
ಯಳಂದೂರು: ತಾಲ್ಲೂಕಿನ ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದೆ.
ಶೇ 100 ಫಲಿತಾಂಶ ಗುರಿ ನಿಟ್ಟಿನಲ್ಲಿ 29 ಅಂಶಗಳ ಕಾರ್ಯಸೂಚಿಗಳನ್ನು ಜಾರಿಗೆ ತಂದಿದ್ದು, ಮಕ್ಕಳು ಮತ್ತು ಪೋಷಕರ ಸಹಕಾರದಿಂದ ರಾತ್ರಿ ತರಗತಿಗಳನ್ನು ನಡೆಸಲಾಗುತ್ತದೆ. ಜೊತೆಗೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಪೋನ್ ಇನ್ ಕಾರ್ಯಕ್ರಮ ಮತ್ತು ಪ್ರೇರಣಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಹಂತ ಹಂತವಾಗಿ ಫಲಿತಾಂಶ ಸುಧಾರಣೆಗೆ ಮುಂದಾಗಿದೆ.
ತಾಲ್ಲೂಕಿನಲ್ಲಿ 7 ಸರ್ಕಾರಿ ಪ್ರೌಢಶಾಲೆ, 7 ಅನುದಾನಿತ, 2 ವಸತಿಯುತ ಹಾಗೂ 2 ಖಾಸಗಿ ಶಾಲೆಗಳಿದ್ದು ಬಹುತೇಕ ಸರ್ಕಾರಿ ಶಾಲೆಗಳಲ್ಲಿ ರಾತ್ರಿ 8ರವರೆಗೂ ವಿಶೇಷ ತರಗತಿ ನಡೆಯುತ್ತಿದ್ದು ನುರಿತ ಶಿಕ್ಷಕರು ಬೋಧಿಸುತ್ತಿದ್ದಾರೆ. ತಾಲ್ಲೂಕಿನಲ್ಲಿರುವ 869 ವಿದ್ಯಾರ್ಥಿಗಳನ್ನು ಮಾ.18ರಂದು ನಡೆಯುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತಿದೆ.
‘ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಡಿಸೆಂಬರ್‌ನಿಂದಲೇ ಮುಂಜಾನೆ ಮತ್ತು ಸಂಜೆ ವೇಳೆಯ ಕಲಿಕೆ ನಡೆಯುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಆದ್ಯತೆ ನೀಡಲಾಗುತ್ತಿದ್ದು ಸುಲಭವಾಗ ಉತ್ತೀರ್ಣವಾಗಲು ಅನುವಾಗುವಂತೆ ಸರಳ ಪ್ರಶ್ನೆಗಳಿಗೆ ಉತ್ತರಿಸುವ ಬಗೆಯನ್ನು ಕಲಿಸಲಾಗುತ್ತದೆ’ ಎನ್ನುತ್ತಾರೆ ಇಸಿಒ ಕುಮಾರ್.
‘ಪಠ್ಯಾಧಾರಿತ ಮೌಲ್ಯಮಾಪನ, ಬೆಳಿಗ್ಗೆ 9ರಿಂದ 10ರವರೆಗೆ ವಿಶೇಷ ತರಗತಿ, ಸಂಜೆ 5.30ರಿಂದ 6.30ರ ಗುಂಪು ಅಧ್ಯಯನ, ಪ್ರತಿ ಪಾಠಕ್ಕೂ ಘಟಕ ಪರೀಕ್ಷೆ ನಡೆಸಲಾಗುತ್ತಿದೆ. ಜನವರಿ ಆರಂಭದಲ್ಲೇ ಪಠ್ಯ ಬೋಧನೆ ಪೂರ್ಣಗೊಳಿಸಲಾಗಿದೆ. ಪರೀಕ್ಷೆಗೆ ಹಾಜರಾಗುವವವರೆಗೂ ವಿಶೇಷ ಕೋಚಿಂಗ್ ಹಾಗೂ ಮುಂಜಾನೆ ಓದಲು ಮಕ್ಕಳಿಗೆ ‘ಫೋನ್ ರಿಂಗ್’ (ವೇಕಪ್ ಕಾಲ್) ಮಾಡುವ ಜವಾಬ್ಧಾರಿಯನ್ನು ಆಯಾ ತರಗತಿಯ ಶಿಕ್ಷಕರಿಗೆ ನೀಡಲಾಗಿದೆ’ ಎಂದು ಬಿಇಒ ಮಾರಯ್ಯ ಹೇಳಿದರು.
