಂಸ್ಕೃತ ಶ್ಲೋಕಗಳನ್ನು ಪಠಿಸಿ, ಅದಕ್ಕೆ ಪರ್ಯಾಯವಾಗಿ ಕನ್ನಡದಲ್ಲಿ ಏನು ಹೇಳಬಹುದು ಎಂಬುದನ್ನು ಶಿಷ್ಯರೊಂದಿಗೆ ಹೇಳಿ ತಿಳಿಸಿಕೊಟ್ಟರು.

ದೇವಾಲಯಗಳಲ್ಲಿ ಈಗ ಪಾಲಿಸಲಾಗುತ್ತಿರುವ ಆಚಾರ, ಸಂಪ್ರದಾಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಕನ್ನಡದಲ್ಲಿ ಮಂತ್ರ ಪಠಿಸಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಮಾರ್ಚ್‌ 6ರಂದು ಆದೇಶ ಹೊರಡಿಸಿದ್ದರು.

ADVERTISEMENT

ಅರ್ಚಕರ ಅಭಿಪ್ರಾಯವನ್ನು ಕೇಳಿದ್ದ ಸಂದರ್ಭದಲ್ಲಿ ಈ ಬಗ್ಗೆ ತರಬೇತಿ ನೀಡುವ ಅಗತ್ಯದ ಬಗ್ಗೆ ಅರ್ಚಕರು ಪ್ರಸ್ತಾಪಿಸಿದ್ದರು. ಆ ನಿಟ್ಟಿನಲ್ಲಿ ಹಿರೇಮಗಳೂರು ಕಣ್ಣನ್‌ ಅವರಿಂದ ತರಬೇತಿ ಕೊಡಿಸಲು ಜಿಲ್ಲಾಡಳಿತ ತೀರ್ಮಾನಿಸಿತ್ತು.

ಸೋಮವಾರ ನಡೆದ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ದೇವಾಲಯಗಳಲ್ಲಿ ಸಂಸ್ಕೃತ, ತಮಿಳು, ತೆಲುಗುಗಳಲ್ಲಿ ಮಂತ್ರ ಪಠಿಸುವ ಕ್ರಮ ಇದೆ. ಕನ್ನಡದಲ್ಲಿ ಇದ್ದರೆ ಭಕ್ತರಿಗೆ ಇನ್ನಷ್ಟು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಅರ್ಚಕರ ಜೊತೆ ಚರ್ಚಿಸಿ, ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಕನ್ನಡದಲ್ಲಿ ಪೂಜಾ ವಿಧಿ ವಿಧಾನಗಳನ್ನು ಮಾಡುವ ಪ್ರಯತ್ನ ಆರಂಭಿಸಲಾಗಿದೆ’ ಎಂದು ಹೇಳಿದರು.

‘ಈಗಿನ ಸಂಪ್ರದಾಯಗಳನ್ನು ಬದಲಿಸುವುದು ನಮ್ಮ ಉದ್ದೇಶ ಅಲ್ಲ. ಭಕ್ತರ ಒಳಿತಿಗಾಗಿ, ಸಮಸ್ಯೆ ಪರಿಹಾರಕ್ಕಾಗಿ ಪೂಜೆ, ಮಂತ್ರ ಘೋಷ ಮಾಡುವ ಪ್ರಕ್ರಿಯೆ ಕನ್ನಡದಲ್ಲೇ ನಡೆದರೆ ಭಕ್ತರ ಮನಸ್ಸಿಗೆ ಪರಿಣಾಮಕಾರಿಯಾಗಿ ತಲುಪುತ್ತದೆ. ಸಂಸ್ಕೃತವನ್ನು ಉಳಿಸಿಕೊಂಡು ಮೂಲ ಉದ್ದೇಶಕ್ಕೆ ಧಕ್ಕೆ ಬಾರದ ಹಾಗೇ ಮಾರ್ಗದರ್ಶನ ಮಾಡಿಸುವ ಉದ್ದೇಶದೊಂದಿಗೆ ಕಾರ್ಯಗಾರ ಆಯೋಜಿಸಲಾಗಿದೆ’ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಹಿರೇಮಗಳೂರು ಕಣ್ಣನ್‌ ಅವರು ಮಾತನಾಡಿ, ‘ಜಿಲ್ಲಾಡಳಿತ ಪ್ರಯತ್ನ ಶ್ಲಾಘನೀಯ. ನಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಕನ್ನಡ ಭಾಷೆ ಅನುಕೂಲವಾಗಲಿದೆ. ಯಾವ ಭಾಷೆಯಲ್ಲಿ ಪೂಜೆ ಮಾಡಿದರೂ ಸರಿಯೇ. ಭಾವನೆ ಪರಿಶುದ್ಧವಾಗಿರಬೇಕು’ ಎಂದರು.

‘ದೇವಾಲಯಗಳಲ್ಲಿ ಸಂಸ್ಕೃತ ಬಿಟ್ಟು, ಕನ್ನಡದಲ್ಲಿಯೇ ಪೂಜೆ ಮಾಡುವುದು ಕಷ್ಟವೇನಲ್ಲ. ತರಬೇತಿ ಪಡೆದರೆ ಸಾಕು. ಮಾತೃಭಾಷೆ ಬಳಸುವುದರಿಂದ ನಮ್ಮ ಸಂಸ್ಕೃತಿ, ಪೂಜಾ ವಿಧಾನಗಳು ಜನರಿಗೆ ಸುಲಭವಾಗಿ ಅರ್ಥವಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.

ಕಾರ್ಯಾಗಾರದಲ್ಲಿ 150ಕ್ಕೂ ಹೆಚ್ಚು ಅರ್ಚಕರು ಭಾಗವಹಿಸಿದ್ದರು. ಕನ್ನಡದಲ್ಲಿ ಪೂಜಾ ವಿಧಿವಿಧಾನಗಳನ್ನು ಮಾಡುವ ಬಗ್ಗೆ ಜಿಲ್ಲಾಡಳಿತ ಕಿರು ಹೊತ್ತಗೆಯನ್ನು ಪ್ರಕಟಿಸಿದ್ದು, ಕಾರ್ಯಾಗಾರದಲ್ಲಿ ಎಲ್ಲರಿಗೂ ವಿತರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ.ಎಸ್.ವಿನಯ್, ಸಾಹಿತಿ ಕೆ.ವೆಂಕಟರಾಜು, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಾಲಯದ ಅರ್ಚಕರಾದ ಗೋಪಿ, ಚಾಮರಾಜೇಶ್ವರ ದೇವಸ್ಥಾನದ ಅರ್ಚಕ ರಾಮಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.