ADVERTISEMENT

ಗುಂಡ್ಲುಪೇಟೆ: ಉದಯೋನ್ಮುಖ ಜಾನಪದ ಕಲಾವಿದ ಕಿರಣ್‌

ಪ‍ದವಿ ವ್ಯಾಸಂಗದ ಜೊತೆಗೆ ಕಲೆಗಳ ಪ್ರದರ್ಶನ, ಬೋಧಕರ ಪ್ರೋತ್ಸಾಹ

ಮಲ್ಲೇಶ ಎಂ.
Published 28 ಜನವರಿ 2020, 19:58 IST
Last Updated 28 ಜನವರಿ 2020, 19:58 IST
ಡೊಳ್ಳು ಕುಣಿತದ ವೇಷದಲ್ಲಿ ಕಿರಣ್‌
ಡೊಳ್ಳು ಕುಣಿತದ ವೇಷದಲ್ಲಿ ಕಿರಣ್‌   

ಗುಂಡ್ಲುಪೇಟೆ: ತಾಲ್ಲೂಕಿನ ಶಿವಪುರ ಗ್ರಾಮದ ಯುವಕ ಕಿರಣ್‌ ಎಂಬುವವರುಡೊಳ್ಳು ಕುಣಿತದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ.

ಬಿ.ಕಾಂ ಓದುತ್ತಿರುವ ಕಿರಣ್‌, ಶಿಕ್ಷಣದ ಜೊತೆ ಜೊತೆಗೆ ಜಾನಪದ ಕಲಾವಿದರಾಗಿ ಬೆಳೆಯುತ್ತಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತ ಈಗಾಗಲೇ ದಕ್ಷಿಣ ವಲಯ ಸಾಂಸ್ಕೃತಿಕ ಹಬ್ಬ, ಯುವಜನ ಮೇಳ, ಯುವಜನೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಡೊಳ್ಳು ಕುಣಿತ ಜೊತೆಗೆ ಕಂಸಾಳೆ, ಪಟ ಕುಣಿತ, ವೀರಗಾಸೆ, ಪೂಜಾಕುಣಿತಗಳಲ್ಲೂ ತಮ್ಮದೇ ಛಾಪನ್ನು ಮೂಡಿಸುತ್ತಿದ್ದಾರೆ.

ADVERTISEMENT

2016-17‌ರಲ್ಲಿ ಚೆನ್ನೈನಲ್ಲಿ ನಡೆದ ದಕ್ಷಿಣ ವಲಯಮಟ್ಟದ ಅಂತರ ವಿಶ್ವವಿದ್ಯಾಲಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಗಳಿಸಿದ್ದಾರೆ.2017-18ರಲ್ಲೂ ಜಾರ್ಖಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯಮಟ್ಟದ ವಿಶ್ವವಿದ್ಯಾಲಯಗಳ ಸಾಂಸ್ಕೃತಿಕ ಮತ್ತು ಜಾನಪದ ನೃತ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಜತೆಗೆ, ವಿವಿಧ ಕಾಲೇಜು ಮತ್ತು ಶಾಲೆಯ ಮಕ್ಕಳಿಗೂ ತರಬೇತಿಯನ್ನು ನೀಡುತ್ತಿದ್ದಾರೆ.

ಮೈಸೂರಿನ ವಿಶ್ವವಿಖ್ಯಾತ ದಸರಾ ಮತ್ತು ಯುವ ದಸರಾ ಕಾರ್ಯಕ್ರಮದಲ್ಲೂ ಕಿರಣ್‌ ಹೆಜ್ಜೆ ಹಾಕಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಜಾನಪದ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಡಾ.ಸುಂದರೇಶ್ ಅವರ ಗರಡಿಯಲ್ಲಿ ಕಿರಣ್‌ ಪಳಗಿದ್ದಾರೆ.

‘ನಮ್ಮ ಮನೆಯಲ್ಲಿ ಯಾರೂ ಕಲಾವಿದರಿಲ್ಲ. ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದಾಗಿನಿಂದ ಜಾನಪದ ನೃತ್ಯ ಮಾಡುತ್ತಿದ್ದವರನ್ನು ನೋಡಿ ಆಸಕ್ತಿ ಬೆಳೆಯಿತು. ಬಳಿಕ ದೇಸಿರಂಗದಲ್ಲೂ ಕೆಲ ನೃತ್ಯ ಕಲಿತೆ. ನಂತರ ಕಾಲೇಜು ತಂಡದಲ್ಲಿ ಸೇರಿ ಈ ರೀತಿಯ ಸಾಧನೆ ಸಾಧ್ಯವಾಯಿತು. ಕಾಲೇಜು ಪ್ರಾಧ್ಯಾಪಕರ ಪ್ರೇರಣೆ ಮತ್ತು ಸ್ನೇಹಿತರು ಉತ್ತೇಜನ ನೀಡಿದ್ದರಿಂದ ಅಲ್ಪಸ್ವಲ್ಪ ನೃತ್ಯ ಕಲಿಯುವಂತಾಯಿತು’ ಎಂದು ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಾನಪದ ಕಲೆ ನಶಿಸಿ ಹೋಗುತ್ತಿದೆ. ಇದನ್ನು ನಾವು ಕಲಿತು ಬೇರೆಯವರಿಗೆ ಕಲಿಸತೊಡಗಿ ಉಳಿಸುವ ಮತ್ತು ಮುಂದುವರಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.