ADVERTISEMENT

ಚಾಮರಾಜನಗರ: ಜಲಾಶಯದಲ್ಲಿ ಮುಳುಗಿ ವಿದ್ಯಾರ್ಥಿನಿ ಸಾವು, ಸ್ನೇಹಿತೆ ಪಾರು

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 16:47 IST
Last Updated 19 ಜನವರಿ 2022, 16:47 IST
ಚಿಕ್ಕಹೊಳೆ ಜಲಾಶಯ
ಚಿಕ್ಕಹೊಳೆ ಜಲಾಶಯ   

ಚಾಮರಾಜನಗರ: ತಾಲ್ಲೂಕಿನ ಚಿಕ್ಕಹೊಳೆ ಜಲಾಶಯದಲ್ಲಿ ಮುಳುಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟು ಆಕೆಯ ಸ್ನೇಹಿತೆ ಪಾರಾದ ಘಟನೆ ಬುಧವಾರ ನಡೆದಿದೆ.

ಚಂದುಕಟ್ಟೆ ಮೋಳೆಯ ಕುಮಾರ್‌ ಎಂಬುವವರ ಮಗಳು ಸೌಂದರ್ಯ (15) ಮೃತಪಟ್ಟವಳು. ಆಕೆಯ ಸ್ನೇಹಿತೆ, ದೊಡ್ಡಮೋಳೆಯ ರೂಪಾ (15) ಪಾರಾಗಿದ್ದಾಳೆ. ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಇಬ್ಬರೂ ಹರದನಹಳ್ಳಿಯ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರು. ಬುಧವಾರ ಶಾಲೆಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದ ಇಬ್ಬರೂಶಾಲೆಗೆ ಹೋಗಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಚಿಕ್ಕಹೊಳೆ ಜಲಾಶಯಕ್ಕೆ ತೆರಳಿದ್ದರು. ಒಂದು ಬದಿಯಲ್ಲಿ ಜಲಾಶಯಕ್ಕೆ ಇಳಿದಿದ್ದ ವಿದ್ಯಾರ್ಥಿನಿಯರು ನೀರಿನಲ್ಲಿ 25 ಮೀಟರ್‌ನಷ್ಟು ಕ್ರಮಿಸಿದ್ದರು. ಈ ಸಂದರ್ಭದಲ್ಲಿ ಸೌಂದರ್ಯ ಆಯತಪ್ಪಿ ಆಳಕ್ಕೆ ಇಳಿದು ಮುಳುಗಿದಳು. ಆಕೆಯೊಂದಿಗೆ ನೀರಿನಲ್ಲಿದ್ದ ರೂಪಾಳನ್ನು ಸ್ಥಳೀಯರು ರಕ್ಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

’ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಘಟನೆ ನಡೆದಿರುವ ಸಾಧ್ಯತೆ ಇದೆ. ನಮಗೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿ, ಸೌಂದರ್ಯಳ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದೆವು‘ ಎಂದು ಚಾಮರಾಜನಗರ ಪೂರ್ವ ಠಾಣೆಯ ಇನ್‌ಸ್ಪೆಕ್ಟರ್‌ ಆನಂದ್‌ ಅವರು ’ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ಜಲಾಶಯ ವೀಕ್ಷಣೆಗಾಗಿ ಇಬ್ಬರೂ ಜಲಾಶಯಕ್ಕೆ ತೆರಳಿದ್ದರು ಎಂದು ಗೊತ್ತಾಗಿದೆ. ನೀರಿಗೆ ಇಳಿದ ಕಾರಣ ತಿಳಿದು ಬಂದಿಲ್ಲ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.