ಅಕ್ಟೋಬರ್ ನಂತರ 4 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಕ್ಕಳಿಗೆ ನೀಡಿ ಬಿಡಿಸಲು ಸೂಚಿಸಲಾಗಿದೆ. ಈಗಾಗಲೇ 2 ಪೂರ್ವ ಸಿದ್ಧತಾ ಪರೀಕ್ಷೆಗಳು ಮುಗಿದಿದ್ದು ಫೆ.23 ರಿಂದ 28ರವರೆಗೆ ಮೂರನೇ ಹಂತದ ಪರೀಕ್ಷೆ ನಡೆಯಲಿದೆ. ಇದರಲ್ಲಿ ಅನುತ್ತೀರ್ಣರಾಗುವ ಮಕ್ಕಳು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪೂರಕವಾದ ಪ್ರಶ್ನೆ ಪತ್ರಿಕೆ ನೀಡಲಾಗುವುದು. ಶೈಕ್ಷಣಿಕ ದತ್ತು ಯೋಜನೆಯಲ್ಲಿ ಅಧಿಕಾರಿಗಳು ಮತ್ತು ಶಿಕ್ಷಕರು ಮಕ್ಕಳನ್ನು ದತ್ತು ಪಡೆದು ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬಲಿದ್ದಾರೆ ಎಂದರು.
ಪೋಷಕರಿಗೆ ಸಲಹೆ:
ಶಿಕ್ಷಕರು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿನೀಡಿ ಕಲಿಕೆಯ ಬಗ್ಗೆ ಪೋಷಕರಿಂದ ಮಾಹಿತಿ ಸಂಗ್ರಹಿಸಿ, ಓದಲು ಪೂರಕ ವಾತಾವರಣ ನಿರ್ಮಿಸುವಂತೆ ತಿಳಿ ಹೇಳಲಿದ್ದಾರೆ. ಮೊಬೈಲ್, ಟಿವಿ ಹೆಚ್ಚಾಗಿ ನೋಡದಂತೆ ಸಲಹೆ ನೀಡುತ್ತಿದೆ ಎಂದು ಹೊನ್ನೂರಿನ ಡಾ.ಭೀಮ್ ರಾವ್ ರಾಮ್ ಜೀ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರಮೋದ್ ಚಂದ್ರನ್ ಹೇಳಿದರು.
ಶೇ 100 ಫಲಿತಾಂಶ ಗುರಿ: ಡಿಡಿಪಿಐ
‘ಈ ಬಾರಿ ಶೇ 100 ಫಲಿತಾಂಶ ಗುರಿ ಹೊಂದಿದ್ದು ಪೂರಕವಾಗಿ ಮುಖ್ಯ ಶಿಕ್ಷಕರ ಸಭೆ ಹಾಗೂ ತರಬೇತಿ ನೀಡಲಾಗುತ್ತಿದೆ. ಮೂರು ಪೂರ್ವಸಿದ್ಧತಾ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಕಡಿಮೆ ಫಲಿತಾಂಶ ದಾಖಲಿಸುವ ಶಾಲೆಗಳನ್ನು ಗುರುತಿಸಿ ಉತ್ತೀರ್ಣ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎನ್ನುತ್ತಾರೆ ಡಿಡಿಪಿಐ ಚಂದ್ರಪಾಟೀಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.